ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಸಾವಿರ ಮಾಜಿ ಯೋಧರಿಗೆ ಭೂಮಿ ನೀಡಲು ಒತ್ತಾಯ

ನಿವೃತ್ತ ತಹಶೀಲ್ದಾರ್‌ ಅಣ್ಣೇಗೌಡ ವಿರುದ್ಧ ಮಾಜಿ ಸೈನಿಕರ ಸಂಘ ಆಕ್ರೋಶ
Last Updated 3 ಮಾರ್ಚ್ 2021, 13:46 IST
ಅಕ್ಷರ ಗಾತ್ರ

ಹಾಸನ: ‌ಮೀಸಲಿಟ್ಟಿರುವ 9 ಸಾವಿರ ಎಕರೆ ಭೂಮಿಯನ್ನು ಜಿಲ್ಲೆಯ ಎರಡು ಸಾವಿರ ಮಾಜಿ ಸೈನಿಕರಿಗೆ ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಮಾಜಿ ಸೈನಿಕರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜು ಒತ್ತಾಯಿಸಿದರು.

ಕುವೆಂಪು ನಗರದ ಫೀಲ್ಡ್‌ ಮಾರ್ಷಲ್‌ ಕೆ.ಎಂ ಕಾರ್ಯಪ್ಪ ಉದ್ಯಾನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25 ವರ್ಷಗಳಿಂದ ಮಾಜಿ ಸೈನಿಕರು ಜಮೀನಿಗಾಗಿ ಹೋರಾಟ ಮಾಡುತ್ತಿದ್ದರೂ ಈವರೆಗೂ ಒಬ್ಬರಿಗೂ ಭೂಮಿ ಮಂಜೂರಾಗಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ 200 ಕಡತಗಳಿಗೂ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘದ ಗೌರವಾಧ್ಯಕ್ಷ ದೊರೆರಾಜು ಮಾತನಾಡಿ, ಸೈನಿಕರು ಹುತಾತ್ಮರಾದಾಗ ಅಂತ್ಯಸಂಸ್ಕಾರದ ವರೆಗೆ ಮಾತ್ರ ಜನ, ರಾಜಕಾರಣಿಗಳು, ಅಧಿಕಾರಿಗಳು ಇರುತ್ತಾರೆ. ಬಳಿಕ ಮಾಜಿ ಸೈನಿಕರ ಮತ್ತು ಅವರ ಕುಟುಂಬದ ಸಮಸ್ಯೆಗಳನ್ನು ಕೇಳಲು ಯಾರೂ ಬರುವುದಿಲ್ಲ. ಸೌಲಭ್ಯಗಳಿಗೆ ಕಚೇರಿ ಅಲೆಯಬೇಕಿದೆ. ಬಹುತೇಕ ಕಚೇರಿಗಳಲ್ಲಿ ನೌಕರರು ದೇಶಕ್ಕಾಗಿ ಸೇವೆ ಸಲ್ಲಿಸಿದ ಮಾಜಿ ಸೈನಿಕರಿಗೆ ಕನಿಷ್ಟ ಗೌರವ ಸಹ ನೀಡುವುದಿಲ್ಲ ಎಂದು
ಹೇಳಿದರು.

‘ಕೆಲ ದಿನಗಳ ಹಿಂದೆ ನಿವೃತ್ತ ತಹಶೀಲ್ದಾರ್‌ ಅಣ್ಣೇಗೌಡ ಅವರು ಮಾಜಿ ಸೈನಿಕರು ಭೂಮಿ ಕೇಳುವುದೇ ತಪ್ಪು ಎಂಬ ರೀತಿ ಮಾತನಾಡಿದ್ದಾರೆ. ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವದಾಖಲೆಗಳು ಯಾರು ನೀಡಿದರು? ಇಬ್ಬರು ಅಧಿಕಾರಿಗಳ ವಿರುದ್ಧವೇ ಏಕೆ ಆರೋಪಮಾಡಿದ್ದಾರೆ? ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಅಧಿಕಾರಿಗಳು ಮಾಜಿ ಸೈನಿಕರ ಕೋಟಾದಡಿ ಭೂಮಿಗೆ ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳು ತಪ್ಪು ಮಾಡಿದ್ದರೆ ನ್ಯಾಯಾಲಯದ ಮುಂದೆ
ಹೋಗಬೇಕಿತ್ತು. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಮಾಜಿ ಸೈನಿಕರ ತೇಜೋವಧೆ ಮಾಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಒಂದು ಸಾವಿರ ಸೈನಿಕರು ಪ್ರಸ್ತುತ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2 ಸಾವಿರ ನಿವೃತ್ತ ಸೈನಿಕರಿದ್ದಾರೆ. ಮಾಜಿ ಸೈನಿಕರಿಗೆ ಮೀಸಲಿಟ್ಟಿರುವ ಭೂಮಿಯನ್ನು ಶೀಘ್ರವೇ ಹಂಚಿಕೆ ಮಾಡಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಗ್ರೂಪ್‌ ಕ್ಯಾಪ‍್ಟನ್‌ ಎಂ.ಜಿ. ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT