ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪರೀಕ್ಷೆ ಹೆಚ್ಚಿಸಲು ಕ್ರಮ

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾಹಿತಿ
Last Updated 1 ಅಕ್ಟೋಬರ್ 2020, 8:09 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ತಾಲ್ಲೂಕು ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಜನರ ಬಳಿಯೇ ತೆರಳಿ ಪರೀಕ್ಷೆ ನಡೆಸಲು ಮೈಸೂರು ತಾಲ್ಲೂಕು ಆಡಳಿತ ಸಿದ್ಧತೆ ನಡೆಸಿದೆ. ಇದಕ್ಕಾಗಿ 9 ಮೊಬೈಲ್ ಪರೀಕ್ಷಾ ವಾಹನಗಳನ್ನು ನಿಯೋಜಿಸಲಾಗುತ್ತಿದೆ ಎಂದು ತಾಪಂ ಇಒ ಸಿ.ಆರ್.ಕೃಷ್ಣಕುಮಾರ್ ತಿಳಿಸಿದರು.

ಮೈಸೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಇಲವಾಲ, ಜಯಪುರ, ವರುಣಾ ಮತ್ತು ಕೂರ್ಗಳ್ಳಿಯಲ್ಲಿ ಈಗಾಗಲೇ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ತಾಲ್ಲೂಕಿನಲ್ಲಿ ಪರೀಕ್ಷೆ ಪ್ರಮಾಣ ಹೆಚ್ಚಿಸಲು ಮೊಬೈಲ್ ವಾಹನಗಳು ವಿವಿಧ ಗ್ರಾಮಗಳಲ್ಲಿ ಸಂಚರಿಸಲಿವೆ ಎಂದು ಮಾಹಿತಿ ನೀಡಿದರು.

ದವಸ ಧಾನ್ಯ ಪಾಲಿಕೆಗೆ ನೀಡಿದ್ದು ಏಕೆ: ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳಲ್ಲಿದ್ದ ದವಸ ಧಾನ್ಯವನ್ನು ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲಾಡಳಿತಕ್ಕೆ ಒಪ್ಪಿಸದೆ, ಮೈಸೂರು ಮಹಾನಗರ ಪಾಲಿಕೆಗೆ ನೀಡಿದ್ದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಲಯದಲ್ಲಿದ್ದ ನೂರಾರು ಕೆ.ಜಿ. ದವಸ ಧಾನ್ಯಗಳು ಲಾಕ್‌ಡೌನ್‌ ಅವಧಿಯಲ್ಲಿ ವ್ಯರ್ಥವಾಗುತ್ತಿದೆ. ನಿರಾಶ್ರಿತರು, ಕೂಲಿ ಕಾರ್ಮಿಕರಿಗೆ ನೀಡಲು ಅದನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಬೇಕೆಂದು ಸುತ್ತೋಲೆ ಹೊರಡಿಸಲಾಗಿತ್ತು. ಆದರೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸುತ್ತೋಲೆ ಉಲ್ಲಂಘಿಸಿ ಪಾಲಿಕೆಗೆ ನೀಡಿದ್ದು ಎಷ್ಟು ಸರಿ ಎಂದು ಸದಸ್ಯರು ಪ್ರಶ್ನಿಸಿದರು.

ಸದಸ್ಯರ ಪ್ರಶ್ನೆಗಳಿಗೆ ಇಲಾಖೆಯ ಅಧಿಕಾರಿ ತೃಪ್ತಿಕರ ಉತ್ತರ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸದಸ್ಯ ಯೋಗಾ ಶ್ರೀನಿವಾಸ ಮಾತನಾಡಿ, ಎಸ್‌ಸಿ, ಎಸ್‌ಟಿ ಮೀಸಲು ಕಾಮಗಾರಿಯನ್ನು ಸಾಮಾನ್ಯ ಕ್ಷೇತ್ರದಲ್ಲಿ ನಡೆಸಲಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿ ವರದಿ ಕೊಡಲು ಕಳೆದ ಸಭೆಯಲ್ಲೇ ಸೂಚಿಸಿದ್ದರೂ, ವರದಿ ನೀಡಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಇಒ, ಅಧ್ಯಯನ ನಡೆಸಿ ವರದಿ ಕೊಡಿ ಎಂದು ಈಗಾಗಲೇ ಹಲವು ಸಭೆಗಳಲ್ಲಿ ಸೂಚನೆ ನೀಡಲಾಗಿದೆ. ಶೀಘ್ರವಾಗಿ ವರದಿ ಸಲ್ಲಿಸದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಶುಲ್ಕ ಪಾವತಿಸದಿದ್ದರೆ ಆನ್‌ಲೈನ್ ತರಗತಿ ನಡೆಸದೆ, ಪಠ್ಯ ಪುಸ್ತಕ ನೀಡಲು ನಿರಾಕರಿಸುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾಪಂ ಸದಸ್ಯರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಾಂತರ ಬಿಇಒ ಕೃಷ್ಣ, ಅಂತಹ ಶಾಲೆಗಳ ಹೆಸರು ತಿಳಿಸಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಇಂತಹ ಕೆಲವು ದೂರುಗಳನ್ನು ಈಗಾಗಲೇ ಬಗೆಹರಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT