ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಸಕಲ ಸೌಲಭ್ಯ ವಂಚಿತ ಸುಳ್ಳಕ್ಕಿ–ಬೇಡರಜಗ್ಲಿ, ಸಂಕಷ್ಟದಲ್ಲಿ ನಿವಾಸಿಗಳು

ಕೆಸರುಮಯ ರಸ್ತೆ, ವಿದ್ಯುತ್‌ ಸಂಪರ್ಕವೇ ಇಲ್ಲದ ಮನೆಗಳು
Last Updated 13 ಸೆಪ್ಟೆಂಬರ್ 2020, 6:37 IST
ಅಕ್ಷರ ಗಾತ್ರ

ಹಾಸನ: ಕೆಸರುಮಯ ರಸ್ತೆಗಳು, ಕಲುಷಿತಗೊಂಡ ಕೊಳವೆ ಬಾವಿ ನೀರು, ವಿದ್ಯುತ್‌ ಸಂಪರ್ಕವೇ ಇಲ್ಲದ ಮನೆಗಳು, ಐವತ್ತು ಮನೆಗಳಿಗೆ ಒಂದೇ ಕೊಳವೆ ಬಾವಿ...

ಹೀಗೆ ಹತ್ತಾರು ಸಮಸ್ಯೆಗಳನ್ನು ಹೊದ್ದುಕೊಂಡಿರುವ ಸುಳ್ಳಕ್ಕಿ, ಬೇಡರಜಗ್ಲಿ ಕುಗ್ರಾಮಗಳಿಗೆ ಸೌಲಭ್ಯವೇ
ಮರೀಚಿಕೆಯಾಗಿದೆ. ದಶಕಗಳಿಂದ ಸಮಸ್ಯೆಗಳ ನಡುವೆಯೇ ಜನರು ಜೀವನ ನಡೆಸುತ್ತಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಎರಡು ಗ್ರಾಮಗಳು ಹಲವು ವರ್ಷಗಳಿಂದಮೂಲ ಸೌಕರ್ಯದಿಂದ ವಂಚಿತವಾ ಗಿದೆ. ಇಲ್ಲಿ 50ಕ್ಕೂ ಹೆಚ್ಚು ಮನೆಗಳಿವೆ.

ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಬಸ್‌ ಸಂಚಾರ ಕಂಡಿಲ್ಲ. ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಎರಡು ಕಿ.ಮೀ. ಕಾಲ್ನಡಿಗೆಯಲ್ಲಿ ಮಿಲ್‌ ನಿಲ್ದಾಣದವರೆಗೂ ಸಾಗಿ, ಅಲ್ಲಿಂದ ಬಸ್‌ನಲ್ಲಿ ಸಕಲೇಶಪುರ ಪಟ್ಟಣಕ್ಕೆ ಹೋಗಬೇಕು. ಗ್ರಾಮಸ್ಥರು, ವಿದ್ಯಾರ್ಥಿಗಳು ನಿತ್ಯ ಯಾತನೆ ಅನು ಭವಿಸಬೇಕಾಗಿದೆ. ಅಪರೂಪಕ್ಕೆ ಬರುವ ಆಟೊಗಳನ್ನು ಅವಲಂಬಿಸಿದ್ದಾರೆ.

ಕೊಳವೆ ಬಾವಿ ನೀರು ಕಲುಷಿತಗೊಂಡಿದ್ದು, ನೀರು ತರಲು ಅರ್ಧ ಕಿಲೋ ಮೀಟರ್‌ ಸಾಗಬೇಕು. ‌ಕಾಡಾನೆ ಸಮಸ್ಯೆಯಿಂದ ಜನರು ಮನೆಯಿಂದ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.

‘ಗ್ರಾಮದಲ್ಲಿ ಸುಮಾರು 30 ವರ್ಷಗಳಿಂದ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಗ್ರಾಮದ 50ಕ್ಕೂ ಹೆಚ್ಚು ಮನೆಗಳಿಗೆ ಒಂದೇ ಕೊಳವೆ ಬಾವಿ ಇದೆ. ಅರ್ಧ ಕಿಲೋ ಮೀಟರ್‌ ದೂರದಿಂದ ನೀರು ಹೊತ್ತು ತರಬೇಕಿದೆ. ಕೊಳವೆ ಬಾವಿ ಕೆಟ್ಟು ಹೋದರೆ ಪರ್ಯಾಯ ವ್ಯವಸ್ಥೆ ಇಲ್ಲ. ಮೂರು ವರ್ಷದ ಹಿಂದೆ ಕೊಳವೆ ಬಾವಿ ಕೊರೆಸಲಾಗಿದೆ. ಆದರೆ ನೀರು ಕುಡಿಯಲು ಯೋಗ್ಯವಾಗಿಲ್ಲ. ಇದರ ಪಕ್ಕವೇ ಮತ್ತೊಂದು ಕೊಳವೆ ಬಾವಿ ಕೊರೆಸಲಾಗಿದೆ. ವಿದ್ಯುತ್‌ ಸಂಪರ್ಕ ಈವರೆಗೂ ಕಲ್ಪಿಸಿಲ್ಲ’ ಎಂದು ಗ್ರಾಮದ ಯುವಕ ದಿಲಿಪ್ ಕುಮಾರ್‌ ಅಳಲು ತೋಡಿಕೊಂಡರು.

‘ವಿದ್ಯುತ್‌ ದೀಪಗಳು ಬೆಳಗದ ಕಾರಣ ರಾತ್ರಿ ಇಡೀ ಗ್ರಾಮದಲ್ಲಿ ಕತ್ತಲೆ ಆವರಿಸಿರುತ್ತದೆ. ಕಾಡಾನೆ ಸಮಸ್ಯೆ ಇರುವುದರಿಂದ ರಾತ್ರಿ ವೇಳೆ ಮನೆಯಿಂದ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿದ್ಯುತ್‌ ಸೌಲಭ್ಯ ಕಲ್ಪಿಸಿಕೊಡಬೇಕು’ಎಂದು ಬೇಡರಜಗ್ಲಿಯ ಮಲ್ಲೇಶ್‌ ಒತ್ತಾಯಿಸಿದರು.

‘ಗ್ರಾಮದಲ್ಲಿ 50 ಹೆಚ್ಚು ಮನೆಗಳಿದ್ದು, ಸಭೆ, ಸಮಾರಂಭಕ್ಕೆ ಸಮುದಾಯ ಭವನ ಇಲ್ಲ. ಸ್ತ್ರೀ ಶಕ್ತಿ ಸಂಘ, ಇತರೆ ಸಂಘಗಳ ಸಭೆಯನ್ನು ಮನೆಗಳ ಅಂಗಳದಲ್ಲಿ ಮಾಡಬೇಕಿದೆ. ಗ್ರಾಮಸ್ಥರೇ ತಗಡಿನ ಶೀಟ್‌ಗಳಿಂದ ತಾತ್ಕಾಲಿಕವಾಗಿ ಸಮುದಾಯ ಭವನ ನಿರ್ಮಿಸಿಕೊಂಡಿದ್ದಾರೆ. ವ್ಯವಸ್ಥಿತಿ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ. ಸಭೆ, ಸಮಾರಂಭ ನಡೆಸಲು ಬೇಡಜಗ್ಲಿ ಗ್ರಾಮದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಿಕೊಡಬೇಕು’ಎಂದು ಗ್ರಾಮಸ್ಥರಾದ ನಿಂಗರಾಜು, ಲೇಕೇಶ್‌ ಮತ್ತು ಜೆ.ಕೆ. ಅಭಿಲಾಷ್‌ ಒತ್ತಾಯಿಸಿದರು.

‘ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು 14ನೇ ಹಣಕಾಸು ಯೋಜನೆಯಲ್ಲಿ ₹1.30ಲಕ್ಷ ಅನುದಾನ
ಮೀಸಲಿರಿಸಲಾಗಿದೆ. ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ಸೆಸ್ಕ್‌ ಗೆ ಮನವಿ ಸಲ್ಲಿಸಲಾಗಿದೆ. ಸುಳ್ಳಕ್ಕಿ ಗ್ರಾಮಕ್ಕೆ ಸಮುದಾಯ ಭವನ ಮಂಜೂರಾಗಿದೆ. ಬೇಡರಜಗ್ಲಿ ಗ್ರಾಮದಲ್ಲಿ ಸಮುದಾಯ ಭವನಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೈ.ಡಿ.ದರ್ಶನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT