ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಾಂಬ ದೇವಸ್ಥಾನದ ಹುಂಡಿ ಎಣಿಕೆ: 62 ಗ್ರಾಂ ಚಿನ್ನ, 161 ಗ್ರಾಂ ಬೆಳ್ಳಿ ಸಂಗ್ರಹ

Published 16 ನವೆಂಬರ್ 2023, 13:41 IST
Last Updated 16 ನವೆಂಬರ್ 2023, 13:41 IST
ಅಕ್ಷರ ಗಾತ್ರ

ಹಾಸನ: ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ಗುರುವಾರ ಮುಗಿದಿದ್ದು, ಹುಂಡಿಯಲ್ಲಿ ವಿದೇಶಿ ನೋಟುಗಳು, ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಭಕ್ತರು ಹಾಕಿದ್ದಾರೆ.

ಹಾಸನಾಂಬ ಜಾತ್ರೆ ನ.15 ರಂದು ಮುಕ್ತಾಯವಾಗಿದ್ದು, ಗುರುವಾರ ಬೆಳಿಗ್ಗೆಯಿಂದ ಕಾಣಿಕೆ ಹುಂಡಿಯ ಎಣಿಕೆ ಕಾರ್ಯ ಆರಂಭಿಸಲಾಗಿತ್ತು. ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಶಾಸಕ ಸ್ವರೂಪ್‌ ಪ್ರಕಾಶ್‌, ಉಪ ವಿಭಾಗಾಧಿಕಾರಿ ಮಾರುತಿ ಉಸ್ತುವಾರಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಜನರು ಹುಂಡಿಯಲ್ಲಿ ಸಂಗ್ರಹವಾಗಿರುವ ಹಣದ ಎಣಿಕೆ ಕಾರ್ಯ ಮಾಡಿದರು.

ಪ್ರತಿ ವರ್ಷ ಹುಂಡಿ ಹಣ ಎಣಿಕೆ ಕಾರ್ಯ ವಿಳಂಬವಾಗುತ್ತಿತ್ತು. ಈ ಬಾರಿ ಬೇಗನೆ ಎಣಿಕೆ ಮುಗಿಸಲು ಅನುವಾಗುವಂತೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 53 ಬ್ಯಾಂಕ್‌ ಸಿಬ್ಬಂದಿಯನ್ನು ಎಣಿಕೆ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಮಧ್ಯಾಹ್ನದ ವೇಳೆಗೆ ಎಣಿಕೆ ಪೂರ್ಣಗೊಂಡಿದೆ.

ಇದೇ ಮೊದಲ ಬಾರಿಗೆ ದೇವಾಲಯದಲ್ಲಿ ಅಳವಡಿಸಿದ್ದ ಇ–ಹುಂಡಿಯ ಮೂಲಕ ₹4.64 ಲಕ್ಷ ಸಂಗ್ರಹವಾಗಿದೆ. ದೇಗುಲಕ್ಕೆ ಬಂದಿದ್ದ ಭಕ್ತರು, ದೇಗುಲದಲ್ಲಿ ಅಳವಡಿಸಿದ್ದ ಸ್ಕ್ಯಾನರ್‌ ಅನ್ನು ಸ್ಕ್ಯಾನ್‌ ಮಾಡುವ ಮೂಲಕ ಕಾಣಿಕೆ ಹಾಕಿದ್ದಾರೆ. ದೇವಾಲಯದಲ್ಲಿ ಇಡಲಾಗಿದ್ದ ಕಾಣಿಕೆ ಹುಂಡಿಗಳಿಂದ ₹ 2,50,77,497 ಸಂಗ್ರಹವಾಗಿದೆ. 62 ಗ್ರಾಂ ಚಿನ್ನ, 161 ಗ್ರಾಂ ಬೆಳ್ಳಿ ಕಾಣಿಕೆ ಬಂದಿದೆ.

ವಿಶೇಷ ದರ್ಶನದ ₹ 1 ಸಾವಿರ ಹಾಗೂ ₹ 300 ಟಿಕೆಟ್, ಲಾಡು ಪ್ರಸಾದ ಮಾರಾಟದಿಂದ ₹6,17,00,074 ಸಂಗ್ರಹವಾಗಿದ್ದು, ಕಾಣಿಕೆ ಹುಂಡಿಯ ₹2.50 ಲಕ್ಷ ಸೇರಿದಂತೆ ಒಟ್ಟು ₹8,72 ,41,531 ರೂ ಸಂಗ್ರಹವಾಗಿದೆ. ಈ ಬಾರಿ 14.20 ಲಕ್ಷ ಮಂದಿ ಭಕ್ತರು ದರ್ಶನ ಪಡೆದಿದ್ದಾರೆ. ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಹಣ ಸಂಗ್ರಹವಾಗಿದೆ. ವಿದೇಶಿ ನೋಟುಗಳನ್ನೂ ಸಹ ಕೆಲವರು ಕಾಣಿಕೆಯಾಗಿ ಹಾಕಿದ್ದಾರೆ. 2017 ರಲ್ಲಿ ಸಂಗ್ರಹವಾಗಿದ್ದ ₹4.14 ಕೋಟಿ ಇದುವರೆಗಿನ ದಾಖಲೆಯಾಗಿತ್ತು.

ಭಕ್ತರ ಪತ್ರ ಓದದಂತೆ ಸೂಚನೆ: ಪ್ರತಿ ಬಾರಿ ಭಕ್ತರು ತಮ್ಮ ಕೋರಿಕೆಗಳನ್ನು ಬರೆದು ದೇವಿಯ ಹುಂಡಿಗೆ ಹಾಕುತ್ತಾರೆ. ಹಲವಾರು ಬಗೆಯ ಕೋರಿಕೆಗಳು ಪತ್ರದಲ್ಲಿ ಇರುತ್ತವೆ. ಆದರೆ, ಭಕ್ತರ ಕೋರಿಕೆಯನ್ನು ಗೌಪ್ಯವಾಗಿ ಇಡುವ ಉದ್ದೇಶದಿಂದ ಕಳೆದ ವರ್ಷದಿಂದ ಈ ಪತ್ರಗಳನ್ನು ಓದದಂತೆ ದೇವಸ್ಥಾನದ ಆಡಳಿತ ಮಂಡಳಿ ಸೂಚನೆ ನೀಡಿದೆ. ಹಾಗಾಗಿ ಪತ್ರಗಳನ್ನು ಹಾಗೆಯೇ ದೇವಿಯ ಸನ್ನಿಧಿಯಲ್ಲಿ ಇಡಲಾಗುತ್ತಿದೆ.

ಹುಂಡಿಯಲ್ಲಿ ಸಂಗ್ರಹವಾಗಿರುವ ನಾಣ್ಯಗಳು

ಹುಂಡಿಯಲ್ಲಿ ಸಂಗ್ರಹವಾಗಿರುವ ನಾಣ್ಯಗಳು

ಹುಂಡಿಯಲ್ಲಿ ಸಂಗ್ರಹವಾಗಿರುವ ಚಿನ್ನ–ಬೆಳ್ಳಿ.
ಹುಂಡಿಯಲ್ಲಿ ಸಂಗ್ರಹವಾಗಿರುವ ಚಿನ್ನ–ಬೆಳ್ಳಿ.
ಹುಂಡಿಯಲ್ಲಿ ಸಿಕ್ಕ ಚಿನ್ನದ ತಾಳಿಯನ್ನು ರಮ್ಯಾ ಅವರಿಗೆ ಮರಳಿಸಲಾಯಿತು
ಹುಂಡಿಯಲ್ಲಿ ಸಿಕ್ಕ ಚಿನ್ನದ ತಾಳಿಯನ್ನು ರಮ್ಯಾ ಅವರಿಗೆ ಮರಳಿಸಲಾಯಿತು
ಕಳೆದಿದ್ದ ತಾಳಿ ಹುಂಡಿಯಲ್ಲಿ ಪತ್ತೆ
ಹಾಸನಾಂಬ ದೇವಸ್ಥಾನಕ್ಕೆ ಬಂದಾಗ ಕೆ.ಆರ್. ನಗರ ತಾಲ್ಲೂಕಿನ ಸಾಲಿಗ್ರಾಮದ ರಮ್ಯಾ ಎಂಬುವವರ 5 ಗ್ರಾಂನ ಚಿನ್ನದ ತಾಳಿ ಕಳೆದು ಹೋಗಿತ್ತು. ಈ ಬಗ್ಗೆ ರಮ್ಯಾ ಅವರು ಉಪ ವಿಭಾಗಾಧಿಕಾರಿ ಮಾರುತಿ ಅವರಿಗೆ ಮಾಹಿತಿ ನೀಡಿದ್ದರು. ಗುರುವಾರ ಹುಂಡಿ ಹಣ ಎಣಿಕೆ ಮಾಡುವಾಗ 5 ಗ್ರಾಂ ತಾಳಿ ಸಿಕ್ಕಿದೆ. ದೇಗುಲದ ಆವರಣದಲ್ಲಿ ಯಾರಿಗೋ ಸಿಕ್ಕಿದ್ದ ಈ ತಾಳಿಯನ್ನು ಭಕ್ತಾದಿಗಳು ಹುಂಡಿಗೆ ಹಾಕಿರಬಹುದು ಎಂದು ಅಂದಾಜಿಸಲಾಗಿದೆ. ಸಿಕ್ಕ ತಾಳಿಯನ್ನು ಗುರುವಾರ ಅಧಿಕಾರಿಗಳು ರಮ್ಯಾ ಅವರಿಗೆ ಮರಳಿಸಿದರು.

10 ವರ್ಷಗಳಲ್ಲಿ ದೇಗುಲದ ಆದಾಯ:

ವರ್ಷ – ಆದಾಯ (₹ಕೋಟಿಗಳಲ್ಲಿ)

  • 2013 – ₹1.21

  • 2014 – ₹1.27

  • 2015 – ₹1.46

  • 2016 – ₹2.67

  • 2017 – ₹4.14

  • 2018 – ₹2.68

  • 2019 – ₹3.06

  • 2020 – ₹0.22

  • 2021 – ₹1.54

  • 2022 – ₹ 3.36

  • 2023 – ₹8.72

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT