ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ದಟ್ಟಣೆಯ ವೇಳೆ ಹೆಚ್ಚಿದ ಬಸ್‌ಗಳ ಸಂಖ್ಯೆ: ಪ್ರಯಾಣಿಕರ ಪರದಾಟ

ಸಂತೋಷ್‌ ಸಿ.ಬಿ.
Published 16 ಮೇ 2024, 7:17 IST
Last Updated 16 ಮೇ 2024, 7:17 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಸಾರಿಗೆ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರು ಪರಾದಾಡುವ ಸ್ಥಿತಿ ನಿರ್ಮಾಣವಾಗಿದೆ. ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ದೂರದ ಊರು ಹಾಗೂ ಹತ್ತಿರ ಊರುಗಳಿಗೆ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದೆ.

ಸುಗಮ ಸಾರಿಗೆ ವ್ಯವಸ್ಥೆ ಇಲ್ಲದೇ ನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ಪರದಾಡುವಂತಾಗಿದೆ. ನಿತ್ಯ ಸರ್ಕಾರಿ, ಖಾಸಗಿ ಕಚೇರಿ ತೆರಳುವ ನೌಕರರು, ಶಾಲಾ– ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಬಸ್‌ಗಳಲ್ಲಿ ನೂಕು ನುಗ್ಗಲಲ್ಲಿಯೇ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಬೇಕಿದೆ ಹೆಚ್ಚಿನ ಬಸ್ ವ್ಯವಸ್ಥೆ: ನಿತ್ಯ ಬೆಳಿಗ್ಗೆ 8 ರಿಂದ 11 ಗಂಟೆ ಹಾಗೂ ಸಂಜೆ 4 ರಿಂದ 6 ಗಂಟೆಯ ಸಮಯದಲ್ಲಿ ಸಾರಿಗೆ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿಯೇ ಸಾರಿಗೆ ಇಲಾಖೆ ಅಗತ್ಯ ಸೌಲಭ್ಯವನ್ನು ಒದಗಿಸಬೇಕಿದೆ. ಆದರೆ ಈ ಸಮಯದಲ್ಲಿ ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಬಹುತೇಕ ಬಸ್‌ಗಳು ದುಪ್ಪಟ್ಟು ಪ್ರಯಾಣಿಕರನ್ನು ಕರೆದೊಯ್ಯುವ ದೃಶ್ಯ ಸಾಮಾನ್ಯವಾಗಿದೆ. 

’ಚನ್ನರಾಯಪಟ್ಟಣ, ಹಾಸನ ಸೇರಿದಂತೆ ಇತರೆ ತಾಲ್ಲೂಕಿನಲ್ಲಿಯೂ ಬಸ್ ಡಿಪೋಗಳು ಇವೆಯಾದರೂ, ಕಾಲಕಾಲಕ್ಕೆ ಸಾರಿಗೆ ಬಸ್ ಒದಗಿಸುವ ಕೆಲಸಕ್ಕೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳದಿರುವುದೇ ಪ್ರಯಾಣಿಕರ ಪರದಾಟಕ್ಕೆ ಪ್ರಮುಖ ಕಾರಣವಾಗಿದೆ’ ಎಂದು ದೂರುತ್ತಾರೆ ಖಾಸಗಿ ಬ್ಯಾಂಕ್ ಉದ್ಯೋಗಿ ಗುರು .

ನಿರ್ವಾಹಕರ ಸಿಡಿಮಿಡಿ: ನಿತ್ಯ ನೂಕುನುಗ್ಗಲಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ನಿರ್ವಾಹಕರು ಸಹ ಪ್ರಯಾಣಿಕರೊಂದಿಗೆ ಸಿಡಿಮಿಡಿಕೊಳ್ಳುತ್ತಿರುವ, ಗಲಾಟೆಗಳಿಗೆ ಕಾರಣವಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಗ್ರಾಮೀಣ ಭಾಗಗಳಿಗಂತೂ ಬಸ್‌ಗಳ ಸೌಲಭ್ಯ ಕಡಿಮೆ ಇರುವುದರಿಂದ ಖಾಸಗಿ ವಾಹನಗಳನ್ನು ಅವಲಂಬಿಸುವಂತಾಗಿದೆ.

ನಗರದೊಳಗೆ ಬಾರದ ಬಸ್: ಬೆಳಿಗ್ಗೆ 10 ಗಂಟೆಯ ನಂತರ ಹಾಸನ ನಗರದೊಳಗೆ ಸಾರಿಗೆ ಬಸ್ ಬಾರದಂತೆ ನಿರ್ಬಂಧಿಸಲಾಗಿದೆ. ಇದರಿಂದ ಚನ್ನರಾಯಪಟ್ಟಣ, ಬೆಂಗಳೂರು, ಕುಣಿಗಲ್, ಹಿರೀಸಾವೆ ಸೇರಿದಂತೆ ಇತರೆಡೆಗಳಿಂದ ಬರುವ ಸಾವಿರಾರು ಪ್ರಯಾಣಿಕರು ನೂತನ ಬಸ್ ನಿಲ್ದಾಣದಲ್ಲಿ ಇಳಿದು ₹ 40 ರಿಂದ ₹ 80 ಪಾವತಿಸಿ ಆಟೋ ಅಥವಾ ಸಾರಿಗೆ ಬಸ್ ಹತ್ತಬೇಕಾದ ಪರಿಸ್ಥಿತಿ ಎದುರಾಗಿದೆ .

ನಗರ ಸಾರಿಗೆ ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಸರ್ಕಾರಿ, ಖಾಸಗಿ ನೌಕರರು ಹಾಗೂ ಕಾಲೇಜು –ಶಾಲಾ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ಹಾಸನ ಬಸ್‌ನಿಲ್ದಾಣದಲ್ಲಿ ಬಸ್‌  ಹತ್ತಲು ಮುಗಿಬಿದ್ದಿದ್ದ ಪ್ರಯಾಣಿಕರು.
ಹಾಸನ ಬಸ್‌ನಿಲ್ದಾಣದಲ್ಲಿ ಬಸ್‌  ಹತ್ತಲು ಮುಗಿಬಿದ್ದಿದ್ದ ಪ್ರಯಾಣಿಕರು.
ಚನ್ನರಾಯಪಟ್ಟಣ–ಹಾಸನ ಮಾರ್ಗಮಧ್ಯದ ಗ್ರಾಮಗಳಲ್ಲಿ ಬಿಸಿಲಿನಲ್ಲಿಯೇ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು.
ಚನ್ನರಾಯಪಟ್ಟಣ–ಹಾಸನ ಮಾರ್ಗಮಧ್ಯದ ಗ್ರಾಮಗಳಲ್ಲಿ ಬಿಸಿಲಿನಲ್ಲಿಯೇ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು.
ನಗರದೊಳಗೆ ಬಸ್ ಬರೆದಿದ್ದರೆ ಕೆಎಂಎಫ್ ಡೈರಿ ರೈಲು ನಿಲ್ದಾಣ ಹಾಗೂ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ‌. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಪೂರ್ಣಚಂದ್ರ ಕಾಲೇಜು ವಿದ್ಯಾರ್ಥಿ
ಬೆಳಿಗ್ಗೆ ಮತ್ತು ಸಂಜೆ ಹೆಚ್ಚಿನ ಬಸ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸೂರಿನ ವ್ಯವಸ್ಥೆಗೆ ಸೂಚಿಸಲಾಗುವುದು. ವಾಹನಗಳಲ್ಲಿ ಆಗುತ್ತಿರುವ ತೊಂದರೆ ನಿವಾರಣೆಗೆ ತರಬೇತಿ ನೀಡಲಾಗುತ್ತಿದೆ.
ದೀಪಕ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ
ವಾಯು‌ಮಾಲಿನ್ಯ ಬಸ್‌ಗಳ ಕೊರತೆ
ನಡುವೆಯೇ ಡಕೋಟ ಬಸ್‌ಗಳ ಸಂಚಾರವೂ ಹೆಚ್ಚುತ್ತಿದೆ. ಇದರಿಂದ ಪ್ರಯಾಣಿಕರ ಸುರಕ್ಷತೆ ಹಾಗೂ ಸಮಯಕ್ಕೆ ಸರಿಯಾಗಿ ಪ್ರಯಾಣ ಸಾಧ್ಯವಾಗುತ್ತಿಲ್ಲ. ಕೇಂದ್ರ ಸಾರಿಗೆ ನಿಗಮದಿಂದ ಅಗತ್ಯ ಬಸ್‌ಗಳನ್ನು ಒದಗಿಸಲಾಗುತ್ತಿಲ್ಲ. ಇದರಿಂದ ಇಲ್ಲಿನ ಸಾರಿಗೆ ನಿಗಮದಿಂದ ಹಳೆಯ ಬಸ್‌ಗಳನ್ನು ಓಡಿಸಲಾಗುತ್ತಿದ್ದು ರಸ್ತೆ ಮಧ್ಯದಲ್ಲಿ ಕೆಟ್ಟ ನಿಲ್ಲುತ್ತಿರುವ ಘಟನೆಗಳು ಹೆಚ್ಚಿದೆ ಎಂದು ಪ್ರಯಾಣಿಕರು ದೂರುತ್ತಿದ್ದಾರೆ. ಸಾರಿಗೆ ನಿಗಮದಿಂದ ವಾಯುಮಾಲಿನ್ಯ ನಿಯಂತ್ರಣಕ್ಕೂ ಸಮರ್ಪಕ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ‌ ಕೆಲವು ಬಸ್‌ಗಳಿಂದ ರೈಲು ಉಗಿಬಂಡಿಯಲ್ಲಿ ಬರುವಂತೆ ಹೊಗೆ ಹೊರ ಸೂಸುವ ಬಸ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆ.
ನಿಲ್ದಾಣ ಇದ್ದರೂ ಸೂರಿಲ್ಲ
ಬೆಂಗಳೂರು- ಮಂಗಳೂರು ಚತುಷ್ಪಥ ರಸ್ತೆ ನಿರ್ಮಾಣವಾಗುತ್ತಿದೆ‌. ಈ ನಡುವೆ ಅಲ್ಲಲ್ಲಿ ನಿಲ್ದಾಣಗಳು ಇದೆಯಾದರೂ ಸೂರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ. ಬಿಸಿಲು ಮಳೆ–ಗಾಳಿ ಎನ್ನದೇ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಬಿಸಿಲು ಮಳೆಯ ಹೊಡೆತಕ್ಕೆ ಸಿಲುಕುವಂತಾಗಿದೆ. ‘ಸಾರಿಗೆ ಇಲಾಖೆಗೆ ಲಕ್ಷಾಂತರ ರೂಪಾಯಿ ಆದಾಯ ಬಂದರೂ ಸಹ ಪ್ರಯಾಣಿಕರ ಹಿತದೃಷ್ಟಿಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಮಾತ್ರ ಇಲಾಖೆ ಮರೆತಂತಿದೆ. ನಿಲ್ದಾಣಗಳ ನಿರ್ಮಾಣ ಸಂಬಂಧ ಹೆದ್ದಾರಿ ಪ್ರಾಧಿಕಾರದೊಂದಿಗೆ ಅಥವಾ ಸ್ಥಳೀಯ ಆಡಳಿತದೊಂದಿಗೆ ಪತ್ರ ವ್ಯವಹಾರ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬಹುದು. ಆದರೆ ಉದಾಸೀನ ಮನೋಭಾವದಿಂದ ಪ್ರಯಾಣಿಕರು ಪರದಾಡುವಂತೆ ಆಗಿದೆ’ ಎಂದು ಪ್ರಯಾಣಿಕ ಸುಬ್ರಹ್ಮಣ್ಯ ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT