2.87 ಲಕ್ಷ ಜನರಿಗೆ ಲಸಿಕೆ ಗುರಿ

ಹಾಸನ: ಜಿಲ್ಲೆಯಲ್ಲಿ 60 ವರ್ಷ ದಾಟಿದ ಹಾಗೂ ಅನಾರೋಗ್ಯವಿರುವ 45 ರಿಂದ 59 ವರ್ಷದವರಿಗೆ ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ತಾಂತ್ರಿಕ ಸಮಸ್ಯೆಯಿಂದಾಗಿ ಲಸಿಕೆ ನೀಡುವ ಕಾರ್ಯ ಒಂದು ದಿನ ವಿಳಂಬವಾಗಿದ್ದು, 60 ವರ್ಷ ಮೇಲ್ಪಟ್ಟವರು, 45 ರಿಂದ 59 ವರ್ಷದೊಳಗಿನ ಸುಮಾರು 2.87 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ಜಿಲ್ಲಾಸ್ಪತ್ರೆ, ಎಲ್ಲಾ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಹಾಸನದ ಜನಪ್ರಿಯ ಆಸ್ಪತ್ರೆಗಳಲ್ಲಿ ಸಾರ್ವಜನಿಕ ರಜೆ ಹೊರತುಪಡಿಸಿ ನಿತ್ಯ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ ಮಾತ್ರ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ನೀಡಲಾಗುತ್ತದೆ.
‘ಈಗಾಗಲೇ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸಿಬ್ಬಂದಿ (ಫ್ರಂಟ್ ಲೈನ್ ವಾರಿಯರ್ಗಳು), ಪೊಲೀಸ್ ಹಾಗೂ ಇತರೆ ಕಾರ್ಯಕರ್ತರಿಗೆ ಯಶಸ್ವಿಯಾಗಿ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟವರು, 45 ರಿಂದ 59 ವರ್ಷದೊಳಗಿನ ಸಕ್ಕರೆ ಕಾಯಿಲೆ, ರಕ್ತದೊತ್ತಡದಿಂದ ಬಳಲುತ್ತಿದ್ದವರು ಲಸಿಕೆ ಪಡೆಯಲು ನೇರವಾಗಿ ಆಸ್ಪತ್ರೆಯಲ್ಲಿ ಅಥವಾ www.cowin.gov.in ಆನ್ಲೈನ್ ಮೂಲಕ ನೋಂದಣಿ ಮಾಡಿಸಬಹುದು’ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.
‘ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ವೈದ್ಯರ ಪ್ರಮಾಣ ಪತ್ರ ತರಬೇಕು. ನೋಂದಣಿಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಚಾಲನ ಪರವಾನಗಿ, ಚುನಾವಣಾ ಗುರುತಿನ ಚೀಟಿ ಯಾವುದಾದರೂ ಒಂದನ್ನು ತೆಗೆದುಕೊಂಡು ಹೋಗಬೇಕು’ ಎಂದರು.
‘ಮಿಷನ್ ಆಸ್ಪತ್ರೆಯ ನೌಕರನ ಸಾವಿಗೆ ಕೋವಿಡ್ ಲಸಿಕೆ ಕಾರಣವಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ದೃಢಪಡಿಸಿದ್ದಾರೆ. ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಹಾಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಸ್ಪಷ್ಟ ಪಡಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.