ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಿ: ಎಚ್.ಎಂ. ವಿಶ್ವನಾಥ್ ಒತ್ತಾಯ

Last Updated 27 ಆಗಸ್ಟ್ 2018, 16:53 IST
ಅಕ್ಷರ ಗಾತ್ರ

ಹಾಸನ : ‘ಸಕಲೇಶಪುರ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಪರಿಣಾಮ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ರಾಷ್ಟ್ರೀಯ ವಿಪತ್ತು ನಿಧಿಯಿಂದ ಸೂಕ್ತ ಪರಿಹಾರ ನೀಡಬೇಕು’ ಎಂದು ಕಾಂಗ್ರೆಸ್‌ ಮುಖಂಡ ಎಚ್.ಎಂ. ವಿಶ್ವನಾಥ್ ಒತ್ತಾಯಿಸಿದರು.

ಪಶ್ಚಿಮಘಟ್ಟ ಪ್ರದೇಶದಲ್ಲಿ ಭೂಕುಸಿತದಿಂದ ಭೂಮಿ ಕಳೆದು ಕೊಂಡವರಿಗೆ ಸರ್ಕಾರಿ ಬದಲಿ ಭೂಮಿ ಮಂಜೂರು ಮಾಡಬೇಕು. ಭತ್ತದ ಬೆಳೆ ನಷ್ಟವಾಗಿರುವ ರೈತರಿಗೆ ಎಕರೆಗೆ ₹ 15 ಸಾವಿರ ಪರಿಹಾರ ನೀಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಮಲೆನಾಡಿನ ಪ್ರಮುಖ ಬೆಳೆಗಳಾದ ಕಾಫಿ, ಏಲಕ್ಕಿ ಮತ್ತು ಅಡಿಕೆ ಮೇಲೆ ರೈತರು ಪಡೆದಿರುವ ₹ 6,500 ಕೋಟಿ ಸಾಲವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮನ್ನಾ ಮಾಡಿ ಹೊಸ ಸಾಲ ಮಂಜೂರಾತಿಗೆ ಅವಕಾಶ ಮಾಡಿಕೊಡಬೇಕು. ರೈತರು, ಕಾರ್ಮಿಕರ ವಸತಿ, ಸರ್ಕಾರಿ ಶಾಲೆಗಳ ಪುನರ್ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಬೇಕು. ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯಿತಿ ರಸ್ತೆಗಳ ಪುನರ್ ನಿರ್ಮಾಣ, ದುರಸ್ತಿ ಹಾಗೂ ಸೇತುವೆಗಳನ್ನು ನಿರ್ಮಾಣ ಮಾಡಲು ₹ 250 ಕೋಟಿ ಬಿಡುಗಡೆ ಮಾಡಬೇಕು ಎಂದು ಹೇಳಿದರು.

ಆನೆ ಕಾರಿಡಾರ್ ಯೋಜನೆಯೊಳಗೆ ಸೇರಿರುವ ಹೊಂಗಡಹಳ್ಳ ಮತ್ತು ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 7 ಗ್ರಾಮಗಳು ಹಾಗೂ ಸ್ವಯಂ ಪ್ರೇರಿತವಾಗಿ ಸರ್ಕಾರಕ್ಕೆ ಜಮೀನು ನೀಡಲು ಮುಂದೆ ಬಂದಿರುವ ರೈತರ ಜಮೀನು ಸೇರಿದಂತೆ ಸುಮಾರು 2500 ಎಕರೆ ಜಮೀನನ್ನು ಸರ್ಕಾರ ಖರೀದಿಸಬೇಕು. ಇದಕ್ಕಾಗಿ ₹ 300 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಪಶ್ಚಿಮಘಟ್ಟ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಈಶಾನ್ಯ ರಾಜ್ಯದ ಮಾದರಿಯಲ್ಲಿ ಯೋಜನೆ ಜಾರಿಗೆ ತಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಜೆಟ್‌ ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂದರು.

ಮುಖಂಡ ಎಚ್.ಕೆ. ಜವರೇಗೌಡ ಮಾತನಾಡಿ, ಪಶ್ಚಿಮಘಟ್ಟ ಪ್ರದೇಶಗಳ ಅಭಿವೃದ್ಧಿಗಾಗಿ ಕಸ್ತೂರಿ ರಂಗನ್ ವರದಿಯಲ್ಲಿ ತಿದ್ದುಪಡಿ ಮಾಡಿ ವರದಿ ಜಾರಿಗೆ ತರಬೇಕು. ಹಾಗೇಯೆ ಈ ಅರಣ್ಯ ಉಳಿವಿಗೆ ಎಲ್ಲರೂ ಆಂದೋಲನ ಮಾಡ ಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪರಿಸರ ಪ್ರೇಮಿ ಎಚ್.ಪಿ. ಮೋಹನ್, ಪ್ರಗತಿಪರ ಹೋರಾಟಗಾರ ಮಂಜುನಾಥದತ್ತ, ಕಿಶೋರ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT