ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಕಲೇಶಪುರ ಪುರಸಭೆ: ಬಿಜೆಪಿ ಬೆಂಬಲಿಸದಿದ್ದರೂ ಜೆಡಿಎಸ್‌ಗೆ ಅಧಿಕಾರ

ಅಧ್ಯಕ್ಷರಾಗಿ ಜ್ಯೋತಿ, ಉಪಾಧ್ಯಕ್ಷರಾಗಿ ಝರೀನಾ ಆಯ್ಕೆ
Published 27 ಆಗಸ್ಟ್ 2024, 6:02 IST
Last Updated 27 ಆಗಸ್ಟ್ 2024, 6:02 IST
ಅಕ್ಷರ ಗಾತ್ರ

ಸಕಲೇಶಪುರ: ಇಲ್ಲಿಯ ಪುರಸಭೆ ಅಧ್ಯಕ್ಷರಾಗಿ ಜೆಡಿಎಸ್‌ನ ಜ್ಯೋತಿ ರಾಜ್‌ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಝರೀನಾ ಜಾಕೀರ್ ಹುಸೇನ್ ಸೋಮವಾರ ಚುನಾಯಿತರಾದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ ಜ್ಯೋತಿ ರಾಜ್‌ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಝರೀನಾ ಹಾಗೂ ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಅನ್ನಪೂರ್ಣ, ಉಪಾಧ್ಯಕ್ಷ ಸ್ಥಾನಕ್ಕೆ ರೇಶ್ಮಾ ಬಾನು ಸ್ಪರ್ಧಿಸಿದ್ದರು.

23 ಸದಸ್ಯರಲ್ಲಿ 3 ಸದಸ್ಯರು ಗೈರು ಹಾಜರಾಗಿದ್ದರು. ಉಳಿದ 20 ಸದಸ್ಯರಲ್ಲಿ ಜೆಡಿಎಸ್‌ನ ಅಭ್ಯರ್ಥಿಗಳಿಗೆ ತಲಾ 15 ಮತಗಳು ಬಂದರೆ, ಕಾಂಗ್ರೆಸ್‌ನ ಅಧ್ಯಕ್ಷ, ಉಪಾಧ್ಯಕ್ಷ ಆಕಾಂಕ್ಷಿಗಳು ತಲಾ 5 ಮತಗಳನ್ನು ಪಡೆದರು. ತಹಶೀಲ್ದಾರ್ ಜಿ. ಮೇಘನಾ ಚುನಾವಣಾ ಅಧಿಕಾರಿಯಾಗಿದ್ದರು.

ಮೈತ್ರಿ ಪಾಲಿಸದ ಬಿಜೆಪಿ: ರಾಜ್ಯದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರೂ ಸಹ ಪುರಸಭಾ ಚುನಾವಣೆಯಲ್ಲಿ ಶಾಸಕ ಸಿಮೆಂಟ್ ಮಂಜು ಹಾಗೂ ಬಿಜೆಪಿ ಸದಸ್ಯರು ಚುನಾವಣೆಗೆ ಗೈರು ಹಾಜರಾಗುವ ಮೂಲಕ ಮೈತ್ರಿ ಪಾಲನೆಯಿಂದ ದೂರ ಉಳಿಯುವ ಮೂಲಕ ಚರ್ಚೆಗೆ ವೇದಿಕೆ ಮಾಡಿಕೊಟ್ಟಿದ್ದಾರೆ.

ವಿಜಯೋತ್ಸವದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, 16 ತಿಂಗಳಿನಿಂದ ಪುರಸಭೆಗೆ ಚುನಾಯಿತರಾದ ಸದಸ್ಯರಿಗೆ ಅಧಿಕಾರವೇ ಇಲ್ಲವಾಗಿತ್ತು. ಆಡಳಿತ ಅಧಿಕಾರಿಗಳೇ ಪುರಸಭೆ ಆಡಳಿತ ನಡೆಸಿದ ವ್ಯವಸ್ಥೆ ಪ್ರಜಾಪ್ರಭುತ್ವವನ್ನು ಪ್ರಶ್ನೆ ಮಾಡುವಂತಾಗಿದೆ. ಇದರಿಂದಾಗಿ ಪುರಸಭೆ ಆಡಳಿತಕ್ಕೆ ಹಿನ್ನಡೆಯಾಗಿ, ಸಾರ್ವಜನಿಕರಿಗೆ ಸಮಸ್ಯೆ ಆಗಿತ್ತು ಎಂದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನಗಳು ಜೆಡಿಎಸ್‌ಗೆ ದೊರೆತಿವೆ. ‌ಇವರ ಮೇಲೆ ಬಹಳ ಜವಾಬ್ದಾರಿಗಳಿದ್ದು, ಅಭಿವೃದ್ಧಿಗೆ ಪೂರಕವಾಗಿ ಪಕ್ಷ ಹಾಗೂ ಎಲ್ಲ ಸದಸ್ಯರು ಅವರೊಂದಿಗೆ ಇರುತ್ತಾರೆ. ರಾಜ್ಯ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವ ಅಗತ್ಯವಿದೆ ಎಂದರು.

ಜಿ.ಪಂ. ಮಾಜಿ ಸದಸ್ಯೆ ಚಂಚಲ ಕುಮಾರಸ್ವಾಮಿ, ಸುಪ್ರದೀಪ್ತ್ ಯಜಮಾನ್, ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ದೊಡ್ಡದೀಣೆ ಸ್ವಾಮಿ, ಟಿಎಪಿಸಿಎಂಎಸ್ ಸದಸ್ಯ ಜಾತಹಳ್ಳಿಪುಟ್ಟಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷರಾದ ಎಸ್‌.ಡಿ. ಆದರ್ಶ, ಯಾದಗಾರ್ ಇಬ್ರಾಹಿಂ, ಕಾಡಪ್ಪ, ಇತರ ಸದಸ್ಯರು ಪುರಸಭಾ ಮುಖ್ಯಾಧಿಕಾರಿ ನಟರಾಜ್ ಇದ್ದರು.

ಎರಡು ತಿಂಗಳಿಂದ ಭಾರಿ ಮಳೆ ಸುರಿದು ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ. ಚರಂಡಿಗಳು ಹಾಳಾಗಿವೆ. ಕುಶಾಲನಗರ ಹಾಗೂ ಇನ್ನಿತರ ಕಡೆ ಮೂಲ ಸೌಲಭ್ಯಗಳಿಗಾಗಿ ವಿಶೇಷ ಅನುದಾನ ಅಗತ್ಯವಿದೆ.
-ಎಚ್‌.ಕೆ. ಕುಮಾರಸ್ವಾಮಿ, ಮಾಜಿ ಶಾಸಕ
ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡುವ ಮೂಲಕ ಜವಾಬ್ದಾರಿ ಹೆಚ್ಚಿಸಿದ್ದಾರೆ. ಸದಸ್ಯರು ಪಕ್ಷದ ಮುಖಂಡರು ಸಾರ್ವಜನಿಕರ ಸಲಹೆ ಪಡೆದು ಅಭಿವೃದ್ಧಿ ಕೆಲಸ ಮಾಡುತ್ತೇನೆ.
-ಜ್ಯೋತಿ ರಾಜಕುಮಾರ್, ನೂತನ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT