ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವು ಮರೆಸುವ ಸಂಗೀತ: ಹಾಸನ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಂತಸಕ್ಕಾಗಿ ವ್ಯವಸ್ಥೆ

ವಾರ್ಡ್‌, ಒಪಿಡಿ ಬಳಿ ಇಂಪಾದ ಹಾಡು
Last Updated 26 ಮೇ 2022, 6:05 IST
ಅಕ್ಷರ ಗಾತ್ರ

ಹಾಸನ: ಮಾನಸಿಕ, ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಸಂಗೀತ ಥೆರಪಿಯೂ ಒಂದು.ಜಿಲ್ಲಾಸ್ಪತ್ರೆಯ ಕಾರಿಡಾರ್‌, ವಾರ್ಡ್‌ಗಳಲ್ಲಿ ಸಂಗೀತದ ಆಲಾಪಗಳು ಕೇಳಿ ಬರುತ್ತಿದ್ದು, ಆತಂಕ, ನೋವು, ಒತ್ತಡದಿಂದ ತೋಳಲಾಡುವ ಮನಸ್ಸುಗಳು ಹಗುರವಾಗುವಂತೆ ಮಾಡಿದೆ.

ಸಂಗೀತ ಮನಸ್ಸು ಹಗುರಾಗಿಸುವ ಸಾಧನವಾಗಿ, ಸಾಮರ್ಥ್ಯ ತುಂಬುವ ಚೈತನ್ಯವಾಗಿದೆ. ಮನಸ್ಸನ್ನು ರಿಲ್ಯಾಕ್ಸ್‌ ಮಾಡಿ ಚಿಂತೆಗಳನ್ನು ಮರೆಸುವ ಗುಣವಿದೆ‌ ಎಂಬುದು ಹಲವು ಅಧ್ಯಯನ ಗಳು ತಿಳಿಸಿವೆ. ಇದನ್ನ ಮನಗಂಡ ಜಿಲ್ಲಾಸ್ಪತ್ರೆ ಆಡಳಿತ ಮಂಡಳಿ, ಆಸ್ಪತ್ರೆಯ ಆಯ್ದ ಸ್ಥಳಗಳ ಬಳಿ ಗಾನಸುಧೆ ಹರಿಸುತ್ತಿದೆ. ಇದಕ್ಕಾಗಿ ₹ 30 ಸಾವಿರ ವೆಚ್ಚದಲ್ಲಿ ಹೊಸ ಆಸ್ಪತ್ರೆಯ ಎಲ್ಲಾ ವಾರ್ಡ್‌, ಹೊರ ರೋಗಿಗಳ ವಿಭಾಗ (ಒಪಿಡಿ)ದಲ್ಲಿ ಮ್ಯೂಸಿಕ್ ಸಿಸ್ಟಂ ಅಳವಡಿಸಿದೆ.

ಜಿಲ್ಲಾಸ್ಪತ್ರೆ ಹೊರ ರೋಗ ವಿಭಾಗಗಳಿಗೆ ನಿತ್ಯ ಸಾವಿರ ರೋಗಿಗಳು ಮತ್ತು 500 ಕ್ಕೂ ಹೆಚ್ಚು ಒಳ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದಾ ಒತ್ತಡ, ಆತಂಕದಿಂದ ಕರ್ತವ್ಯ ನಿರ್ವಹಿಸುವ ವೈದ್ಯರು, ನರ್ಸ್‌, ಡಿ ಗ್ರೂಪ್ ನೌಕರರು ಸಹ ಸಂಗೀತದ ಇಂಪಿಗೆ ಮಾರು ಹೋಗಿದ್ದಾರೆ.

ಅನಾರೋಗ್ಯ ಮತ್ತಿತರ ಸಮಸ್ಯೆಗ ಳಿಂದ ಚಿಕಿತ್ಸೆಗಾಗಿ ದಾಖಲಾದವರ ಮನಸ್ಸನ್ನು ಬೇರೆಡೆ ಸೆಳೆದು ವಾತಾವರಣ ಸಂಗೀತಮಯ ಮಾಡಲಾಗಿದೆ. ಎಫ್‌ಎಂನ ಕಾರ್ಯಕ್ರಮಗಳ ಜತೆ ಆರೋಗ್ಯದ ಮಾಹಿತಿ ಕೇಳುಗರ ಮನಸೂರೆಗೊಳ್ಳುತ್ತಿದೆ.

ಡಯಾಲಿಸಿಸ್‌ಗೆ ಒಳಗಾಗಿರುವ ಪ್ರತಿಯೊಬ್ಬರಿಗೆ ನಾಲ್ಕು ತಾಸು ಕಾಲಾವಕಾಶ ಅಗತ್ಯವಿದೆ. ಈ ಸಂದರ್ಭದಲ್ಲಿ ನೋವು ಮರೆಯಲು ಸುಶ್ರಾವ್ಯ ಹಾಡುಗಳು ಕಿವಿಗೆ ಇಂಪು ನೀಡುತ್ತದೆ.

‘ಸಂಗೀತಕ್ಕೆ ನೋವು ಮರೆಸುವ ಶಕ್ತಿ ಎಂಬುದನ್ನು ಹಲವು ಅಧ್ಯಯನಗಳು ಕಂಡುಕೊಂಡಿವೆ. ಈ ನಿಟ್ಟಿನಲ್ಲಿ ಜಿಲ್ಲಾಸ್ಪತ್ರೆಯಲ್ಲಿಯೂ ಸಂಗೀತ ಕೇಳುವ ವ್ಯವಸ್ಥೆ ಮಾಡಲಾಗಿದೆ. ಅರವಳಿಕೆ ಚುಚ್ಚುಮದ್ದು ನೀಡದೆ ವ್ಯಕ್ತಿಯ ಮನಸ್ಸನ್ನು ಬೇರೆಡೆ ಸೆಳೆದು ಶಸ್ತ್ರಚಿಕಿತ್ಸೆ ಮಾಡಿದ ಉದಾಹರಣೆಯೂ ಇದೆ. ಸಂಗೀತ ಕೇಳುವುದರಿಂದ ಉದ್ವೇಗಕ್ಕೆ ಒಳಗಾಗಿದ್ದವರು ಸಹಜ ಸ್ಥಿತಿಗೆ ಬರು ತ್ತಾರೆ. ಪ್ರಾಯೋಗಿಕವಾಗಿ ಇದನ್ನು ಅಳವಡಿಸಲಾಗಿದೆ. ನಂತರ ಇತರೆ ವಾರ್ಡ್‌ಗಳಿಗೂ ವಿಸ್ತರಿಸುವ ಬಗ್ಗೆ ನಿರ್ಧರಿಸಲಾಗುವುದು ’ಎಂದು ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ತಿಳಿಸಿದರು.

‘ಸಂಗೀತ ಆಲಿಸುವುದರಿಂದ ಕ್ಷಣದ ಮಟ್ಟಿಗಾದರೂ ತಮ್ಮ ನೋವು ಮರೆತು, ಚಟುವಟಿಕೆಯಿಂದ ಇರುತ್ತಾರೆ. ತಾಪ ತಣಿಸುವ, ಮನಸ್ಸು ಅರಳಿಸುವ ಶಕ್ತಿ ಸಂಗೀತಕ್ಕಿದೆ. ಎಫ್‌ಎಂ ಕಾರ್ಯಕ್ರಮದ ಜತೆಗೆ ಆರೋಗ್ಯ ಪೂರ್ಣ ಮಾಹಿತಿ ನೀಡಲಾಗುತ್ತಿದೆ’ ಎಂದು ಹಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ವಿ.ಆರ್.ಕೃಷ್ಣಮೂರ್ತಿ ಹೇಳಿದರು.

‘ಆಸ್ಪತ್ರೆಯಲ್ಲಿ ಸಂಗೀತ ಕೇಳುವ ವ್ಯವಸ್ಥೆ ಮಾಡಿರುವುದು ಚೆನ್ನಾಗಿದೆ. ಮೊದಲೇ ನೋವಿನಿಂದ ನರಳುತ್ತಿರುತ್ತೇವೆ. ಹಾಡುಗಳನ್ನು ಕೇಳುತ್ತ ಸ್ವಲ್ಪ ನೋವು ಮರೆಯಬಹುದು’ ಎಂದು ರೋಗಿ ನಾಗೇಶ್ ತಿಳಿಸಿದರು.

ಮೂರು ಹೊಸ ಕೋರ್ಸ್
ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೊಸದಾಗಿ ಡಿಪ್ಲೊಮಾ ಇನ್ ಡಯಾಲಿಸಿಸ್‌ ಟೆಕ್ನಾಲಜಿ, ಆಸ್ತಮಾಲಜಿ, ಮೆಡಿಕಲ್ ರೆಕಾರ್ಡ್‌ ಟೆಕ್ನಾಲಜಿ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಈಗಾಗಲೇ ಡಿಪ್ಲೊಮಾ ಲ್ಯಾಬ್ ಟೆಕ್ನಾಲಜಿ, ಹೆಲ್ತ್ ಇನ್‌ಸ್ಪೆಕ್ಟರ್‌, ಆಪರೇಷನ್ ರೂಮ್ ಟೆಕ್ನಾಲಜಿ, ಮೆಡಿಕಲ್ ಇಮೇಜಿನ್ (ಹಿಂದಿನ ಎಕ್ಸ್‌ ರೆ ಟೆಕ್ನಿಷಿಯನ್), ಟ್ರಾಮಕೇರ್‌ ಟೆಕ್ನಾಲಜಿ ಕೋರ್ಸ್‌ಗಳು ಆರಂಭವಾಗಿವೆ.

‘ಹಿಮ್ಸ್‌ನಲ್ಲಿ 150 ಎಂಬಿಬಿಎಸ್, 160 ನರ್ಸಿಂಗ್ ಸೀಟುಗಳು ಲಭ್ಯವಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರು ಹಿಂದೆ ದೂರದ ಬೆಂಗಳೂರು, ಮೈಸೂರಿಗೆ ತೆರಳಬೇಕಿತ್ತು. ಹೈಟೆಕ್‌ ಡಯಾಲಿಸಿಸ್‌ ಕೇಂದ್ರದ ಪ್ರತಿಯೊಂದಕ್ಕೆ ₹ 6 ರಿಂದ ₹ 8 ಲಕ್ಷ ಬೆಲೆಯ ₹ 16 ಡಯಾಲಿಸಿಸ್ ಯಂತ್ರ, ಐವರು ಡಯಾಲಿಸಿಸ್ ಟೆಕ್ನಿಷಿಯನ್‌, ಆರು ಜನ ನರ್ಸ್‌, ವೈದ್ಯರು ಇರುವ ಕಾರಣ ಬಡರೋಗಿಗಳ ಪಾಲಿಗೆ ಈ ಸೌಲಭ್ಯ ಜೀವಾಮೃತವಾಗಿದೆ’ ಎಂದು ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಹೇಳಿದರು.

*
ಆಸ್ಪತ್ರೆ ವಾರ್ಡ್‌, ಒಪಿಡಿ, ಬಿಲ್ ಕೌಂಟರ್‌ ಬಳಿ ಮ್ಯೂಸಿಕ್‌ ಸಿಸ್ಟಂ ಅಳವಡಿಸಲಾಗಿದ್ದು, ಸಂಜೆವರೆಗೂ ಇಂಪಾದ ಹಾಡು ಕೇಳಬಹುದು. ರೋಗಿಗಳು, ಸಿಬ್ಬಂದಿಯಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ
-ಡಾ.ವಿ.ಆರ್.ಕೃಷ್ಣಮೂರ್ತಿ, ಜಿಲ್ಲಾಸ್ಪತ್ರೆ ವೈದ್ಯಕೀಯ ಅಧೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT