ಹಾಸನ: ಈದ್ ಮಿಲಾದ್ ಮೆರವಣಿಗೆ ವೇಳೆ ಆರ್‌ಎಸ್‌ಎಸ್ ಸಂಘಟನೆ ವಿರುದ್ಧ ಘೋಷಣೆ ಕೂಗಿರುವ ಹಾಗೂ ಗಣಪತಿ ಪೆಂಡಾಲ್ ಎದುರು ಪಟಾಕಿ ಸಿಡಿಸಿದ ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣ ವೇದಿಕೆ ಸದಸ್ಯರು ನಗರ ಸರ್ಕಲ್ ಇನ್‌ಸ್ಪೆಕ್ಟರ್‌ಗೆ ಕುಮಾರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ನಗರದಲ್ಲಿ ಸೆ. 16ರಂದು ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಕೆಲವು ಮುಸ್ಲಿಂ ಯುವಕರು ಆರ್‌ಎಸ್ಎಸ್ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ್ದಾರೆ. ಹಳೆ ಬಸ್ ನಿಲ್ದಾಣದ ರಸ್ತೆಯಲ್ಲಿನ ಗಣಪತಿ ಪೆಂಡಾಲ್ ಮುಂದೆ ಪಟಾಕಿ ಸಿಡಿಸಿ, ಪೆಂಡಾಲ್ ಒಳಗೆ ಎಸೆದಿದ್ದಾರೆ ಎಂದು ದೂರಿದ್ದಾರೆ.
ಈ ಎರಡೂ ಘಟನೆಗಳಲ್ಲಿ ಭಾಗಿಯಾಗಿರುವ ಯುವಕರನ್ನು ಬಂಧಿಸಿ ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
‘ಆರೋಪಿಗಳನ್ನು ಬಂಧಿಸಲು ವಿಫಲವಾದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣ ವೇದಿಕೆಯಿಂದ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ.
ರವಿ ಸೋಮು, ವೇಣುಗೋಪಾಲ್, ರಾಜು, ಪುನೀತ್, ಲೋಕೇಶ್, ಸತೀಶ್ ಇದ್ದರು.