ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಕ್ಲರ್ಕ್‌: ಎಚ್‌.ಡಿ.ಕುಮಾರಸ್ವಾಮಿ

ದೇವೇಗೌಡರ ವಿಕೆಟ್‌ ಉರುಳಿಸಲು ಪ್ರೀತಂ ಬ್ರಹ್ಮನಲ್ಲ: ಸಿ.ಎಂ
Last Updated 15 ಫೆಬ್ರುವರಿ 2019, 13:53 IST
ಅಕ್ಷರ ಗಾತ್ರ

ಹಾಸನ: ‘ನಾನು ಯಾರ ಕ್ಲರ್ಕ್‌ ಅಲ್ಲ, ಬದಲಾಗಿ ನಾಡಿನ ಆರೂವರೆ ಕೋಟಿ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಕ್ಲರ್ಕ್’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

ಚನ್ನರಾಯಪಟ್ಟಣ ತಾಲ್ಲೂಕಿನ ಬೀರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದ ಕ್ಲರ್ಕ್’ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿಕೆಗೆ ಗರಂ ಆದ ಸಿ.ಎಂ., ‘ನಾನು ಆಡದೇ ಇರುವ ಮಾತನ್ನು ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ಪದೇ ಪದೇ ಹೇಳುತ್ತಿರುವುದು ಅವರ ಅಭಿರುಚಿ ತೋರಿಸುತ್ತದೆ’ ಎಂದು ಟಾಂಗ್ ಕೊಟ್ಟರು.

‘ದೇಶದಲ್ಲಿ ಪ್ರಧಾನಿ ಮೋದಿ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ. ಆದರೆ ರಾಜ್ಯದಲ್ಲಿ ಅವರ ಪಕ್ಷದ ರಾಜ್ಯಾಧ್ಯಕ್ಷರು, ಆಡಳಿತ ಪಕ್ಷಗಳ ಶಾಸಕರಿಗೆ ಕೋಟಿ ಕೋಟಿ ಆಮಿಷ ಕೊಟ್ಟು ಬಿಜೆಪಿಗೆ ಆಹ್ವಾನ ಮಾಡುತ್ತಿದ್ದಾರೆ. ಇಷ್ಟು ಹಣ ಅವರಿಗೆ ಎಲ್ಲಿಂದ ಬಂತು. ಈ ಬಗ್ಗೆ ಅಮಿತ್ ಷಾ ಮಾತನಾಡಿದರೆ ನಾನು ಮೆಚ್ಚುವೆ’ ಎಂದು ವ್ಯಂಗ್ಯವಾಡಿದರು.

‘ಆಪರೇಷನ್ ಸಂಬಂಧ ಯಡಿಯೂರಪ್ಪ ನಡೆಸಿರುವ ಆಡಿಯೊ ಸಂಭಾಷಣೆ ಅವರದೇ ಎನ್ನುವುದನ್ನು ಯಾರು ಬೇಕಾದರೂ ಹೇಳುತ್ತಾರೆ. ಈ ಬಗ್ಗೆ ಎಸ್ ಐ ಟಿ ತನಿಖೆ ನಡೆಸುವಂತೆ ಗೃಹ ಇಲಾಖೆಗೆ ಸೂಚಿಸಲಾಗಿದೆ’ ಎಂದರು.

‘ಆಪರೇಷನ್ ಕಮಲದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಕಮಲ ನಾಯಕರು ಯತ್ನಿಸಿದರು. ನನಗೆ ದೇವರ ಶ್ರೀರಕ್ಷೆ ಇದ್ದು, ನನ್ನ ಅಧಿಕಾರಾವಧಿಯನ್ನು ದೇವರೇ ನಿರ್ಧರಿಸಿದ್ದಾನೆ. ಸಮ್ಮಿಶ್ರ ಸರ್ಕಾರ ಕಲ್ಲು ಬಂಡೆ ರೀತಿ ಇದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಳಿಕ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದ ಕುಮಾರಸ್ವಾಮಿ, ‘ಹಾಸನ ಕ್ಷೇತ್ರದ ಬಿಜೆಪಿ ಶಾಸಕರ ಮೇಲೆ ಹಲ್ಲೆ ಮಾಡಿಸುವಷ್ಟರ ಮಟ್ಟಿಗೆ ಕೀಳು ರಾಜಕಾರಣ ಮಾಡುವ ಅವಶ್ಯಕತೆ ನಮಗಿಲ್ಲ. ಮಾಧ್ಯಮಗಳ ಮೂಲಕ ಅನಗತ್ಯವಾಗಿ ತೇಜೋವಧೆ ಮಾಡಲಾಗುತ್ತಿದೆ. ದೇವೇಗೌಡರ ವಿಕೆಟ್ ತೆಗೆಯಲು ಇವರೇನು ಬ್ರಹ್ಮ ಅಲ್ಲಾ’ ಎಂದು ಶಾಸಕ ಪ್ರೀತಂ ಗೌಡ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಸಂಸದ ಎಚ್.ಡಿ. ದೇವೇಗೌಡ ಮಾತನಾಡಿ, ‘ಉಗ್ರರ ಗುಂಡಿಗೆ 42ಕ್ಕೂ ಹೆಚ್ಚು ಸಿಆರ್ ಪಿ ಎಫ್ ಯೋಧರು ಹತರಾಗಿದ್ದಾರೆ. ನಾನು ಪ್ರಧಾನಿಯಾಗಿದ್ದ 10 ತಿಂಗಳ ಅವಧಿಯಲ್ಲಿ ಜಮ್ಮು ಕಾಶ್ಮೀರಕ್ಕೆ 5 ಸಲ ಭೇಟಿ ನೀಡಿದ್ದೆ, ಒಂದು ಸಣ್ಣ ಘಟನೆಯೂ ನಡೆದಿರಲಿಲ್ಲ’ ಎಂದುಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT