ಭಾನುವಾರ, ಜುಲೈ 3, 2022
27 °C
ಜನತಾ ಜಲಧಾರೆ ಸಮಾವೇಶದಲ್ಲಿ ಜೆಡಿಎಸ್ ವರಿಷ್ಠ

ನೀರಿನ ಹೋರಾಟದಲ್ಲಿ ಒಗ್ಗಟ್ಟಿನ ಕೊರತೆ: ಎಚ್.ಡಿ.ದೇವೇಗೌಡ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಜನತಾ ಜಲಧಾರೆ ಆರಂಭಿಸಿರುವುದು ರಾಜಕೀಯಕ್ಕಾಗಿ ಅಲ್ಲ ಎಂಬುದನ್ನು ಕಾಂಗ್ರೆಸ್, ಬಿಜೆಪಿ ಅರ್ಥ ಮಾಡಿಕೊಳ್ಳಬೇಕು. ನೀರಿನ ಹೋರಾಟ ವಿಚಾರದಲ್ಲಿ ಒಗ್ಗಟ್ಟಿನ ಕೊರತೆಯಿಂದ ರಾಜ್ಯ ಕೆಟ್ಟ ಸನ್ನಿವೇಶ ಎದುರಿಸುತ್ತಿದೆ’ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ನಡೆದ ಜನತಾ ಜಲಧಾರೆ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ನೀರಾವರಿ ವಿಚಾರದಲ್ಲಿ ಒಗ್ಗಟ್ಟಿಲ್ಲದ ಕಾರಣ ನಮ್ಮ ಕೂಗಿಗೆ ಸ್ಪಂದನೆ ಸಿಗುತ್ತಿಲ್ಲ. ತಮಿಳುನಾಡಿನ 40 ಸಂಸದರು ಒಟ್ಟಾಗುತ್ತಾರೆ. ಎಲ್ಲಿಯವರೆಗೆ ನಮ್ಮಲ್ಲಿ ಏಕತೆ ಮೂಡುವುದಿಲ್ಲವೋ ಅಲ್ಲಿವರೆಗೂ ರಾಜ್ಯಕ್ಕೆ ಒಳಿತಾಗುವುದಿಲ್ಲ’ ಎಂದು ಎಚ್ಚರಿಸಿದರು.

‘ಚುನಾವಣೆ ಬೇರೆ. ನೀರಿನ ಹೋರಾಟದಲ್ಲಿ ಎಲ್ಲರೂ ಒಂದಾಗಬೇಕು. ಇಲ್ಲವಾದರೆ ತಮಿಳರ ಹೊಡೆತ ತಡೆಯಲು ಆಗಲ್ಲ. ಸುಪ್ರೀಂಕೋರ್ಟ್ ಹಾಗೂ ನ್ಯಾಯಾಧಿಕರಣದ ತೀರ್ಮಾನಕ್ಕೆ ವಿರುದ್ಧವಾಗಿ ಕುಡಿಯುವ ನೀರಿನ ನೆಪದಲ್ಲಿ ತಮಿಳುನಾಡಿನಲ್ಲಿ ಅನೇಕ ನೀರಾವರಿ ಯೋಜನೆಗಳು ನಡೆಯುತ್ತಿವೆ. ಆದರೆ, ನಮ್ಮಲ್ಲಿ ಏನಾಗಿದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಮೇಕೆದಾಟಿನಿಂದ ನೀರು ತರುತ್ತೇವೆಂದು ಕಾಂಗ್ರೆಸ್‌ ಪಾದಯಾತ್ರೆ ನಡೆಸಿತು. ನೀರು ತಂದರೆ ಸಂತೋಷ. ರಾಜ್ಯ ಸರ್ಕಾರದವರು ಕೇಂದ್ರದಿಂದ ಶೀಘ್ರ ಮಂಜೂರಾತಿ ಪಡೆಯುತ್ತೇವೆ ಅಂತಿದ್ದಾರೆ. ಆದರೆ, ಇದು ನಿಜವಲ್ಲ. ಜನರ
ಮುಂದೆ ಸತ್ಯ ಹೇಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು. 

‘1962ರಲ್ಲಿ ಬಂಡಾಯ ಕಾಂಗ್ರೆಸ್‌ನಿಂದ ಗೆದ್ದು ಕರ್ನಾಟಕ ವಿಧಾನಸಭೆಗೆ ಹೋದೆ. ರಾಜ್ಯಕ್ಕೆ ಏನೇ ಅನ್ಯಾಯವಾದರೂ ವಾಸ್ತವಾಂಶ ಅರಿಯಲು ತಜ್ಞರ ಜೊತೆ ಮಾತನಾಡಿ ನಂತರ ವಿಧಾನಸಭೆಯಲ್ಲಿ ಮಂಡನೆ
ಮಾಡಿದೆ. ಅಲ್ಲಿಂದ ಆರಂಭವಾದ ಹೋರಾಟ ಇಂದು ಕೊನೆ ಘಟ್ಟಕ್ಕೆ ಬಂದಿದ್ದು, ಮತ್ತೆ ಹೋರಾಟ ಮಾಡುವ ಶಕ್ತಿ ನನ್ನಲ್ಲಿಲ್ಲ’ ಎಂದರು.

‘ಲಘುವಾಗಿ ಮಾತನಾಡುವ ಕೆಲ ರಾಜಕಾರಣಿಗಳಿದ್ದಾರೆ. ಆದರೆ, ಜಲಧಾರೆ ಕಾರ್ಯಕ್ರಮ ಮಗ ಅಥವಾ ಮೊಮ್ಮಗ ಸಿ.ಎಂ ಆಗಲು ಅಲ್ಲ. ಅಧಿಕಾರ ಕೊಡುವವರು ಜನ. ಸರಿಯಾಗಿ ನಡೆದುಕೊಂಡರೆ ಜನ ಸಹಾಯ ಮಾಡುತ್ತಾರೆ’
ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

‘ನಾನು ಮಂತ್ರಿಯಾಗಲು 22 ವರ್ಷ ಕಾಯಬೇಕಾಯಿತು. ಆದರೆ, ಈಗಿನ ಶಾಸಕರು ಆರಂಭದಲ್ಲೇ ಸಚಿವರಾಗಬೇಕು ಅಂತಾರೆ. ಏನು ಮಾಡೋದು’ ಎಂದರು.

ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ‘ರಾಜ್ಯದಲ್ಲಿ ನೀರಾವರಿ ಯೋಜನೆ ಪೂರ್ಣಗೊಳಿಸಲು ₹4 ಲಕ್ಷ ಕೋಟಿ ಅಗತ್ಯವಿದೆ. ಐದು ದಶಕ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಅನುದಾನ ನೀಡಿದ್ದು ತೀರಾ ಕಡಿಮೆ. ಈಗ ಮೇಕೆದಾಟು ಹಿಡಿದಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಸಮಾವೇಶದಲ್ಲಿ ಶಾಸಕ ಕೆ.ಎಸ್.ಲಿಂಗೇಶ್, ಸಂಸದೀಯ ಮಂಡಳಿ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಮಾತನಾಡಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಸ್ವಾಗತಿಸಿದರು. ಸಂಸದ ಪ್ರಜ್ವಲ್‌ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಮುಖಂಡರಾದ ಎಚ್.ಪಿ.ಸ್ವರೂಪ್, ಮಳಲಿ ಜಯರಾಮ್, ಪರಮ ದೇವರಾಜೇಗೌಡ, ಮೋಹನ್, ಗುಪ್ತ, ಪ್ರಸಾದ್, ಬಾಗೂರು ಶಿವಣ್ಣ, ರಾಜೇಗೌಡ, ಬಿ.ವಿ.ಕರೀಗೌಡ, ಹೊನ್ನವಳ್ಳಿ ಸತೀಶ್, ಇಂದ್ರೇಶ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು