ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ಹಾವಳಿ: ಶ್ರೀಲಂಕಾಗೆ ಅಧ್ಯಯನ ತಂಡ

ವೈಜ್ಞಾನಿಕ ಕ್ರಮಕ್ಕೆ ಸಿಎಂ ಅಧ್ಯಕ್ಷತೆಯಲ್ಲಿ ಮತ್ತೊಂದು ಸಭೆ: ಸಚಿವ ರೇವಣ್ಣ
Last Updated 1 ಜುಲೈ 2019, 13:52 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಆನೆ ಹಾವಳಿ ನಿಯಂತ್ರಣ ಕ್ರಮಗಳ ಕುರಿತು ಅಧ್ಯಯನ ನಡೆಸಲು ಶೀಘ್ರದಲ್ಲೇ ತಜ್ಞರ ತಂಡವನ್ನು ಶ್ರೀಲಂಕಾಗೆ ಕಳುಹಿಸಲಾಗುವುದು ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

ಜಿಲ್ಲಾ ಮಟ್ಟದ ಆನೆ ಟಾಸ್ಕ್‌ ಫೋರ್ಸ್‌ ಸಮಿತಿ ಸಭೆ ನಡೆಸಿದ ಸಚಿವರು, ವನ್ಯ ಜೀವಿಗಳ ಹಾವಳಿ ಶಾಶ್ವತ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಎಲ್ಲಾ ರೀತಿಯ ಅಧ್ಯಯನ, ಅಭಿಪ್ರಾಯ ಸಂಗ್ರಹ ಅಗತ್ಯ ಎಂದರು.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಹಲವು ವರ್ಷಗಳಿಂದ ಆನೆ ಹಾವಳಿ ಮುಂದುವರೆದಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ. ಜಿಲ್ಲಾಧಿಕಾರಿ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು, ಪರಿಸರವಾದಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಕ್ರೂಢೀಕರಿಸಿ ವ್ಯವಸ್ಥಿತ ಪ್ರಸ್ತಾವ ಸಿದ್ಧಪಡಿಸಿ ಸಲ್ಲಿಸುವಂತೆ ಸಚಿವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಎಲ್ಲರ ಅಭಿಪ್ರಾಯ ಆಲಿಸಿದ ರೇವಣ್ಣ, ‘ಆನೆ ಹಾವಳಿ ತಡೆಗೆ ಹಾಗೂ ವೈಜ್ಞಾನಿಕ ರೀತಿಯ ಪರಿಹಾರ ಕ್ರಮಗಳಿಗೆ ಮುಂಬರುವ ವಿಧಾನಸಭಾ ಅಧಿವೇಶನಕ್ಕೆ ಮುನ್ನಾ ಅಥವಾ ನಂತರ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಇನ್ನೊಂದು ಸುತ್ತಿನ ಪ್ರಮುಖ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಅರಣ್ಯ ಇಲಾಖೆಯಿಂದ ಈಗಾಗಲೇ ನೇಮಕ ಮಾಡಲ್ಪಟ್ಟಿರುವ 120 ಜನರ ತಂಡದ ಮೂಲಕ ಆನೆ ಓಡಿಸುವ, ಆನೆಗಳ ಓಡಾಟದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡುತ್ತಿರುವ ಕ್ರಮ ಸ್ವಾಗಾತಾರ್ಹ. ಆದರೆ ಇದು ಇನ್ನಷ್ಟು ಪರಿಣಾಮಕಾರಿಯಾಗಬೇಕು ಎಂದು ಸಚಿವರು ಅಭಿಪ್ರಾಯ ಪಟ್ಟರು.

ಆಲೂರು- ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಜಿಲ್ಲೆಯ ಮಲೆನಾಡು ಭಾಗಕ್ಕೆ ಪ್ರತ್ಯೇಕ ವನ್ಯಜೀವಿ ಉಪವಿಭಾಗ ಅಗತ್ಯವಿದೆ. ಅರಣ್ಯ ಕಾಲೇಜು ಸ್ಥಾಪನೆ ಕೂಡ ಬೇಕಾಗಿದೆ ಎಂದು ಸಭೆ ಗಮನ ಸೆಳೆದರು.

ಆನೆ ಹಾಗೂ ವನ್ಯಜೀವಿಗಳ ಹಾವಳಿಯಿಂದ ಆಗುವ ನಷ್ಟಕ್ಕೆ ಸರಿಯಾದ ಪರಿಹಾರ ಸಕಾಲದಲ್ಲಿ ವಿತರಣೆಯಾಗಬೇಕು. ಶೇಕಡಾ 50:50ರ ಅನುಪಾತದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಇದನ್ನು ಹಂಚಿಕೊಳ್ಳಬೇಕು ಎಂದು ಶಾಸಕರು ಹೇಳಿದರು.

ಆನೆ ಕಾರಿಡಾರ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲು ನಿಯೋಗ ಕರೆದೊಯ್ಯುವಂತೆ ಅವರು ಒತ್ತಾಯಿಸಿದರು.

ಪರಿಸರವಾದಿಗಳಾದ ಅತ್ತಿಹಳ್ಳಿ ದೇವರಾಜ್, ಕಿಶೋರ್ ಕುಮಾರ್, ಜಿ.ಆರ್.ಕೆಂಚೇಗೌಡ, ಬೆಳೆಗಾರರ ಒಕ್ಕೂಟದ ತೀರ್ಥ ಮಲ್ಲೇಶ್, ಅನಂತ ಸುಬ್ಬರಾವ್ ಅವರು ಆನೆ ಹಾವಳಿ ಹಾಗೂ ಪರಿಹಾರ ಕ್ರಮಗಳ ಕುರಿತು ಸಭೆಯಲ್ಲಿ ವಿವರಿಸಿದರು.

ಸಕಲೇಶಪುರ – ಆಲೂರು ತಾಲ್ಲೂಕು ವ್ಯಾಪ್ತಿಯಲ್ಲಿ ಆನೆ ಕಾರಿಡಾರ್, ನಾಗಾವರದಲ್ಲಿ ಆನೆ ಧಾಮ, ಕರಡಿಬೆಟ್ಟ ಸೇರಿದಂತೆ ಅರಣ್ಯ ಭಾಗದಲ್ಲಿ ಆನೆಗಳಿಗೆ ಆಹಾರ ಪ್ರಮಾಣ ಹೆಚ್ಚಾಗಿ ಲಭ್ಯವಾಗುವಂತೆ ಮಾಡುವುದು. ಶ್ರೀಲಂಕಾ ಮಾದರಿಯಲ್ಲಿ ರೈಲ್ವೆ ಕಂಬಿಗಳನ್ನು ಬಳಸಿ ತಡೆಗೋಡೆ ನಿರ್ಮಾಣ, ಅರಣ್ಯ ವ್ಯಾಪ್ತಿಯಲ್ಲಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ತಡೆ ನೀಡುವುದು, ಪರಿಹಾರ ಮೊತ್ತ ಹೆಚ್ಚಿಸುವುದು, ಆನೆ ಮತ್ತು ಕಾಡು ಪ್ರಾಣಿಗಳ ದಾಳಿಗಳ ನಿಯಂತ್ರಣಕ್ಕೆ ವ್ಯವಸ್ಥಿತ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾತನಾಡಿ, ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಉದ್ಯೋಗ ಖಾತರಿ ಯೋಜನೆಯಡಿ ಅರಣ್ಯ ವ್ಯಾಪ್ತಿಯಲ್ಲಿ ಕೆರೆಕಟ್ಟೆ, ಕಿಂಡಿ ಅಣೆಕಟ್ಟೆಗಳ ನಿರ್ಮಾಣ ಕಾರ್ಯವನ್ನು ಮಾಡಲು ಮುಂದಾದರೆ ಅರಣ್ಯ ಇಲಾಖೆ ಅದಕ್ಕೆ ಅನುಮತಿ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಗೊಂದಲಗಳು ಪರಿಹಾರವಾಗಬೇಕು. ಅರಣ್ಯ ಪ್ರದೇಶಗಳಲ್ಲಿ ನೀರಿನ ಸಂಗ್ರಹಕ್ಕೆ ಕ್ರಮಗಳಾಗಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇಲಾಖೆಗಳ ನಡುವಿನ ಗೊಂದಲ ತಕ್ಷಣ ಬಗೆಹರಿಸಿಕೊಂಡು ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ಕಡೆ ಕಿಂಡಿ ಅಣೆಕಟ್ಟೆಗಳನ್ನು ನಿರ್ಮಿಸಿ ವನ್ಯ ಜೀವಿಗಳಿಗೆ ಕುಡಿಯಲು ನೀರು ಪೂರೈಸಿ ಎಂದು ತಾಕೀತು ಮಾಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು ಅವರು ಈ ವರೆಗೆ ತೆಗೆದು ಕೊಂಡಿರುವ ತಾತ್ಕಾಲಿಕ ಹಾಗೂ ಶಾಶ್ವತ ಕ್ರಮಗಳನ್ನು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ವಿವರಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ಉಪವಿಭಾಗಾಧಿಕಾರಿಯವರಾದ ಎಚ್.ಎಲ್.ನಾಗರಾಜ್, ಕವಿತಾ ರಾಜಾರಾಂ, ತಹಶೀಲ್ದಾರರು, ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT