ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆದ್ದಾರಿ ರಸ್ತೆ ಕಾಮಗಾರಿ ವೈಜ್ಞಾನಿಕ: ಆರೋಪ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಭೆ
Published 29 ಮೇ 2024, 14:24 IST
Last Updated 29 ಮೇ 2024, 14:24 IST
ಅಕ್ಷರ ಗಾತ್ರ

ಸಕಲೇಶಪುರ: ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥದಿಂದ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಸರಿಯಾದ ಸಂಪರ್ಕ ವ್ಯವಸ್ಥೆ ಮಾಡದೆ ಭಾರೀ ಸಮಸ್ಯೆ ಉಂಟಾಗುತ್ತಿದೆ ಎಂದು ಆರೋಪಿಸಿ ಹಲವು ಗ್ರಾಮಗಳ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ ಘಟನೆ ಈಚೆಗೆ ನಡೆಯಿತು.

ಡಿವೈಎಸ್‌ಪಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕನ್ಸ್‌ಲ್ಟೆಂಟ್‌ ಎಂಜಿನಿಯರ್‌ಗಳನ್ನು ಬಾಳ್ಳುಪೇಟೆ, ಬಾಗೆ, ಗುಲಗಳಲೆ, ಮಠಸಾಗರ ಹಾಗೂ ಕೌಡಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು.

‘ಹಾಸನದಿಂದ ಆನೇಮಹಲ್‌ವರೆಗೆ ಈಗಾಗಲೇ ಚತುಷ್ಪಥ ಪೂರ್ಣಗೊಂಡಿದೆ. ಬಾಳ್ಳುಪೇಟೆ ಹಾಗೂ ಜೆಪಿನಗರ ನಡುವೆ ನಾಲ್ಕು ಶಾಲೆಗಳಿಂದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಡೆದಾಡುತ್ತಾರೆ. 300ಕ್ಕೂ ಹೆಚ್ಚು ವಾಸದ ಮನೆಗಳಿದ್ದು, ಸದಾ ಜನನಿಬಿಡ ಪ್ರದೇಶವಾಗಿದೆ. ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ಗಳು ಇಲ್ಲಿಗೆ ಸರ್ವೀಸ್‌ ರಸ್ತೆ ನಿರ್ಮಾಣ ಮಾಡಿಲ್ಲ. ಇದೇ ಮಾರ್ಗದಲ್ಲಿ ಬೆರಳೆಣಿಕೆಯ ಮನೆಗಳಿರುವ ಪ್ರದೇಶಗಳಲ್ಲಿ, ಖಾಸಗಿ ಹೋಟೆಲ್‌ಗಳ ಮುಂದೆ ಸರ್ವೀಸ್ ರಸ್ತೆ ಮಾಡುವ ಮೂಲಕ ಅವೈಜ್ಞಾನಿಕ ಹೆದ್ದಾರಿ ಮಾಡಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದರು.

ಗುಲಗಳಲೆ ಬಳಿ ಹಬ್ಬನಹಳ್ಳಿ, ರಾಟೇಮನೆ, ಮಾಸವಳ್ಳಿ, ಕೆಂದನಮನೆ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಹೆದ್ದಾರಿಯಿಂದಲೇ ಸಂಪರ್ಕ ನೂರಾರು ವರ್ಷಗಳಿಂದ ಇದೆ. ಇಲ್ಲಿ ಡಿವೈಡರ್ ವ್ಯವಸ್ಥೆ ಮಾಡದೆ, ಹಾಸನದ ಕಡೆಯಿಂದ ಬರುವ ವಾಹನಗಳು ಸುಮಾರು 4 ಕಿ.ಮೀ. ಸುತ್ತಿಕೊಂಡು ಗುಲಗಳಲೆ ರಸ್ತೆಗೆ ಬರಬಾಕಿದೆ ಎಂದು ಗ್ರಾಮಸ್ಥರು ದೂರಿದರು.

ಕೌಡಹಳ್ಳಿ ಹಾಗೂ ಸಕಲೇಶಪುರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿಯೂ ಸಹ ಸರ್ವೀಸ್ ರಸ್ತೆ ಹಾಗೂ ಡಿವೈಡರ್ ಮಾಡಿಲ್ಲ. ಕೂಡಲೇ ಡಿವೈಡರ್‌, ಸರ್ವೀಸ್ ರಸ್ತೆ ಹಾಗೂ ಮೇಲು ಸೇತುವೆ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಪಟ್ಟುಹಿಡಿದರು.

ಡಿವೈಎಸ್‌ಪಿ ಪ್ರಮೋದ್‌ಕುಮಾರ್ ಮಾತನಾಡಿ, ‘ಚತುಸ್ಪಥ ಕಾಮಗಾರಿಯು 2016ರಲ್ಲಿಯೇ ಟೆಂಡರ್‌ ಆಗಿ ಕಾರಣಾಂತರದಿಂದ ವಿಳಂಭಗೊಂಡು ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ. ಯಾವ ಗ್ರಾಮಗಳ ನಡುವೆ ಸಮಸ್ಯೆ ಇದೆ, ರಸ್ತೆ ಸುರಕ್ಷತೆ ಇವೆಲ್ಲವನ್ನೂ ಪರಿಗಣಿಸಿ ಗ್ರಾಮಸ್ಥರ ಬೇಡಿಕೆ ಹಾಗೂ ಅಗತ್ಯತೆ ವರದಿಯನ್ನು ಸರ್ಕಾರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ಸಲ್ಲಿಸಲಾಗುವುದು. ಈ ಬಗ್ಗೆ ಯಾವುದೇ ಗೊಂದಲ ಬೇಡ. ತಾತ್ಕಾಲಿಕವಾಗಿ ಯಾವುದೇ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರದೇಶದಲ್ಲಿ ಸಂಚಾರ ಬಂದ್ ಮಾಡದಂತೆ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

ಗುಲಗಳಲೆ ಮಂಜುನಾಥ್‌, ಮೋಹನ್‌, ಕೌಡಹಳ್ಳಿ ಸ.ಬ.ಭಾಸ್ಕರ್, ಜೆಎಸ್‌ಎಸ್‌ ಬಿಇಡಿ ಕಾಲೇಜು ಪ್ರಾಧ್ಯಾಪಕ ಮಂಜುನಾಥ್, ವಿಕ್ರಂ, ವಕೀಲ ಕವನ್‌ಗೌಡ, ಮಾಸವಳ್ಳಿ ಚಂದ್ರು ಮಾತನಾಡಿದರು.

ಪೊಲೀಸ್ ಇನ್‌ಸ್ಪೆಕ್ಟರ್ ಜಗದೀಶ್, ಗ್ರಾಮಾಂತರ ಠಾಣಾ ಸಬ್ ಇನ್ ಸ್ಪೆಕ್ಟರ್ ತಿಪ್ಪಾರೆಡ್ಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕನ್ಸಲ್ಟೆಂಡ್‌ ಎಂಜಿನಿಯರ್‌ಗಳಾದ ತಿಪ್ಪೇಸ್ವಾಮಿ, ಪ್ರಸನ್ನ, ಜಗದೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT