ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇಬೀಡು: ಹೊಯ್ಸಳ ಬಡಾವಣೆ ರಸ್ತೆ ಗುಂಡಿಮಯ

ಅಪಘಾತಕ್ಕೆ ಆಹ್ವಾನ ನೀಡುವ ಗುಂಡಿಗಳು: ನಿವಾಸಿಗಳ ಹಿಡಿಶಾಪ
Published 25 ಮೇ 2024, 7:52 IST
Last Updated 25 ಮೇ 2024, 7:52 IST
ಅಕ್ಷರ ಗಾತ್ರ

ಹಳೇಬೀಡು: ಇಲ್ಲಿನ ದೊಡ್ಡ ವಸತಿ ಪ್ರದೇಶವಾದ ಹೊಯ್ಸಳ ಬಡಾವಣೆಯ ರಸ್ತೆಗಳು ಗುಂಡಿಮಯವಾಗಿದ್ದು, ನಿವಾಸಿಗಳು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ.

ರಸ್ತೆಯಲ್ಲಿ ಭೀಕರ ಗುಂಡಿಗಳು ನಿರ್ಮಾಣವಾಗಿವೆ. ಈ ರಸ್ತೆಯಲ್ಲಿ ವಾಹನ ಸಂಚರಿಸುವುದು ಸುಲಭ ಸಾಧ್ಯವಾಗಿಲ್ಲ. ದ್ವಿಚಕ್ರ ವಾಹನ ಸವಾರರು ಬಿದ್ದು ಮೇಲೇಳುವುದು ಮಾಮೂಲಿಯಾಗಿದೆ. ಅದೃಷ್ಟವಷಾತ್ ಪ್ರಾಣಾಪಾಯ ಸಂಭವಿಸಿಲ್ಲ. ರಸ್ತೆಯ ಆಚೆಯ ತುದಿಗಳಲ್ಲಿಯೂ ಓಡಾಡಲು ಸಾಧ್ಯವಾಗದಂತೆ ಗುಂಡಿಗಳಾಗಿವೆ. ಪಾದಚಾರಿಗಳು ನಡೆದಾಡುವುದಕ್ಕೂ ಜಾಗ ಇಲ್ಲದಂತಾಗಿದೆ. ಇಲ್ಲಿಯ ನಿವಾಸಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಶಾಪ ಹಾಕಿಕೊಂಡು ಓಡಾಡುತ್ತಿದ್ದಾರೆ.

ಬಡಾವಣೆಯಲ್ಲಿ ಚರಂಡಿಗಳು ಇಲ್ಲದಿರುವುರಿಂದ ಮಳೆ ನೀರು ರಸ್ತೆಗಳಲ್ಲಿಯೇ ಹರಿಯುತ್ತದೆ. ಮಳೆ ಬಂದಾಗಲೆಲ್ಲ ರಸ್ತೆಯ ಮಣ್ಣು ಕೊಚ್ಚಿ ಹೋಗುತ್ತಲೇ ಇರುತ್ತದೆ. ಹೀಗಾಗಿ ಮಳೆ ಬಂದ ದಿನ ಗುಂಡಿಗಳು ದೊಡ್ಡದಾಗುತ್ತಿರುತ್ತವೆ.

ಸಾಕಷ್ಟು ಮಂದಿ ಅನುಕೂಲಸ್ಥರು ಬಡಾವಣೆಯಲ್ಲಿ ವಾಸವಾಗಿರುವುದರಿಂದ ಕಾರುಗಳ ಓಡಾಟ ಕಡಿಮೆ ಇಲ್ಲ. ಬಡಾವಣೆಯಿಂದ ಹೊರಗಿನ ಹೆದ್ದಾರಿವರೆಗೆ ಕಾರು ಚಾಲನೆ ಮಾಡುವುದು ಸಾಹಸವಾಗಿದೆ. ತುರ್ತು ಸಂದರ್ಭದಲ್ಲಿ ಬಡಾವಣೆಯಿಂದ ಹೊರ ಹೋಗಿ ಬರಲು ಕಷ್ಟ ಪಡುವುದು ಮಾಮೂಲಿಯಾಗಿದೆ.

ಬಡಾವಣೆಯ ಮುಖ್ಯ ರಸ್ತೆಯಲ್ಲಿಯೇ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಡಾಂಬರ್ ಹಾಕಿದ ರಸ್ತೆ ಅವಶೇಷ ಇಲ್ಲದಂತೆ ಹಾಳಾಗಿದೆ. ಇನ್ನು ಅಡ್ಡ ರಸ್ತೆಗಳ ಸಮಸ್ಯೆ ಹೇಳಲು ಅಸಾಧ್ಯವಾಗಿದೆ. ತೆಗ್ಗಿನ ರಸ್ತೆಯಲ್ಲಿ ಮಳೆ ನೀರು ನಿಲ್ಲದಂತೆ ಗುಂಡಿಗಳ ಆಳ, ಅಗಲ ದೊಡ್ಡದು ಮಾಡಿಕೊಂಡು ಹರಿದು ಹೋಗುತ್ತದೆ. ಸಮತಟ್ಟಾದ ಸ್ಥಳದಲ್ಲಿ ನೀರು ನಿಂತು ಕೆಸರು ಗದ್ದೆಯಾಗುತ್ತದೆ. ಕೆಸರಿನಲ್ಲಿ ಕಾಲಿಟ್ಟರೆ ಜಾರುತ್ತದೆ. ಗಟ್ಟಿಯಾಗಿ ಕಾಲೂರಿಕೊಂಡು ಮನೆಯಿಂದ ಹೊರಹೋಗಿ ಬಂದರೆ ಕೈಕಾಲು ಮೈಯೆಲ್ಲ ನೋವಾಗುತ್ತದೆ. ಸಾಕಷ್ಟು ಮನೆಗಳಲ್ಲಿ ವಯಸ್ಕರು ಇದ್ದಾರೆ. ವಯೋ ವೃದ್ದರ ಸ್ಥಿತಿ ಹೇಳ ತೀರದಂತಾಗಿದೆ ಎಂಬ ಎಂದು ಹೊಯ್ಸಳ ಬಡಾವಣೆ ನಿವಾಸಿಗಳು ಅಲವತ್ತಿಕೊಳ್ಳುತ್ತಿದ್ದಾರೆ.

ಬೆಣ್ಣೆ ಗುಡ್ಡ ಕಡೆಯಿಂದ ಮಳೆ ನೀರು ಹೊಯ್ಸಳ ಬಡಾವಣೆ ಮೂಲಕ ಹರಿಯುತ್ತದೆ. ಚರಂಡಿ ಇಲ್ಲದಿರುವುದರಿಂದ ಜೋರು ಮಳೆ ಬಂದಾಗ ರಸ್ತೆಯಲ್ಲಿ ಹೊಳೆಯಂತೆ ಹರಿಯುವ ನೀರು, ಮನೆಗಳಿಗೆ ನುಗ್ಗುವ ಸಾದ್ಯತೆ ಇದೆ. ವ್ಯವಸ್ಥಿತವಾದ ರಸ್ತೆ, ಚರಂಡಿ ನಿರ್ಮಾಣ ಆಗದಿದ್ದರೆ, ಮುಂದಿನ ದಿನದಲ್ಲಿ ಹೊಯ್ಸಳ ಬಡಾವಣೆಯಲ್ಲಿ ವಾಸ ಮಾಡುವುದು ಕಷ್ಟವಾಗುತ್ತದೆ ಎನ್ನುತ್ತಾರೆ ಬಡಾವಣೆ ನಿವಾಸಿ ಚೇರ್ಮನ್ ಕುಮಾರ್.

ಹಳೇಬೀಡಿನಲ್ಲಿ ನೌಕರಿ ಮಾಡಲು ಬಂದ ಸಾಕಷ್ಟು ಮಂದಿ ಹೊಯ್ಸಳ ಬಡಾವಣೆಯಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಹೊಯ್ಸಳ ಬಡಾವಣೆಯಲ್ಲಿ ನಿವೃತ್ತರ ಮನೆಗಳಿಗೆ ಕೊರತೆ ಇಲ್ಲ. ಐತಿಹಾಸಿಕ ಸ್ಥಳದಲ್ಲಿ ನಿವೃತ್ತಿ ಜೀವನ ಕಳೆಯಲು ಬಂದು ಪಡಬಾರದ ಕಷ್ಟ ಅನುಭವಿಸುವಂತಾಗಿದೆ ಎಂಬ ಬೇಸರದ ಮಾತು ಹೊಯ್ಸಳ ಬಡಾವಣೆಯಲ್ಲಿರುವ ನಿವೃತ್ತರಿಂದ ಕೇಳಿ ಬರುತ್ತಿದೆ.

ಹಳೇಬೀಡಿಗೆ ವರ್ಗಾವಣೆಯಾಗಿ ಬರುವ ನೌಕರರಿಗೆ ಯಥೇಚ್ಚವಾಗಿ ಬಾಡಿ ಮನೆ ಸಿಗುವುದು ಹೊಯ್ಸಳ ಬಡಾವಣೆಯಲ್ಲಿ. ಬ್ಯಾಂಕ್ ಹಾಗೂ ವಿವಿಧ ಇಲಾಖೆಯ ಉದ್ಯೋಗಿಗಳು ಹೊಯ್ಸಳ ಬಡಾವಣೆಯಲ್ಲಿ ವಾಸವಾಗಿದ್ದಾರೆ. ರಸ್ತೆ ಸಮಸ್ಯೆಯಿಂದ ಕೆಲವರು ಹಾಸನದಲ್ಲಿ ಮನೆ ಮಾಡಿಕೊಂಡು ಬಸ್ ಪ್ರಯಾಣ ಮಾಡುತ್ತಿದ್ದಾರೆ ಎನ್ನುತ್ತಾರೆ ಸುರೇಶ.

ಹಿಂದೆ ಒಂದೆರೆಡು ಬಾರಿ ಗ್ರಾಮ ಪಂಚಾಯಿತಿಯಿಂದ ಗುಂಡಿಗೆ ಮಣ್ಣು ತುಂಬಿಸಿದ್ದರು. ಮಳೆ ಬಂದಾಗ ಮಣ್ಣು ಕೊಚ್ಚಿ ಹೊಯಿತು. ಗುಂಡಿ ದೊಡ್ಡದಾಗಿದ್ದಲ್ಲದೇ ಮಳೆ ಬಂದಾಗ ಹತ್ತಾರು ಮೀಟರ್ ಉದ್ದದ ಕೊರಕಲು ನಿರ್ಮಾಣವಾಗುತ್ತಿದೆ. ಮಣ್ಣು ತುಂಬಿಸಿದರೆ ಶಾಶ್ವತ ದುರಸ್ತಿ ಆಗುವುದಿಲ್ಲ. ಬೀದಿಗೆ ಹಾಕಿದ್ದ ಡಾಂಬರ್ ಸಹ ಕಿತ್ತು ಬಂದಿದೆ. ಬಂದೋಬಸ್ತ್ ಕಾಂಕ್ರೀಟ್ ರಸ್ತೆ, ಬಾಕ್ಸ್ ಡ್ರೈನೇಜ್ ಆಗಬೇಕಾಗಿದೆ ಎಂಬುದು ಹೊಯ್ಸಳ ಬಡಾವಣೆ ನಿವಾಸಿಗಳ ಬೇಡಿಕೆ.

ಹಳೇಬೀಡಿನ ಹೊಯ್ಸಳ ಬಡಾವಣೆಯ ಮುಖ್ಯ ರಸ್ತೆ ಗುಂಡಿಮಯವಾಗಿದೆ.
ಹಳೇಬೀಡಿನ ಹೊಯ್ಸಳ ಬಡಾವಣೆಯ ಮುಖ್ಯ ರಸ್ತೆ ಗುಂಡಿಮಯವಾಗಿದೆ.
ಶಾಸಕರು ಹೊಯ್ಸಳ ಬಡಾವಣೆಯ ಸ್ಥಳ ಪರಿಶೀಲನೆ ನಡೆಸಬೇಕು. ಬಡಾವಣೆಯ ಎಲ್ಲ ಬೀದಿಗಳಿಗೂ ಕಾಂಕ್ರೀಟ್ ರಸ್ತೆ ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಬೇಕು.
-ಚೆರ್ಮೆನ್ ಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ
ಹೊಯ್ಸಳ ಬಡಾವಣೆ ರಸ್ತೆ ದುರಸ್ತಿಗೆ ಕ್ರಮ ಕೈಗೊಂಡಿದ್ದೇವೆ. ಗುಂಡಿಗಳಿಗೆ ಮಣ್ಣು ತುಂಬಿಸಿದ್ದೇವು. ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸುವ ಕುರಿತು ಪಂಚಾಯಿತಿ ಸಭೆಯಲ್ಲಿ ಚರ್ಚಿಸುತ್ತೇವೆ.
- ಎಚ್.ಎಂ.ನಿಂಗಪ್ಪ, ಗ್ರಾಮ ಪಂಚಾಯಿತಿ ಸದಸ್ಯ

ದೊಡ್ಡ ಬಜೆಟ್ ಅಗತ್ಯವಿದೆ

‘ಹೊಯ್ಸಳ ಬಡಾವಣೆಯ ರಸ್ತೆ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ನಿವೇಶನ ಅಳತೆ ಮೊದಲಾದ ಕೆಲಸಕ್ಕೆ ಹೋದಾಗ ಸ್ಥಿತಿಗತಿಯನ್ನು ವೀಕ್ಷಣೆ ಮಾಡಿದ್ದೇವೆ. ಹೊಯ್ಸಳ ಬಡಾವಣೆಯ ಎಲ್ಲ ರಸ್ತೆಗಳಿಗೆ ಡಾಂಬರ್ ಅಥವಾ ಕಾಂಕ್ರೀಟ್ ಹಾಕಿಸಿ ವ್ಯವಸ್ಥಿತವಾದ ಚರಂಡಿಗಳ ನಿರ್ಮಾಣ ಮಾಡಲು ಗ್ರಾಮ ಪಂಚಾಯಿಯಲ್ಲಿ ದೊಡ್ಡ ಬಜೆಟ್ ಇಲ್ಲ. ಸಂಸದರು ಇಲ್ಲವೇ ಶಾಸಕರ ಅನುದಾನದಲ್ಲಿಯೇ ಕಾಮಗಾರಿ ಕೈಗೊಳ್ಳಬೇಕಾಗಿದೆ. ಈ ಕುರಿತು ಶಾಸಕರು ಉನ್ನತ ಅಧಿಕಾರಿಗಳೊಂದಿಗೆ ಮಾತನಾಡುತ್ತೇವೆ. ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸುತ್ತೇವೆ’ ಎನ್ನುತ್ತಾರೆ ಪಿಡಿಒ ಎಸ್.ಸಿ.ವಿರೂಪಾಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT