ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್‌ ಉಮೇದುವಾರಿಕೆಗೆ ಗೌಡರ ಕಸರತ್ತು

ಸೀಟು ಹಂಚಿಕೆಗೂ ಮುನ್ನವೇ ಅಭ್ಯರ್ಥಿ ಘೋಷಣೆ: ಜೆಡಿಎಸ್‌ ಮುಖಂಡರಲ್ಲೂ ಗೊಂದಲ
Published 23 ಜನವರಿ 2024, 21:25 IST
Last Updated 23 ಜನವರಿ 2024, 21:25 IST
ಅಕ್ಷರ ಗಾತ್ರ

ಹಾಸನ: ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮವಾಗುವ ಮುನ್ನವೇ, ಹಾಸನ ಕ್ಷೇತ್ರಕ್ಕೆ ತಮ್ಮ ಮೊಮ್ಮಗ, ಹಾಲಿ ಸಂಸದ ಪ್ರಜ್ವಲ್‌ ಹೆಸರು ಘೋಷಿಸಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು, ಇದೀಗ ಪಕ್ಷದ ಕಾರ್ಯಕರ್ತರಿಗೆ ಅವರ ಉಮೇದುವಾರಿಕೆಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಆರಂಭಿಸಿದ್ದಾರೆ.

ಈಗಾಗಲೇ ಬೇಲೂರು, ಹಾಸನ, ಅರಸೀಕೆರೆಯಲ್ಲಿ ಕಾರ್ಯಕರ್ತರು, ಮುಖಂಡರ ಸಭೆ ನಡೆಸಿ, ಪ್ರಜ್ವಲ್‌ ಅವರ ಉಮೇದುವಾರಿಕೆಯನ್ನು ಪುನರುಚ್ಚರಿಸಿದ್ದಾರೆ. 24 ರಂದು ಚನ್ನರಾಯಪಟ್ಟಣ, 25 ರಂದು ಆಲೂರು ಹಾಗೂ ಸಕಲೇಶಪುರದಲ್ಲಿ ಸಭೆ ಏರ್ಪಾಡಾಗಿದೆ.

ಮೈತ್ರಿಕೂಟದ ಸೀಟು ಹಂಚಿಕೆಯ ಮಾತುಕತೆ ಇನ್ನೂ ಅಂತಿಮವಾಗದಿದ್ದರೂ ದೇವೇಗೌಡರು, ‘ಹಾಸನದಿಂದ ಪ್ರಜ್ವಲ್‌  ಸ್ಪರ್ಧಿಸಲಿದ್ದಾರೆ’ ಎಂದು ಘೋಷಿಸಿರುವುದು, ಬಿಜೆಪಿ ಮುಖಂಡರಿಗೆ ಇರಿಸು ಮುರಿಸು ಉಂಟು ಮಾಡುತ್ತಿದೆ. ಅಲ್ಲದೇ, ‘ಪ್ರಜ್ವಲ್‌ ಸ್ಪರ್ಧಿಸಿದರೆ, ಗೆಲುವು ಕಷ್ಟವಾಗಬಹುದು’ ಎಂಬ ಅಭಿಪ್ರಾಯ ಜೆಡಿಎಸ್ ಮುಖಂಡರಲ್ಲೂ ಇದೆ. ಈ ನಡುವೆಯೇ ದೇವೇಗೌಡರು ಪ್ರವಾಸ ಆರಂಭಿಸಿ, ಪ್ರಜ್ವಲ್‌ ಬೆಂಬಲಕ್ಕೆ ನಿಂತಿದ್ದಾರೆ.

ಪ್ರಜ್ವಲ್‌ ಅವರ ಕಾರು ಚಾಲಕ ಕಾರ್ತಿಕ ಮೇಲಿನ ಹಲ್ಲೆ ಹಾಗೂ ಜಮೀನು ಬರೆಸಿಕೊಂಡ ಆರೋಪದ ಪ್ರಕರಣವನ್ನೇ ಮುಂದಿಟ್ಟುಕೊಂಡು ಬಿಜೆಪಿ ಮುಖಂಡರಾದ ಎ.ಟಿ. ರಾಮಸ್ವಾಮಿ ಹಾಗೂ ವಕೀಲ ದೇವರಾಜೇಗೌಡರು, ರೇವಣ್ಣ ಕುಟುಂಬದ ವಿರುದ್ಧ ಮುಗಿ ಬಿದ್ದಿದ್ದಾರೆ. ರಾಮಸ್ವಾಮಿಯವರು, ಪ್ರಜ್ವಲ್‌ ವಿರುದ್ಧ ಪ್ರತಿಭಟಿಸಿದ್ದಾರೆ. ಆದರೂ ದೇವೇಗೌಡರು ಮಾತ್ರ, ‘ಪ್ರಜ್ವಲ್‌ ರೇವಣ್ಣ ಅವರೇ ಅಭ್ಯರ್ಥಿ’ ಎಂದು ಪ್ರತಿಪಾದಿಸುತ್ತಿದ್ದಾರೆ.

ಇನ್ನೊಂದೆಡೆ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾದ ನಂತರ ಪ್ರೀತಂ ಗೌಡರು, ಈ ವಿಷಯದಲ್ಲಿ ಮೃದುಧೋರಣೆ ತೋರಿದಂತಿದ್ದು, ‘ಸೀಟು ಹಂಚಿಕೆಯ ಮಾತುಕತೆ ಆಗುವವರೆಗೂ ಕಾದು ನೋಡೋಣ’ ಎಂದಿದ್ದಾರೆ.

‘ಪ್ರಜ್ವಲ್‌ ವಿರುದ್ಧ ಆರೋಪಗಳು ಕೇಳಿ ಬರುತ್ತಿದ್ದು, ಅನರ್ಹತೆಯ ತೂಗುಗತ್ತಿಯೂ ಇದೆ. ಅನರ್ಹತೆಯ ಕುರಿತ ಹೈಕೋರ್ಟ್‌ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದ್ದು, ಅಂತಿಮ ತೀರ್ಪು ಬರಬೇಕಿದೆ. ಇಂತಹ ಸಂದರ್ಭದಲ್ಲಿ ಅವರ ಹೆಸರು ಘೋಷಿಸುವುದು ಸರಿಯಲ್ಲ. ಸುಪ್ರೀಂ ಕೋರ್ಟ್‌ ಸಹ ಹೈಕೋರ್ಟ್‌ ತೀರ್ಪನ್ನೇ ಎತ್ತಿ ಹಿಡಿದರೆ, ಅನರ್ಹತೆಯ ಜೊತೆಗೆ, ಮುಂದಿನ ಆರು ವರ್ಷ ಪ್ರಜ್ವಲ್‌ ಅವರು ಚುನಾವಣೆಗೆ ನಿಲ್ಲಲಾಗದು. ಆಗ ಬೇರೆ ಅಭ್ಯರ್ಥಿ ಯಾರೆಂಬ ಗೊಂದಲವೂ ಮೂಡುತ್ತದೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಅಭ್ಯರ್ಥಿ ಘೋಷಿಸಬೇಕು. ದೇವೇಗೌಡರೇ ಹಾಸನದಿಂದ ಸ್ಪರ್ಧಿಸಿದರೆ ಒಳ್ಳೆಯದು’ ಎಂಬುದು ಜೆಡಿಎಸ್ ಮುಖಂಡರ ‍ಪ್ರತಿಪಾದನೆ.

ಅರಸೀಕೆರೆ, ಬೇಲೂರು, ಹಾಸನದ ಸಭೆಯಲ್ಲಿ ದೇವೇಗೌಡರು, ‘ಪ್ರಜ್ವಲ್‌ ಸ್ಪರ್ಧಿಸಲಿದ್ದು, ಅವರನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡುವ ಮೂಲಕ  ಪುನರುಚ್ಚರಿಸುತ್ತಲೇ ಬಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಲು ಪ್ರಜ್ವಲ್‌ ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT