ಗುರುವಾರ , ಮಾರ್ಚ್ 23, 2023
32 °C
ಸರಳವಾಗಿ ಆಚರಣೆ: ಸಂಕಷ್ಟದಲ್ಲಿರುವ ಬಡವರಿಗೆ ನೆರವು ನೀಡಲು ನಿರ್ಧಾರ

ಹಾಸನ | ‘ಈದ್‌-ಉಲ್-ಫಿತ್ರ್‌’ ಸಂಭ್ರಮ ಕಸಿದ ಕೊರೊನಾ

ಕೆ.ಎಸ್.ಸುನಿಲ್‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ಮುಸ್ಲಿಮ್‌ರ ಪವಿತ್ರ ಹಬ್ಬ ‘ಈದ್‌-ಉಲ್-ಫಿತ್ರ್‌’ ಸಂಭ್ರಮಕ್ಕೆ ಈ ಬಾರಿ ಕೊರೊನಾ ಲಾಕ್‌ಡೌನ್ ಅಡ್ಡಿಯಾಗಿದೆ. ಹೊಸ ಬಟ್ಟೆ ಖರೀದಿಸಿ ಸಂಭ್ರಮಿಸಬೇಕಾದವರ ಮೊಗದಲ್ಲಿ ಆತಂಕ ಛಾಯೆ ಮೂಡಿದೆ.

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿದ್ದರಿಂದ ಜನರು ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಂಗಡಿಗಳು ತೆರೆದಿದ್ದರೂ ವ್ಯಾಪಾರದ ಅಬ್ಬರ ಕಾಣುತ್ತಿಲ್ಲ. ರಂಜಾನ್ ತಿಂಗಳಲ್ಲಿ ದೊಡ್ಡ ಬಸ್ತಿ ಬೀದಿ, ಕಸ್ತೂರ ಬಾ ರಸ್ತೆ, ಹಳೆ ಬಸ್‌ ನಿಲ್ದಾಣ ರಸ್ತೆಗಳಲ್ಲಿ ಜನಜಂಗುಳಿ ಕಂಡು ಬರುತ್ತಿತ್ತು. ಹಬ್ಬದ ಖರೀದಿಗೆ ಹಾಸನ ಮಾತ್ರವಲ್ಲದೇ ಸುತ್ತಲಿನ ಜಿಲ್ಲೆಗಳಿಂದಲೂ ಗ್ರಾಹಕರು ನಗರಕ್ಕೆ ಬರುತ್ತಿದ್ದರು.

ಟೋಪಿ, ಬಾದಾಮ್‌, ಪಿಸ್ತಾ, ಖರ್ಜೂರ, ಒಣದ್ರಾಕ್ಷಿ, ಶ್ಯಾವಿಗೆ, ಸುಗಂಧ ದ್ರವ್ಯಗಳು, ಶೂ, ಬಳೆ, ಫ್ಯಾನ್ಸಿ ಐಟಂಗಳು, ಮಕ್ಕಳ ಆಟಿಕೆಗಳ ವ್ಯಾಪಾರ ಜೋರಾಗಿರುತ್ತಿತ್ತು. ಆದರೆ, ಈ ಬಾರಿ ಕೊರೊನಾ ಹಬ್ಬದ ಸಂಭ್ರಮ ಕಸಿದಿದೆ. ಮನೆಯಲ್ಲಿಯೇ ನಮಾಜ್‌ ಮಾಡಲು ಹಾಗೂ ಸರಳವಾಗಿ ಆಚರಿಸಲು ಸಮುದಾಯದವರು ನಿರ್ಧರಿಸಿದ್ದಾರೆ. ಅಲ್ಲದೇ ಸಂಕಷ್ಟದಲ್ಲಿರುವ ‍ಬಡವರಿಗೆ ಸಹಾಯ ಮಾಡಲು ತೀರ್ಮಾನಿಸಲಾಗಿದೆ.

ಹಿಂದೂಗಳು ಯುಗಾದಿ, ಕ್ರೈಸ್ತರು ಗುಡ್‌ಫ್ರೈಡೆ ಹಾಗೂ ಜೈನರು ಮಹಾವೀರ ಜಯಂತಿ ಹಬ್ಬಗಳನ್ನು ಸರಳವಾಗಿ ಆಚರಿಸಿದ್ದಾರೆ. ಅದರಂತೆ ಮುಸ್ಲಿಮರು ರಂಜಾನ್‌ ಅನ್ನು ಸರಳವಾಗಿ ಆಚರಿಸಲು ಮುಂದಾಗಿದ್ದಾರೆ.

‘ಅಂಗಡಿಗಳು ತೆರೆದಿದ್ದರೂ ಗ್ರಾಹಕರು ಭೇಟಿ ನೀಡುತ್ತಿಲ್ಲ. ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿವೆ. ಜನರು ಭಯಗೊಂಡಿದ್ದಾರೆ. ವ್ಯಾಪಾರಿಗಳಿಗೆ ನಷ್ಟವಾಗುತ್ತಿದೆ. ಸೋಂಕು ಹರಡದಂತೆ ತಡೆಯುವುದು ಮುಖ್ಯ’ ಎನ್ನುತ್ತಾರೆ ಬಟ್ಟೆ ವ್ಯಾಪಾರಿ ಸೈಯದ್‌.

‘ರಂಜಾನ್ ಮಾಸ ಎಂದರೆ ಮುಸ್ಲಿಮರಿಗೆ ಉಪವಾಸ, ಪ್ರಾರ್ಥನೆ, ದಾನ, ಧರ್ಮ ಮಾಡಿ ಆಚರಿಸುವ ಪವಿತ್ರ ಹಬ್ಬ. ಪ್ರತಿಯೊಬ್ಬ ಮುಸ್ಲಿಮರು ತಮ್ಮ ವಾರ್ಷಿಕ ಆದಾಯದಲ್ಲಿ ಶೇ 2.50 ರಷ್ಟನ್ನು ಸಮಾಜದ ಬಡವರಿಗೆ ವಿತರಿಸುವುದು ಕಡ್ಡಾಯ. ಬಡವರು, ನೆರೆಹೊರೆಯವರು, ಸ್ನೇಹಿತರಿಗೆ ಆದ್ಯತೆ ಮೇರೆಗೆ ‘ಜಕಾತ್‌’ ನೀಡುತ್ತಾರೆ. 7.5 ತೊಲೆ ಬಂಗಾರ, ಒಂದು ಕೆ.ಜಿ. ಬೆಳ್ಳಿಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಇರುವ ಪ್ರತಿಯೊಬ್ಬರು ಜಕಾತ್‌ ನೀಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಎಸ್‌.‍‍ಪಾಷಾ ಹೇಳಿದರು.

‘ರಂಜಾನ್ ತಿಂಗಳ ಉಪವಾಸ ಸುಳ್ಳು, ಮೋಸ, ಕೋಪ, ದ್ವೇಷ ಭಾವನೆ ದೂರ ಮಾಡುತ್ತದೆ. ಪ್ರತಿಯೊಬ್ಬರಿಗೂ ಹಸಿವಿನ ಮಹತ್ವ ತಿಳಿಯುತ್ತದೆ. ಕೊರೊನಾ ಇಲ್ಲದಿದ್ದರೆ ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದೇವು’ ಎಂದು ತಿಳಿಸಿದರು.

*
ಕೊರೊನಾದಿಂದಾಗಿ ವಿಶ್ವದ ಜನರಿಗೆ ತೊಂದೆ ಆಗಿದೆ. ಹಾಗಾಗಿ ಪ್ರತಿಯೊಬ್ಬರೂ ಮನೆಯಲ್ಲಿಯೇ ನಮಾಜ್ ಮಾಡಲು ತೀರ್ಮಾನಿಸಿದ್ದೇವೆ.
-ಎಸ್‌.ಎಸ್‌.ಪಾಷಾ, ಸಾಮಾಜಿಕ ಕಾರ್ಯಕರ್ತ

*
ಸಂಕಷ್ಟದಲ್ಲಿರುವವರ ನೆರವಿಗೆ ಸಹಕರಿಸುವಂತೆ ಸಮುದಾಯದವರಿಗೆ ಮನವಿ ಮಾಡಲಾಗಿದೆ. ವಲಸೆ ಕಾರ್ಮಿಕರಿಗೆ ಆಹಾರ ಕಿಟ್‌ ಒದಗಿಸಲಾಗುವುದು.
-ಝುಲ್ಫಿ ಹಾಸನ್‌ , ಸ್ಟೂಡೆಂಟ್ಸ್‌ ಫಾರ್ ನೇಷನ್‌ ಸಂಘಟನೆ ಸಂಘಟಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು