ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಮಳಿಗೆಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ: ಆರೋಪ

ಸಮಗ್ರ ತನಿಖೆ ನಡೆಸಲು ಕದಸಂಸ ಸಂಘಟನಾ ಸಂಚಾಲಕ ಎಚ್‌.ಎಸ್. ನಾಗರಾಜ್ ಆಗ್ರಹ
Last Updated 18 ಅಕ್ಟೋಬರ್ 2021, 14:53 IST
ಅಕ್ಷರ ಗಾತ್ರ

ಹಾಸನ: ‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಸೇರಿದ ನಾಲ್ಕು ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ನೀಡಲಾಗಿದ್ದು, ಇದರಲ್ಲಿ ₹ 17.25 ಲಕ್ಷ ಅವ್ಯವಹಾರ ನಡೆದಿದೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಘಟನಾ ಸಂಚಾಲಕ ಎಚ್‌.ಎಸ್.ನಾಗರಾಜ್‌ ಆರೋಪಿಸಿದರು.

‘ಪರಿಷತ್‌ ಸಾರ್ವಜನಿಕ ಸಂಸ್ಥೆಯಾಗಿದ್ದು, ನಿಕಟಪೂರ್ವ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಅವರು ವಾಣಿಜ್ಯ ಮಳಿಗೆಗಳ ಮುಂಗಡ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿರುವುದು ದಾಖಲೆಗಳ ಮೂಲಕ ಪತ್ತೆಯಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ಕ್ಕೆ ದೂರು ನೀಡಲಾಗುವುದು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಆಗಸ್ಟ್ ತಿಂಗಳಲ್ಲಿ ಹಾಲಿ ಅಧ್ಯಕ್ಷರ ಅವಧಿ ಮುಗಿದಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್‌ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ನಿರ್ಗಮಿತ ಅಧ್ಯಕ್ಷರು ಅಧಿಕಾರ ಹಸ್ತಾಂತರಿಸುವಾಗ ಪರಿಷತ್‌ಗೆ ಸಂಬಂಧಪಟ್ಟ ಆಡಿಟ್ ವಿವರಗಳನ್ನು ನೀಡಬೇಕು. ಮಂಜೇಗೌಡ ಅವರು ಶೇ 95ರಷ್ಟು ಮಾಹಿತಿಯನ್ನೇ ನೀಡಿಲ್ಲ. ಈ ಬಗ್ಗೆ ಆಡಳಿತಾಧಿಕಾರಿ ಎರಡು ನೋಟಿಸ್ ನೀಡಿದ್ದರೂ ಉತ್ತರಿಸಿಲ್ಲ’ ಎಂದು ಎಂದರು.

‘ವಾಣಿಜ್ಯ ಮಳಿಗೆಗಳ ಬಾಡಿಗೆ ಹಣವನ್ನು ಬುದ್ಧ, ಬಸವ, ಅಂಬೇಡ್ಕರ್ ಪುತ್ಥಳಿ ನಿರ್ಮಾಣ ವೆಚ್ಚ, ಹೊಯ್ಸಳ ಲಾಂಛನ, ಅಂಗಡಿ ಮಳಿಗೆಗೆಳ ನಿರ್ಮಾಣಕ್ಕೆಬಳಕೆಯಾಗಿದೆ ಎಂದು ತೋರಿಸಲಾಗಿದೆ. ಸಾರ್ವಜನಿಕ ಟೆಂಡರ್ ಕರೆಯದೇ ತಮಗೆ ಬೇಕಾದವರಿಗೆ ನೀಡಲಾಗಿದೆ. ಬಾಡಿಗೆ ಹಣವನ್ನು ನಿಯಮ ಪ್ರಕಾರ ಪರಿಷತ್ ಬ್ಯಾಂಕ್‌ ಖಾತೆಯಲ್ಲಿ ಠೇವಣಿ ಇಡಬೇಕು. ನಾಲ್ಕು ಮಳಿಗೆಯಿಂದ ಬಂದ ₹ 17.25 ಲಕ್ಷಕ್ಕೂ ಅಧಿಕ ಹಣ ಖಾತೆಯಲ್ಲಿ ಇಲ್ಲ. ಈಗ ಖಾತೆಯಲ್ಲಿ ಉಳಿದಿರುವುದು ₹ 1,058 ಮಾತ್ರ. ಉಳಿದ ಹಣ ಎಲ್ಲಿ ಹೋಯಿತು ಎಂಬ ಬಗ್ಗೆ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು.

‘ಪರಿಷತ್‌ ಆವರಣದಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳನ್ನೂ ದಾನಿಗಳಿಂದ ಮಾಡಿಸಲಾಗಿದೆ. ಬುದ್ಧ, ಬಸವ, ಅಂಬೇಡ್ಕರ್ ಪುತ್ಥಳಿಗಳನ್ನು ಮಹಾಂತಪ್ಪ ಅವರು ಕೊಡುಗೆ ನೀಡಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಹಾಗಾಗಿ ಅಲ್ಲಿಗೂ ಯಾವ ಹಣವೂ ಖರ್ಚಾಗಿಲ್ಲ. ಕಸಾಪ ಹೆಬ್ಬಾಗಿಲು ನಿರ್ಮಾಣಕ್ಕಾಗಿ ಮಾಜಿ ಶಾಸಕ ದಿವಂಗತ ವೈ.ಎನ್‌. ರುದ್ರೇಶಗೌಡ ಹಾಗೂ ಕುಟುಂಬದವರು ₹ 1.5 ಲಕ್ಷ ಹಣ ನೀಡಿದ್ದಾರೆ. ಹೆಬ್ಬಾಗಿಲೂ ಇಲ್ಲ, ಹಣವೂ ಇಲ್ಲ. ಆ ಹಣದ ಲೆಕ್ಕವನ್ನು ಕೇಳಬೇಕಿದೆ’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT