ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಬೀಳುವ ಭಯ: ಜಗುಲಿ ಮೇಲೆಯೇ ಪಾಠ

ಮಳೆಯಿಂದಾಗಿ ಶಿಥಿಲಗೊಂಡ ಪಡುವಳಲು ಸರ್ಕಾರಿ ಶಾಲೆ ಕಟ್ಟಡ
Last Updated 4 ಡಿಸೆಂಬರ್ 2019, 12:05 IST
ಅಕ್ಷರ ಗಾತ್ರ

ಬೇಲೂರು: ಸೋರುವ ಕಟ್ಟಡ, ಮಳೆ ನೀರಿಗೆ ನೆನೆದ ಗೋಡೆಗಳು, ಕಟ್ಟಡ ಕುಸಿಯುವ ಭೀತಿಯಿಂದ ಶಾಲೆಯ ಹೊರಗೆ ಕುಳಿತುಕೊಳ್ಳುವ ಮಕ್ಕಳು, ಕಟ್ಟಡದೊಳಕ್ಕೆ ನೀರು ಸೋರದಂತೆ ಹೆಂಚುಗಳಿಗೆ ಪ್ಲಾಸ್ಟಿಕ್‌ ಕವರ್‌ನ ಹೊದಿಕೆ, ಭಯದಲ್ಲಿಯೇ ಪಾಠ ಕೇಳುವ ಮಕ್ಕಳು, ಮಳೆ ನಿಲ್ಲುವವರೆಗೆ ಶಾಲೆಗೆ ಹೋಗಬೇಡಿ ಎನ್ನುವ ಪೋಷಕರು.

ಇದು ಈ ತಾಲ್ಲೂಕಿನ ಪಡುವಳಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ.

ಬಿಕ್ಕೋಡು ಹೋಬಳಿ ಪಡುವಳಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 80 ಮಕ್ಕಳು ಓದುತ್ತಿದ್ದಾರೆ. ಪಡುವಳಲು ಸುತ್ತಮುತ್ತಲಿನ ಗ್ರಾಮಗಳ ಮಕ್ಕಳು ಈ ಶಾಲೆಗೆ ಬರುತ್ತಾರೆ. ಆದರೆ, ಶಾಲೆಯ ಕಟ್ಟಡದ ದುಸ್ಥಿತಿಯಿಂದಾಗಿ ಪ್ರಾಣ ಭಯದಲ್ಲಿಯೇ ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಸಕರು ಜನಪ್ರತಿನಿಧಿಗಳು ಶಾಲಾ ಕಟ್ಟಡದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಕ್ಕೆ ಪೋಷಕರು ಆಗಾಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆಯ ನಾಲ್ಕು ಕೊಠಡಿಗಳ ಪೈಕಿ ಎರಡು ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿವೆ. ಒಂದು ಕೊಠಡಿಯನ್ನು ಕರ್ನಾಟಕ ಪಬ್ಲಿಕ್‌ ಶಾಲೆಗೆ ಮತ್ತೊಂದು ಕೊಠಡಿಯನ್ನು ಪಶುವೈದ್ಯ ಆಸ್ಪತ್ರೆಗೆ ನೀಡಲಾಗಿದೆ. ಇರುವ ಎರಡು ಕೊಠಡಿಗಳಲ್ಲಿಯೇ 80 ಮಕ್ಕಳಿಗೆ ಪಾಠ ನಡೆಯುತ್ತಿದೆ. ಆದರೆ, ಆ ಎರಡು ಕೊಠಡಿಗಳು ಶಿಥಿಲಗೊಂಡಿವೆ. ಮಳೆ ಬಂತೆಂದರೆ ಪೋಷಕರು, ಶಿಕ್ಷಕರು ಮತ್ತು ಮಕ್ಕಳಿಗೆ ಭಯ ಕಾಡಲಾರಂಭಿಸುತ್ತದೆ.

ಮಣ್ಣಿನಿಂದ ನಿರ್ಮಿಸಿರುವ ಗೋಡೆಗಳು ಮಳೆಯಿಂದ ತೊಯ್ದು ಹೋಗುತ್ತವೆ. ಕಟ್ಟಡ ಸೋರಲಾರಂಭಿಸುತ್ತದೆ. ಶಾಲೆಯ ಚಾವಣಿ ಭದ್ರವಿಲ್ಲದೆ ಮರದ ಪಿಕಾಸುಗಳಿಗೆ ಗೆದ್ದಲು ಹಿಡಿದಿವೆ. ಚಾವಣಿ ಯಾವಾಗ ಕುಸಿಯುವುದೋ ಎಂಬ ಭಯವಿದೆ. ಈ ಅವ್ಯವಸ್ಥೆಯ ನಡುವೆಯೇ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ತೋಯ್ದ ಗೋಡೆಗಳ ಪಕ್ಕದಲ್ಲಿ ಕೂರಲು ಹೆದರುವ ಮಕ್ಕಳು ಕೊಠಡಿ ಮಧ್ಯದಲ್ಲಿ ಕುಳಿತು ಕೊಳ್ಳುತ್ತಿದ್ದಾರೆ. ಇನ್ನು ಕೆಲವು ಮಕ್ಕಳಿಗೆ ಕುಳಿತುಕೊಳ್ಳಲು ಜಾಗವಿಲ್ಲದ್ದರಿಂದ ಶಾಲೆ ಹೊರಭಾಗದ ಜಗುಲಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ.

7ನೇ ತರಗತಿ ವಿದ್ಯಾರ್ಥಿಗಳಾದ ನಿಶಾಂತ್‌, ಪ್ರೀತಮ್‌, ಶೋಭಾ ‘ನಮ್ಮ ತಂದೆ, ತಾಯಂದಿಯರಿಗೆ ಖಾಸಗಿ ಶಾಲೆಗಳಿಗೆ ಕಳುಹಿಸಲು ಹಣವಿಲ್ಲ. ವಿಧಿಯಿಲ್ಲದೆ ಸರ್ಕಾರಿ ಶಾಲೆಗೆ ಬರುತ್ತಿದ್ದೇವೆ. ಶಿಕ್ಷಕರು ಚನ್ನಾಗಿ ಪಾಠ ಮಾಡುತ್ತಾರಾದರೂ ಮಳೆಗಾಲದಲ್ಲಿ ಶಾಲೆಯಲ್ಲಿ ಕೂಡಲು ಭಯ’ ಎಂದು ಸಂಕಟ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT