ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ, ಅಮಿತ್ ಶಾ ಪ್ರತಿಕೃತಿ ದಹನ

ದೆಹಲಿ ಚಲೋ ಹೋರಾಟ ಬೆಂಬಲಿಸಿ ರೈತರ ಪ್ರತಿಭಟನೆ
Last Updated 1 ಡಿಸೆಂಬರ್ 2020, 13:50 IST
ಅಕ್ಷರ ಗಾತ್ರ

ಹಾಸನ: ಕೇಂದ್ರದ ಸರ್ಕಾರದ ಕೃಷಿ ಸುಧಾರಣಾ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ರೈತರು ನಡೆಸುತ್ತಿರುವ ‘ದೆಹಲಿ ಚಲೋ’ ಪ್ರತಿಭಟನೆ ಬೆಂಬಲಿಸಿ ಮತ್ತು ರೈತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಗರದ ಹೇಮಾವತಿ ಪ್ರತಿಮೆ ಎದುರು ಮಂಗಳವಾರ ರೈತ ಮತ್ತು ಕಾರ್ಮಿಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ‌ಕೂಗಿದ ಪ್ರತಿಭಟನಾಕಾರರು, ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪ್ರತಿಕೃತಿ ದಹನ ಮಾಡಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌ ಮಾತನಾಡಿ, ಮೂರು ತಿಂಗಳಿನಿಂದಲೂ ರೈತ ವಿರೋಧಿ ನೀತಿವುಳ್ಳ ತಿದ್ದುಪಡಿಗಳನ್ನು ವಿರೋಧಿಸಲಾಗುತ್ತಿದೆ. ಕಾರ್ಪೊರೇಟ್‌ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಕೃಷಿ ಕಾಯ್ದೆ ವಿರುದ್ಧ ದೇಶಾದಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರ ಅಮಾಯಕ ರೈತರ ಮೇಲೆ ಲಾಠಿ ಪ್ರಹಾರ, ಜಲಫಿರಂಗಿ ನಡೆಸಿ ದೌರ್ಜನ್ಯ ಎಸಗಿದೆ. ಕೃಷಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ವಿದ್ಯುತ್‌ ತಿದ್ದುಪಡಿ ಮಸೂದೆ, ಕಾರ್ಮಿಕ ವಿರೋಧಿ ಸಂಹಿತತೆ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಮೂರು ದಿನಗಳಿಂದ ಲಕ್ಷಾಂತರ ರೈತರು ದೆಹಲಿ–ಹರಿಯಾಣದ ಗಾಜಿಯಾ ಬಾದ್‌ ಗಡಿಯಲ್ಲಿ ಜಮಾಯಿಸಿದ್ದಾರೆ. ರೈತರ ಬೇಡಿಕೆ ಈಡೇರಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಸರ್ಕಾರ ಯಾವುದೇ ಷರತ್ತು ಇಲ್ಲದೆ ಮಾತುಕತೆ ನಡೆಸಬೇಕು. ಕೋವಿಡ್‌ ಲಾಕ್‌ಡೌನ್‌ ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಬಾಬು, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್‌.ಆರ್‌. ನವೀನ್‍ಕುಮಾರ್‍,
ಕಾರ್ಯದರ್ಶಿ ವಸಂತಕುಮಾರ್‍, ಸಿಐಟಿಯು ಪ್ರಧಾನ ಕಾರ್ಯದರ್ಶಿ ಪುಷ್ಪ, ಅರವಿಂದ, ದಲಿತ ಸಂಘರ್ಷ ಸಮಿತಿ ಮುಖಂಡ ಕೃಷ್ಣದಾಸ್‍, ವಿಜಯಕುಮಾರ್‍ ದಂಡೋರ, ದಲಿತ ಹಕ್ಕುಗಳ ಸಮಿತಿ ಸಂಚಾಲಕ ಎಂ.ಜಿ. ಪೃಥ್ವಿ, ರಾಜು ಶಿಗರನಹಳ್ಳಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT