ಭಾನುವಾರ, ಏಪ್ರಿಲ್ 11, 2021
32 °C

ಕುಮಾರಸ್ವಾಮಿ ಜೆಡಿಎಸ್‌ ಪಕ್ಷ ಉಳಿಸಿಕೊಳ್ಳಲಿ: ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ಕಾಂಗ್ರೆಸ್‌ ನಾಶ ಮಾಡಲು ಸಿದ್ದರಾಮಯ್ಯ ಒಬ್ಬರೆ ಸಾಕಿತ್ತು. ಅವರ ಜೊತೆಗೆ ಈಗ ಡಿ.ಕೆ. ಶಿವಕುಮಾರ್ ಬಂದಿದ್ದಾರೆ. ಈ ಎರಡೂ ಜೋಡೆತ್ತುಗಳು ಪಕ್ಷವನ್ನು ವಿರುದ್ಧ ದಿಕ್ಕಿನಲ್ಲಿ ಎಳೆಯುತ್ತಿದ್ದು, ಯಾವಾಗ ಛಿದ್ರವಾಗಲಿದೆ ಗೊತ್ತಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.

‘ಸಿದ್ಧರಾಮಯ್ಯ ಅವರು ಎಲ್ಲಾ ಕಡೆ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದರು, ಈಗ ಡಿ.ಕೆ. ಶಿವಕುಮಾರ್‌ ಅದಕ್ಕೆ ಸೇರ್ಪಡೆಯಾಗಿದ್ದಾರೆ. ರಾಜ್ಯದಲ್ಲೂ ಈಗಾಗಲೇ ಕಾಂಗ್ರೆಸ್‌ ಕಣ್ಮರೆಯಾಗುತ್ತಿದ್ದೆ. ಇವರಿಬ್ಬರೂ ಸೇರಿ ಪಕ್ಷವನ್ನು ವಿಸರ್ಜಿಸುವುದರಲ್ಲಿ ಅನುಮಾನವೇ ಇಲ್ಲ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಕುಮಾರಸ್ವಾಮಿ ಮೊದಲು ಜೆಡಿಎಸ್‌ ಪಕ್ಷ ಉಳಿಸಿಕೊಳ್ಳಲಿ. ಅವರು ಸರಿಯಾಗಿ ಆಡಳಿತ ನಡೆಸಿದರೆ ಶಾಸಕರು ಪಕ್ಷ ಬಿಟ್ಟು ಬಿಜೆಪಿಗೆ ಬರುತ್ತಿರಲಿಲ್ಲ. 2023ರ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಎರಡು ಅಧಿಕಾರಕ್ಕೆ ಬರುವುದಿಲ್ಲ. ಸಂಘಟನೆಯ ಶಕ್ತಿ ಮೇಲೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ’ ಎಂದು ಭವಿಷ್ಯ ನುಡಿದರು.

‘ಶಾಸಕರಾದ ರೇಣುಕಾಚಾರ್ಯ, ಬಸವನಗೌಡ ಪಾಟೀಲ್‌ ಯತ್ನಾಳ್ ಬಹಿರಂಗವಾಗಿ ಮಾತನಾಡುವುದು ತಪ್ಪು. ಏನೇ ಗೊಂದಲಗಳಿದ್ದರೂ ಸಿ.ಎಂ ಜೊತೆಗೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ನಡುವೆ ತಾಲ್ಲೂಕು ಪಂಚಾಯಿತಿ ಏಕೆ ಬೇಕು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದ್ದು, ತಾಲ್ಲೂಕು ಪಂಚಾಯಿತಿ ರದ್ದತಿಗೆ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಈ ಬಾರಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಮೊದಲಿನಂತೆಯೇ ಶಾಂತಿಯುತವಾಗಿ ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೆಲೆ ಏರಿಕೆಯಿಂದ ಮುಂದೆ ನಡೆಯುವ 5 ರಾಜ್ಯಗಳ ಚುನಾವಣೆ ಮೇಲೆ ಯಾವುದೇ ಪ್ರಭಾವ ಬಿರುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆಯಾಗಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ. ಸುರೇಶ್‌, ಮುಖಂಡ ನವಿಲೆ ಅಣ್ಣಪ್ಪ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು