ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟನೆಯಲ್ಲಿ ರೇವಣ್ಣ ಕುಟುಂಬ ನಂಬರ್‌ ಒನ್‌: ಪ್ರಜ್ವಲ್‌ ಹೇಳಿಕೆಗೆ ಮಂಜು ತಿರುಗೇಟು

Last Updated 24 ಮೇ 2019, 13:29 IST
ಅಕ್ಷರ ಗಾತ್ರ

ಹಾಸನ: ‘ತಾತ ದೇವೇಗೌಡರಿಗಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ’ ಎಂಬ ಪ್ರಜ್ವಲ್ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಎ.ಮಂಜು, ‘ರಾಜ್ಯದಲ್ಲಿ ನಟನೆಗೆ ನಟಸಾರ್ವಭೌಮ ರಾಜಕುಮಾರ ಕುಟುಂಬ ಬಿಟ್ಟರೆ, ರೇವಣ್ಣ ಕುಟುಂಬವೇ ನಂಬರ್ ಒನ್’ ಎಂದು ಟೀಕಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೇವೇಗೌಡರ ಸೋಲಿಗೆ ಕುಟುಂಬದ ಸದಸ್ಯರೇ ಕಾರಣ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿರುವುದನ್ನು ಮರೆ ಮಾಚಲು ಹೀಗೆ ಹೇಳುತ್ತಿದ್ದಾರೆ. ಗೌಡರ ಈ ಪರಿಸ್ಥಿತಿಗೆ ಇವರೇ ಕಾರಣ. ಮುತ್ಸದ್ದಿ ರಾಜಕಾರಣಿ ಹಾಸನದಿಂದಲೇ ನಿಲ್ಲುವಂತೆ ರಾಜಕೀಯ ವಿರೋಧಿಯಾದರೂ ‌ಹೇಳಿದ್ದೆ. ಈಗ ಭವಾನಿ ಕಣ್ಣೀರು ಹಾಕಿರಬಹುದು. ಅಂದು ಅವರಿಗೆ ಏನು ಅನ್ನಿಸಲಿಲ್ಲವೇ? ಇದು ನಾಟಕವೋ? ಮತ್ತೊಂದೋ? ಮುಂದೆ ನೋಡೋಣ’ ಎಂದು ವ್ಯಂಗ್ಯವಾಡಿದರು.

‘ದೇವೇಗೌಡರು ರಾಜ್ಯದ ಶಕ್ತಿ ಎಂಬುದು ಪ್ರಜ್ವಲ್‌ಗೆ ಈಗ ಅರಿವಾಗಿರಬೇಕು. ಗೌಡರು ಕುಟುಂಬದ ಶಕ್ತಿ. ಅವರು ಮೈತ್ರಿಗೂ ಶಕ್ತಿಯಾಗಲಿಲ್ಲ. ಮೈತ್ರಿಯಿಂದ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಅಂದು ನಾನು ಹೇಳಿದ ಮಾತು ಈಗ ನಿಜವಾಗಿದೆ’ ಎಂದು ನುಡಿದರು.

‘ಹಾಸನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ಜೆಡಿಎಸ್ ಅಲ್ಲ, ಮೈತ್ರಿ ಅಭ್ಯರ್ಥಿ ಗೆದ್ದಿದೆ. ಪ್ರಜ್ವಲ್ ಮನಃಪೂರ್ವಕವಾಗಿ ಈ ಮಾತು ಹೇಳಿಲ್ಲ. ಜನರ ದಾರಿ ತಪ್ಪಿಸಲು ಹಾಗೂ ಪ್ರಚಾರದ ಸಲುವಾಗಿ ರಾಜೀನಾಮೆ ಹೇಳಿಕೆ ನೀಡಿದ್ದಾರೆ. ಪ್ರಜ್ವಲ್‌ ರಾಜೀನಾಮೆ ನೀಡುವುದಕ್ಕೆ ಗೌಡರು ಒಪ್ಪಿಕೊಂಡರೆ ಪಕ್ಷ ಉಳಿಯಲಿದೆ. ಮುಂದೆ ಅವರ ವಿರುದ್ಧ ನಾನು ಸ್ಪರ್ಧಿಸುವ ಬಗ್ಗೆ ಈಗಲೇ ಏನು ಹೇಳುವುದಿಲ್ಲ. ನನ್ನ ಪಕ್ಷದ ಹೈಕಮಾಂಡ್‌ ಹೇಳಿದಂತೆ ಕೇಳುವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಾನು ಬಿಜೆಪಿ ಸೇರಿದ ಬಳಿಕ ಮತ ಪ್ರಮಾಣ ಶೇ 11 ರಿಂದ 46 ಕ್ಕೆ ತೆಗೆದುಕೊಂಡಿರುವುದು ಸಾಧನೆ. ಇದುವರೆಗೂ ಯಾರು ಮಾಡಿಲ್ಲ’ ಎಂದರು.

ದೇವರಾಜ್‌ ಅರಸು ಬಳಿಕ ಉತ್ತಮ ಮುಖ್ಯಮಂತ್ರಿ ಸಿದ್ದರಾಮಯ್ಯ. ಕಾಲೇಜು ದಿನಗಳಿಂದಲೂ ಅವರನ್ನು ನೋಡಿದ್ದೇನೆ. ಬಡವರಿಗೆ ಒಳ್ಳೆ‌ಯ ಕೆಲಸ ಮಾಡಿದ್ದಾರೆ ಎಂದು ತಮ್ಮ ಮಾಜಿ ನಾಯಕನ ಬಗ್ಗೆ ಮಂಜು ಗುಣಗಾನ ಮಾಡಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ 37 ಸ್ಥಾನ ಗೆಲ್ಲಲು ಯಡಿಯೂರಪ್ಪ ಕಾರಣ. ಬಳಿಕ ಅವರಿಗೆ ಮೋಸ ಮಾಡಿ, ಕಾಂಗ್ರೆಸ್ ಸಖ್ಯ ಬೆಳೆಸಿ ಮುಖ್ಯಮಂತ್ರಿಯಾದರು ಎಂದು ವಾಗ್ದಾಳಿ ನಡೆಸಿದರು.

ಅಧಿಕಾರ ಉಳಿಸಿಕೊಳ್ಳಲು ದಲಿತ ಸಿ.ಎಂ ವಿಚಾರ ಪ್ರಸ್ತಾಪ ಮಾಡುತ್ತಾರೆ. ಹಾಗಿದ್ರೆ ಇಷ್ಟು ದಿನ ಅಧಿಕಾರ ಮಾಡಿದ್ದೇವೆ. ಈಗ ದಲಿತ ಸಿ.ಎಂ ಮಾಡಿ ಎಂದು ಹೇಳಲಿ. ಎಲ್ಲರೂ ಅವರ ಸ್ಥಾನ ಉಳಿಸಿಕೊಳ್ಳಲು ನೋಡುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT