ಸೋಮವಾರ, ಮಾರ್ಚ್ 20, 2023
24 °C

ಹಾಸನದಲ್ಲಿ ಗುಂಡು ಹಾರಿಸಿ ನವೀನ್‌ ಕೊಲೆ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಯಸಳೂರು ಹೋಬಳಿಯ ತಂಬಲಗೇರಿ ಗ್ರಾಮದ ನವೀನ್‌ನನ್ನು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಗುಂಡು ಹೊಡೆದು ಕೊಲೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆರೋಪಿಗಳಾದ ನಾಗರಾಜು ಹಾಗೂ ಅನಿಲ್‌ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಬಂದೂಕು, ಪೆಲೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು. 

ಸೋಮವಾರ ರಾತ್ರಿ ಮೀನು ಹಿಡಿಯಲು ತೆರಳಿದ್ದ ನವೀನ್‌ ಅವರಿಗೆ ಗುಂಡು ತಗುಲಿ ಮೃತಪಟ್ಟಿದ್ದರು. ಸ್ಥಳಕ್ಕೆ ಐಜಿಪಿ ಪ್ರವೀಣ್‌ ಮಧುಕರ್‌, ಎಫ್‌ಎಸ್‌ಎಲ್‌ ತಂಡ ಭೇಟಿ ಪರಿಶೀಲಿಸಲಾಗಿತ್ತು. ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವುದು ಸ್ಪಷ್ಟವಾಗಿದೆ ಎಂದು ವಿವರಿಸಿದರು. 

ಕೊಲೆಯಾದ ನವೀನ್‌ ಅವರ ಟ್ರ್ಯಾಕ್ಟರ್‌ನಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿರುವ ಬಗ್ಗೆ ಕೊಲೆ ಪ್ರಕರಣದ ಆರೋಪಿ ನಾಗರಾಜು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎಂದು ಹೇಳಲಾಗಿದೆ. ಇದು ನವೀನ್‌ ಕೋಪಕ್ಕೆ ಕಾರಣವಾಗಿತ್ತು. ಇದರಿಂದ ಕೊಲೆಯಾದ ನವೀನ್‌, ನಾಗರಾಜುಗೆ ಬೆದರಿಕೆ ಹಾಕುತ್ತಿದ್ದ. ಇದರಿಂದ ರೋಸಿ ಹೋಗಿದ್ದ ನಾಗರಾಜು, ಅನಿಲ್‌ ಜೊತೆಗೂಡಿ ಗುಂಡು ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿಸಿದರು. 

ಸೋಮವಾರ ಸಂಜೆ ನಾಗರಾಜು, ನವೀನ್‌ಗೆ ಕರೆ ಮಾಡಿದ್ದು, ‘ಎಲ್ಲಿ ಇದ್ದಿಯಾ’ ಎಂದು ಕೇಳಿದ್ದ. ಆಗ ನವೀನ್‌, ‘ನಾನು ನದಿಯಲ್ಲಿ ಮೀನು ಹಿಡಿಯುತ್ತಿರುವುದಾಗಿ’ ತಿಳಿಸಿದ್ದ. ‘ನಾನೂ ಅಲ್ಲಿಗೆ ಬರುವುದಾಗಿ’ ನಾಗರಾಜು ತಿಳಿಸಿದ್ದ. ಇದರಿಂದ ನವೀನ್‌ ಇರುವ ಜಾಗದ ಬಗ್ಗೆ ಮಾಹಿತಿ ಪಡೆದ ಆರೋಪಿ ನಾಗರಾಜು, ನದಿಯ ಬಳಿ ಬಂದು ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಅದು ನೇರವಾಗಿ ನವೀನ್‌ ಎದೆಗೆ ಹೊಕ್ಕಿದ್ದು, ನವೀನ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದರು ಎಂದು ಹರಿರಾಂ ಶಂಕರ್‌ ಮಾಹಿತಿ ನೀಡಿದರು. 

ಬಂದೂಕಿಗೆ ಪೆಲೆಟ್‌ ಬಳಸಿದ್ದರಿಂದ ಅದರ ತುಂಡುಗಳು ತಗುಲಿ ದಯಾನಂದ ಹಾಗೂ ಪದ್ಮನಾಭ ಗಾಯಗೊಂಡಿದ್ದರು. ಕೂಡಲೇ ತನ್ನ ಪರಿಚಯದ ಚಾಲಕನೊಬ್ಬನಿಗೆ ಕರೆ ಮಾಡಿದ ಆರೋಪಿ ನಾಗರಾಜು, ‘ಗುಂಡು ತಗುಲಿ ಮೂವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲು ವಾಹನ ತೆಗೆದುಕೊಂಡು ಬರುವಂತೆ’ ಹೇಳಿದ್ದ. ಆ ವಾಹನದಲ್ಲಿ ಮೂವರನ್ನು ಆರೋಪಿ ನಾಗರಾಜನೇ ಹಾಸನದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾನೆ. ಈ ಮೂಲಕ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದ ಎಂದು ಹೇಳಿದರು. 

ಘಟನೆ ನಡೆದ ಸಮಯದಲ್ಲಿ ಇಬ್ಬರು ಬಂದೂಕಿನೊಡನೆ ಹೋಗುತ್ತಿರುವುದನ್ನು ನೋಡಿದ್ದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವುದು ಬಯಲಾಗಿದೆ ಎಂದು ತಿಳಿಸಿದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು