ಶನಿವಾರ, ಫೆಬ್ರವರಿ 27, 2021
19 °C
ಹಣಕ್ಕಾಗಿ ದರೋಡೆ ಕಥೆ ಹೆಣೆದು ಸಿಕ್ಕಿಬಿದ್ದ

ಹಾಸನ: ದೂರು ನೀಡಿದ್ದವನೇ ಆರೋಪಿ, ₹ 2 ಲಕ್ಷ ನಗದು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹಾಸನ: ಸಾಲ ತೀರಿಸಲು ದರೋಡೆ ಕಥೆ ಹೆಣೆದು ಹಣ ಲಪಟಾಯಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಕೆ.ಹೊಸಕೊಪ್ಪಲು ನಿವಾಸಿ ಎಂ.ಎಸ್.ಚಂದನ್ (32) ಬಂಧಿಸಲಾಗಿದ್ದು,  ಮತ್ತಿಬ್ಬರು ಆರೋಪಿಗಳಾದ ಲೋಕಿ ಹಾಗೂ ನವೀನ್‌ ತಲೆಮರೆಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಬೈಕ್‌ ಹಾಗೂ ₹ 2 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್‌ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರದ ಕೈಗಾರಿಕಾ ಪ್ರದೇಶದಲ್ಲಿರುವ ವೆಂಕಟೇಶ್ ಅವರ ಪೂಜಾ ಫೀಡ್ಸ್ ಕಂಪನಿಗೆ ಸೇರಿದ ಜನಿವಾರ ಹಾಗೂ ಚಿಕ್ಕಕಣಗಾಲ್ ಗ್ರಾಮದ ಕೋಳಿ ಫಾರಂಗಳಲ್ಲಿ ಚಂದನ್ ಕೆಲಸ ಮಾಡುತ್ತಿದ್ದ. ಶುಂಠಿ ಬೆಳೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ. ಸಾಲಗಾರರ ಒತ್ತಡ ಹೆಚ್ಚಾದ ಕಾರಣ ಕೋಳಿ ಮಾರಾಟದಿಂದ ಸಂಗ್ರಹವಾಗಿದ್ದ ₹ 9.5 ಲಕ್ಷ ನಗದು ದೋಚಲು ಕೆ.ಹೊಸಕೊಪ್ಪಲು ನಿವಾಸಿಗಳಾದ ಲೋಕಿ, ನವೀನ್ ಜತೆಗೂಡಿ ದರೋಡೆ ಸಂಚು ರೂಪಿಸಲಾಯಿತು. ಇದಕ್ಕಾಗಿ ಈ ಇಬ್ಬರಿಗೆ ₹ 2 ಲಕ್ಷ ರೂಪಾಯಿ ನೀಡಲು ಒಪ್ಪಂದವಾಗಿತ್ತು.

ಯೋಜನೆ ಪ್ರಕಾರ ಕಂಪನಿ ಮಾಲೀಕರಿಗೆ ಹಣ ಕೊಡಲು ಹೋಗುವುದಾಗಿ ಹೇಳಿ ₹ 7.5 ಲಕ್ಷ ನಗದು ಮನೆಯಲ್ಲಿಟ್ಟು, ಕೇವಲ ₹ 2 ಲಕ್ಷ ಹಣ ತೆಗೆದುಕೊಂಡು ಹೊರಟ ಚಂದನ್‌ ಬೈಕ್‌ ಅನ್ನು ಬೆಂಗಳೂರು, ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ರೈಲ್ವೆ ಟ್ರಾಕ್ ಹತ್ತಿರ ಇಬ್ಬರು ಅಡ್ಡಗಟ್ಟಿ , ಆತನಿಗೆ ಚಾಕುವಿನಿಂದ ಹಲ್ಲೆ ನಡೆಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದರು.

ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಚಂದನ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ವಿಚಾರಣೆ ವೇಳೆ ಪೊಲೀಸರಿಗೆ ಚಂದನ್‌ ವರ್ತನೆ ಮೇಲೆ ಸಂಶಯ ಮೂಡಿತು. ಬಳಿಕ ಹಣಕ್ಕಾಗಿ ಈ ರೀತಿ ಸಂಚು ರೂಪಿಸಿರುವುದಾಗಿ ಒಪ್ಪಿಕೊಂಡ.

₹ 9.50 ಲಕ್ಷ ಪೈಕಿ ₹ 2 ಲಕ್ಷ ನಗದು ಸ್ನೇಹಿತರು ತೆಗೆದುಕೊಂಡು ಹೋಗಿದ್ದು, ₹ 50 ಸಾವಿರವನ್ನು ಚಿಕಿತ್ಸೆಗೆ ಖರ್ಚು ಮಾಡಿದ್ದಾನೆ. ಉಳಿದ ₹ 7 ಲಕ್ಷ ಹಾಗೂ ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ನಡುವೆ ಚಂದನ್ ನಿಂದ ₹ 2 ಲಕ್ಷ ದೋಚಿದ್ದ ಸ್ನೇಹಿತರು ನ.26ರಂದು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ಸಹ ವಿಚಾರಿಸಿದ್ದರು. ಆರೋಪಿ ಲೋಕಿ ವಿರುದ್ಧ ಅತ್ಯಾಚಾರ, ಕೊಲೆ, ಸುಲಿಗೆ, ಹೊಡೆದಾಟ ಪ್ರಕರಣ ದಾಖಲಾಗಿದೆ. ಕೊಲೆ ಪ್ರಕರಣದಲ್ಲಿ ಈಗಾಗಲೇ 7 ವರ್ಷ ಶಿಕ್ಷೆ ಮುಗಿಸಿ ಬಿಡುಗಡೆಯಾಗಿದ್ದ. ನವೀನ್‌ ವಿರುದ್ಧ ಕೊಲೆ, ಸುಲಿಗೆ, ಕೊಲೆಗೆ ಯತ್ನ, ಹೊಡೆದಾಟ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ, ಸರ್ಕಲ್‌ ಇನ್ ಸ್ಪೆಕ್ಟರ್ ವೈ.ಸತ್ಯನಾರಾಯಣ, ಬಡಾವಣೆ ಠಾಣೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಸುರೇಶ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು