ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಾಯಕ ಚೌತಿಗೂ ಕರಿನೆರಳು, ಸಂಕಷ್ಟಕ್ಕೆ ಸಿಲುಕಿದ ಮೂರ್ತಿ ತಯಾರಕರು

ಗೌರಿ, ಗಣೇಶ ಖರೀದಿಗೆ ಬೇಡಿಕೆ ಇಳಿಕೆ
Last Updated 6 ಸೆಪ್ಟೆಂಬರ್ 2021, 8:27 IST
ಅಕ್ಷರ ಗಾತ್ರ

ಹಾಸನ: ಗಣೇಶೋತ್ಸವ ಸಂಭ್ರಮಕ್ಕೆ ಈ ಬಾರಿಯೂ ಕೋವಿಡ್‌ ತಣ್ಣೀರು ಎರಚಿದ್ದು, ಮೂರ್ತಿ ತಯಾರಿಸುವ ಕಲಾವಿದರು, ಕಾರ್ಮಿಕರು ಮತ್ತು ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೋವಿಡ್‌ ಮೊದಲ ಅಲೆಯಿಂದಾಗಿ ಕಳೆದ ವರ್ಷ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಗಣೇಶೋತ್ಸವ ಮೇಲೆ ನಿರ್ಬಂಧಗಳ ಕರಿ ನೆರಳು ಬಿದ್ದಿರುವುದರಿಂದ, ಅದನ್ನೇ ನಂಬಿಕೊಂಡಿದ್ದ ಹಲವು ವರ್ಗದವರ ಬದುಕು ಕಷ್ಟದಲ್ಲಿದೆ.

ಸಾರ್ವಜನಿಕವಾಗಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಿಷೇಧಿಸಿ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಮನೆಗಳು ಹಾಗೂ ದೇವಸ್ಥಾನಗಳಿಗೆ ಸೀಮಿತಗೊಳಿಸಬೇಕೆಂಬ ಷರತ್ತು ವಿಧಿಸಿದೆ. ಇದರಿಂದ ಶಾಮಿಯಾನ, ಹೂವಿನ ಅಲಂಕಾರ, ವಾದ್ಯ ವೃಂದ, ಜನಪದ ಕಲಾವಿದರು, ಸಂಗೀತ ಕಲಾವಿದರು ಸೇರಿದಂತೆ ಅನೇಕ ವರ್ಗದ ಕಾರ್ಮಿಕರು ಮತ್ತು ಕಲಾವಿದರಿಗೆ ಸಂಕಷ್ಟ ತಂದೊಡ್ಡಿದೆ. ಬಟ್ಟೆ, ಪಟಾಕಿ, ಲೈಟಿಂಗ್‌ ಮತ್ತು ಆಲಂಕಾರಿಕ ವಸ್ತುಗಳ ವ್ಯಾಪಾರಿಗಳು ಕೂಡ ನಷ್ಟ ಅನುಭವಿಸುವಂತಾಗಿದೆ.

ಊರಿನ ಪ್ರಮುಖ ವೃತ್ತದಿಂದ ಹಿಡಿದು ಬೀದಿ, ಬೀದಿಯಲ್ಲೂ, ಹಳ್ಳಿಗಳಲ್ಲೂ ಗಣೇಶನನ್ನು ಪ್ರತಿಷ್ಠಾಪಿಸಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ. ಸಾರ್ವಜನಿಕವಾಗಿ ಜಿಲ್ಲೆಯಾದ್ಯಂತ ಸಾವಿರಾರು ಗೌರಿ–ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗು
ತ್ತಿತ್ತು. ಹಬ್ಬಕ್ಕಾಗಿ ಹೊಸ ಬಟ್ಟೆಯಿಂದ ಹಿಡಿದು ಕೋಟಿಗಟ್ಟಲೆ ವ್ಯವಹಾರದ ಮೂಲಕ ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ನಾಂದಿಯಾಗುತ್ತಿತ್ತು.

ಮೂರ್ತಿಗಳ ತಯಾರಿಕೆಯ ವೃತ್ತಿಯನ್ನೇ ನಂಬಿಕೊಂಡಿರುವ ನೂರಾರು ಕಲಾವಿದರು ಹಾಗೂ ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸಾಕಷ್ಟು ಬಂಡವಾಳ ಹಾಕಿಕೊಂಡು ಸ್ವಲ್ಪವಾದರೂ ಲಾಭದ ನಿರೀಕ್ಷೆಯಲ್ಲಿದ್ದ ಕಲಾವಿದರಿಗೆ ನಿರಾಸೆಯಾಗಿದೆ.

ಮೂರ್ತಿ ತಯಾರಿಕೆಗೆ ಸಮಸ್ಯೆಗಳು ಕಾಡುತ್ತಿವೆ. ಪೆಟ್ರೋಲ್‌, ಡೀಸೆಲ್ ದರ ಏರಿಕೆ ಪರಿಣಾಮ ಟ್ರಾಕ್ಟರ್‌ ಮಣ್ಣು ₹4 ಸಾವಿರದಿಂದ ₹8 ಸಾವಿರಕ್ಕೆ ಏರಿದೆ. ಜೆಸಿಬಿ ಬಾಡಿಗೆ ಹೆಚ್ಚಿದೆ.ಕೆರೆಯಲ್ಲಿ ನೀರು ತುಂಬಿ ಮಣ್ಣು ತೆಗೆಯಲಾಗುತ್ತಿಲ್ಲ. ಕೂಲಿ ಕಾರ್ಮಿಕರು ಸಿಗುತ್ತಿಲ್ಲ.

‘ಈ ವರ್ಷ ಮನೆಯಲ್ಲಿ ಇಟ್ಟು ಪೂಜಿಸುವಂತಹ ಚಿಕ್ಕ ಗಣೇಶ ಮೂರ್ತಿಗಳನ್ನು ಮಾತ್ರ ತಯಾರಿಸಲಾಗಿದೆ. ಕೋವಿಡ್‌ಗೂ ಮೊದಲು ಹಬ್ಬಕ್ಕೆ 20 ದಿನ ಇರುವಾಗಲೇ ವಿವಿಧ ಬಗೆಯ ಗಣೇಶ ಮೂರ್ತಿಗಳನ್ನು ತಯಾರಿಸುವಂತೆ ಮುಂಗಡ ಹಣ ಪಾವತಿಸುತ್ತಿದ್ದರು. ಆದರೆ, ಎರಡು ವರ್ಷದಿಂದ ಯಾರೂ ಮುಂಗಡ ನೀಡುತ್ತಿಲ್ಲ. ಕಳೆದ ವರ್ಷ ತಯಾರಿಸಿದ್ದ ಮೂರ್ತಿಗಳೇ ಮಾರಾಟವಾಗದೇ ಉಳಿದಿವೆ’ ಎಂದು ದಶಕಗಳಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ನಿರತರಾಗಿರುವ ಚಿಕ್ಕಗರಡಿಯ ವಿಶ್ವನಾಥ್‌ ಬೇಸರ ವ್ಯಕ್ತಪಡಿಸಿದರು.

‘ನಗರದಲ್ಲಿ 8 ರಿಂದ 10 ಜನ ಗಣೇಶ ಮೂರ್ತಿ ತಯಾರಕರಿದ್ದಾರೆ. 50 ವರ್ಷಗಳಿಂದೂ ಮೂರ್ತಿ ತಯಾರಿಸುತ್ತಿದ್ದೇನೆ. ಪರಿಸರ ಸ್ನೇಹಿ ಮೂರ್ತಿ ತಯಾರಿಸುವವರ ಸಂಖ್ಯೆ ಕಡಿಮೆ. ಹೊರ ಜಿಲ್ಲೆಗಳಿಂದ ಪಿಒಪಿ ಗಣೇಶ ಮೂರ್ತಿಗಳು ಬರುತ್ತಿವೆ’ ಎಂದು ಹೇಳಿದರು.

ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುತ್ತಿದ್ದ ಗೌರಿ, ಗಣೇಶ ಮೂರ್ತಿಗಳಿಗೆ ಶೇ 40ರಷ್ಟು ಬೇಡಿಕೆ ಕ್ಷೀಣಿಸಿದೆ. ಈ ವೃತ್ತಿ ನೆಚ್ಚಿಕೊಂಡವ ಸ್ಥಿತಿ ಶೋಚನೀಯವಾಗಿದೆ. ಕೋವಿಡ್‌ ಮಾರ್ಗಸೂಚಿ ಪ್ರಕಾರ ಗೌರಿ, ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಬೇಕು ಎಂದು ಗಣೇಶ ಮೂರ್ತಿ ತಯಾರಕ ಸಂತೋಷ್‌ ಆಗ್ರಹಿಸಿದರು.

ಪ್ರಜಾವಾಣಿ ತಂಡ:ಕೆ.ಎಸ್‌.ಸುನಿಲ್‌, ಜೆ.ಎಸ್‌.ಮಹೇಶ್‌, ಹಿ.ಕೃ.ಚಂದ್ರು, ಜೆ.ಆರ್‌.ರಂಗನಾಥ್‌, ಮಲ್ಲೇಶ್‌. ಸಿದ್ದರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT