ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು | ಬಾರದ ಮಳೆ: ಬೆಳೆ ಉಳಿಸಿಕೊಳ್ಳಲು ರೈತರ ಹರಸಾಹಸ

Published 9 ಮೇ 2024, 7:19 IST
Last Updated 9 ಮೇ 2024, 7:19 IST
ಅಕ್ಷರ ಗಾತ್ರ

ಆಲೂರು: ತಾಲ್ಲೂಕಿನಲ್ಲಿ ಬೆಳೆದಿರುವ ಕಾಫಿ, ಶುಂಠಿ, ಅಡಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಬೆಳೆಗಾರರು ಹರಸಾಹಸ ಮಾಡುವಂತಾಗಿದೆ. ಜಲಾಶಯಗಳಲ್ಲಿ ನೀರು ಬರಿದಾಗಿದ್ದರೆ, ಮಳೆಯ ಲಕ್ಷಣಗಳೂ ಕಾಣುತ್ತಿಲ್ಲ. ಇದರಿಂದಾಗಿ ಕೊಳವೆಬಾವಿಯಲ್ಲಿ ಸಿಗುತ್ತಿರುವ ಅಲ್ಪಸ್ವಲ್ಪ ನೀರನ್ನೇ ಸ್ಪ್ರಿಂಕ್ಲರ್ ಮೂಲಕ ಬೆಳೆಗಳಿಗೆ ಹರಿಸುತ್ತಿದ್ದಾರೆ.

ಮಂಗಳವಾರ ಮಧ್ಯಾಹ್ನ ಕೇವಲ 10 ನಿಮಿಷ ವರ್ಷದ ಎರಡನೆ ಮಳೆ ಆಯಿತು. 20 ದಿನಗಳ ಹಿಂದೆ ಇದೇ ರೀತಿ ತುಂತುರು ಮಳೆ ಸುರಿದಿತ್ತು. ಅಂದು ಮಳೆಯಾದ ನಂತರ ಭೂಮಿಯಿಂದ ಧಗೆ ಏರಲು ಪ್ರಾರಂಭವಾಯಿತು. 36 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲು ಇದೆ.

ಈಗಾಗಲೇ ತಾಲ್ಲೂಕಿನಲ್ಲಿ ಬಹುತೇಕ ರೈತರು ಶುಂಠಿ ನಾಟಿ ಮಾಡಿದ್ದಾರೆ. ಮಳೆಯನ್ನೆ ಅವಲಂಬಿಸಿರುವ ಕೆಲ ರೈತರು, ಶುಂಠಿ ನಾಟಿ ಮಾಡಲು ತಯಾರು ಮಾಡಿಕೊಂಡಿದ್ದಾರೆ. ಕೃಷಿ ಕಾರ್ಮಿಕರ ಅಭಾವ ಮತ್ತು ತಾಲ್ಲೂಕಿನಲ್ಲಿ ಸುಮಾರು ಐದು ದಶಕಗಳಿಂದ ಕಾಡಾನೆ ದಾಳಿ ಸಮಸ್ಯೆಯಿಂದಾಗಿ ಬಹುತೇಕ ರೈತರು, ಬಹುವಾರ್ಷಿಕ ಬೆಳೆಗಳಾದ ಅಡಿಕೆಗೆ ಮಾರು ಹೋಗಿದ್ದಾರೆ. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೊಳವೆ ಬಾವಿಗಳನ್ನೇ ಅವಲಂಬಿಸಬೇಕಾಗಿದೆ.

ಈ ವರ್ಷ ಕಸಬಾ, ಪಾಳ್ಯ ಮತ್ತು ಕುಂದೂರು ಹೋಬಳಿಯಲ್ಲಿ ಮಳೆ ಪ್ರಮಾಣ ಸಂಪೂರ್ಣ ಕುಸಿದಿದ್ದು, ಕೆರೆ ಕಟ್ಟೆಗಳಲ್ಲಿ ನೀರಿಲ್ಲ. ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ಕೊಳವೆ ಬಾವಿ ನೀರು ನಂಬಿಕೊಂಡಿದ್ದ ಕೆಲ ರೈತರು ಹೊಲಗಳಲ್ಲಿಯೂ ಅಡಿಕೆ ಗಿಡಗಳನ್ನು ಬೆಳೆಯಲು ಪ್ರಾರಂಭ ಮಾಡಿದ್ದಾರೆ.

ಆರು ತಿಂಗಳಿನಿಂದ ಮಳೆಯಿಲ್ಲದೇ, ಕೊಳವೆ ಬಾವಿ ನೀರು ಸಿಗದೇ ಅಡಿಕೆ ಗಿಡಗಳು ಒಣಗುತ್ತಿವೆ. ಕೊಳವೆ ಬಾವಿಯಲ್ಲಿ ಅಲ್ಪಸ್ವಲ್ಪ ನೀರು ಪಡೆದವರು, ಅಡಿಕೆ ಗಿಡಗಳ ಜೊತೆಗೆ ಕಾಫಿ ಗಿಡಗಳನ್ನು ಸಹ ಸ್ಪ್ರಿಂಕ್ಲರ್ ಮೂಲಕ ನೀರುಣಿಸಿ ಉಳಿಸಿಕೊಂಡಿದ್ದಾರೆ.

ಕಾಫಿ ಗಿಡಗಳು ಒಣಗಿದ ಸ್ಥಿತಿಯನ್ನು ಕಂಡಿರಲಿಲ್ಲ. ಆರು ತಿಂಗಳಿನಿಂದ ಮಳೆಯಿಲ್ಲದೆ ಗಿಡಗಳು ಒಣಗಲು ಪ್ರಾರಂಭವಾದವು. ಕೊಳವೆ ಬಾವಿಯಲ್ಲಿ ಸಿಗುವ ಅಲ್ಪ ಪ್ರಮಾಣದ ನೀರನ್ನೇ ಹರಿಸುವ ಮೂಲಕ ಕಾಫಿ ಗಿಡಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಬೆಳೆಗಾರರು ಹೇಳುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಬಿತ್ತನೆಗೆ ಸಾಕಷ್ಟು ಅವಕಾಶವಿದೆ. ಭಯಪಡದೆ ಹದ ಮಳೆಯಾದಾಗ ಬಿತ್ತನೆ ಮಾಡಿ.
ಕೆ.ಎಚ್‌.ರಮೇಶ್‌ಕುಮಾರ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಆರು ತಿಂಗಳು ಮಳೆಯಾಗದೇ ಕಾಫಿ ಗಿಡ ಒಣಗುತ್ತಿವೆ. ಕೊಳವೆ ಬಾವಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಅದೇ ಬಾವಿಯನ್ನು ಆಳಕ್ಕೆ ಕೊರೆಸಿ ನೀರು ಸಿಂಪಡಿಸುತ್ತಿದ್ದೇವೆ
ಎಚ್.ಎ. ಯೋಗೇಶ್ ಕಾಫಿ ಬೆಳೆಗಾರ ಹೊಳಲು ಎಸ್ಟೇಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT