ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

’ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಿಲ್ಲ’

ರಸಗೊಬ್ಬರ ಅಂಗಡಿ ಮಾಲೀಕರು, ರೈತ ಸಂಘದ ಮುಖಂಡರ ಸಭೆ
Published 29 ಮೇ 2024, 14:25 IST
Last Updated 29 ಮೇ 2024, 14:25 IST
ಅಕ್ಷರ ಗಾತ್ರ

ನುಗ್ಗೇಹಳ್ಳಿ: ‘ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಲು ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ಹೆಚ್ಚಿನ ನಿಗಾ ವಹಿಸಲಾಗಿದೆ’ ಎಂದು ಹೋಬಳಿ ಕೃಷಿ ಅಧಿಕಾರಿ ಜಿ.ವಿ.ದಿನೇಶ್ ತಿಳಿಸಿದರು.

ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಹೋಬಳಿ ವ್ಯಾಪ್ತಿಯಲ್ಲಿರುವ ರಸಗೊಬ್ಬರ ಅಂಗಡಿಗಳ ಮಾಲೀಕರು ಮತ್ತು ರೈತ ಸಂಘದ ಮುಖಂಡರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

‘ನಿರೀಕ್ಷೆಯಂತೆ ಉತ್ತಮ ಮಳೆಯಾಗಿದ್ದು, ರೈತರು ಸಕಾಲದಲ್ಲಿ ಬಿತ್ತನೆ ಕಾರ್ಯ ಆರಂಭಿಸಲು ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಅಲಸಂದೆ, ಹೆಸರು ಕಾಳು, ಮುಂಗಾರು ಮೆಕ್ಕೆಜೋಳ, ಅಪ್ಸೆಣಬು ಜೊತೆಗೆ ಕೀಟನಾಶಕ ಜಿಪ್ಸಂ ಎನ್‌ಪಿಕೆ ಲಿಕ್ವಿಡ್ ಬೋರಾಕ್ಸ್ ಹಾಗೂ ರಿಯಾಯಿತಿ ದರದಲ್ಲಿ ಟಾರ್ಪಲ್ ನೀಡಲಾಗುತ್ತಿದೆ. ರೈತರು ತಮ್ಮ ಜಮೀನಿನ ಪಹಣಿ ಸೇರಿದಂತೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಬಿತ್ತನೆ ಬೀಜ ಪಡೆಯಬಹುದಾಗಿದೆ’ ಎಂದರು.

‘ರೈತರು ಈಗಾಗಲೇ ತಮ್ಮ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಪ್ರಾರಂಭಿಸಿದ್ದು, ಹಿನ್ನೆಲೆಯಲ್ಲಿ ಹೋಬಳಿ ವ್ಯಾಪ್ತಿಯ ರಸಗೊಬ್ಬರ ಅಂಗಡಿ ಮಾಲೀಕರ ಸಭೆ ನಡೆಸಿ ರೈತರಿಗೆ ತೊಂದರೆಯಾಗದಂತೆ ರಸಗೊಬ್ಬರ ಪೂರೈಸುವಂತೆ ತಿಳಿಸಲಾಗಿದೆ. ಕೃಷಿ ಇಲಾಖೆ ಆದೇಶದಂತೆ ರೈತರು ಗೊಬ್ಬರ ಹಾಗೂ ಯೂರಿಯಾ ಖರೀದಿಗೆ ಆಧಾರ್ ಕಾರ್ಡ್ ಹಾಗೂ ಬೆರಳಚ್ಚು ಪಡೆದು ರಸಗೊಬ್ಬರ ಮಾರಾಟ ಮಾಡುವಂತೆ ತಿಳಿಸಲಾಗಿದೆ. ಇದರಿಂದ ರಸ ಗೊಬ್ಬರದ ಅಭಾವ ಉಂಟಾಗುವುದಿಲ್ಲ. ಈ ಆದೇಶವನ್ನು ಅಂಗಡಿ ಮಾಲೀಕರು ತಪ್ಪದೇ ಪಾಲಿಸುವಂತೆ’ ತಿಳಿಸಿದರು.

‘ಈಗಾಗಲೇ ಮುಂಗಾರು ಹಂಗಾಮಿನ ಬೆಳೆಗಳಿಗೆ ಬೆಳೆ ವಿಮೆ ಪ್ರಾರಂಭವಾಗಿದ್ದು ರೈತರು ಇಲಾಖೆ ನಿಗದಿಪಡಿಸಿರುವ ಬೆಳವಣಿಗೆ ವಿಮೆ ಹಣ ಪಾವತಿಸಬಹುದಾಗಿದೆ’ ಎಂದು ತಿಳಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಎಸ್ ಎಸ್ ರಾಮಚಂದ್ರ ಮಾತನಾಡಿ, ‘ಹೋಬಳಿ ವ್ಯಾಪ್ತಿಯ ರೈತರಿಗೆ ಬಿತ್ತನೆ ಕಾರ್ಯ ಕೈಗೊಳ್ಳಲು ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೊರತೆಯಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು. ಇಲಾಖೆಯಿಂದ ಬರುವ ಸೌಲಭ್ಯಗಳನ್ನು ರೈತರಿಗೆ ಸಮರ್ಪಕವಾಗಿ ತಲುಪುವಂತೆ ಕೃಷಿ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು’ ಎಂದರು.

ರಸ ಗೊಬ್ಬರ ಅಂಗಡಿ ಮಾಲೀಕರಾದ ಎನ್‌.ಪಿ.ರವಿ, ಪ್ರವೀಣ್ ಕುಮಾರ್, ಮುಖಂಡರಾದ ಎಸ್.ಟಿ.ತಿಮ್ಮೇಗೌಡ, ರತೇಶ್, ಕೃಷಿ ಇಲಾಖೆ ಸಿಬ್ಬಂದಿಗಳಾದ ಜಯಕುಮಾರ್, ಚೈತ್ರ, ರಾಜೇಶ್ವರಿ, ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT