ಸಕಲೇಶಪುರ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಜೀವಿನಿ (ಎನ್‌ಆರ್‌ಎಲ್‌ಎಂ) ಯೋಜನೆ ಅಡಿ ಸಾಲ ಪಡೆದು ತಾಲ್ಲೂಕಿನ ಹಲವುಮಹಿಳೆಯರು ತಂಪು ಪಾನೀಯ, ಅಣಬೆ ಬೇಸಾಯ, ಬೇಕರಿ ತಿನಿಸುಗಳು, ಅಕ್ಕಿರೊಟ್ಟಿ, ಹಪ್ಪಳ, ಸಂಡಿಗೆ, ಕಾಫಿ, ಕಾಳು ಮೆಣಸು, ಅಡಿಕೆ ನರ್ಸರಿ ಸೇರಿದಂತೆ ಹಲವು ಆರ್ಥಿಕ ಚಟುವಟಿಕೆ ನಡೆಸಿ ಯಶಸ್ಸು ಕಂಡಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು 1100 ಮಹಿಳಾ ಸ್ವ ಸಹಾಯಕ ಸಂಘಗಳಿದ್ದು, ಪ್ರತಿಗ್ರಾಮ ಪಂಚಾಯಿತಿಯಲ್ಲಿ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟಗಳುರಚನೆಯಾಗಿವೆ. ಪ್ರತಿ ತಿಂಗಳು ಪಂಚಾಯಿತಿ ಕಚೇರಿಗಳಲ್ಲಿ ಸಭೆ ಸೇರುತ್ತಾರೆ.
ಹಿಂದೆ ಎಸ್‌ಜಿಎಸ್‌ವೈ ( ಸ್ವರ್ಣ ಜಯಂತಿ ರೋಜ್‌ಗಾರ್ ಯೋಜನೆ) ಮಹಿಳಾಆರ್ಥಿಕ ಸಬಲೀಕರಣ ವಿಫಲವಾದ ಕಾರಣ ಎನ್‌ಆರ್‌ಎಲ್‌ಎಂ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಇದರ ಮುಖಾಂತರ ಪ್ರತಿಗ್ರಾಮಗಳಲ್ಲಿ ವಾರ್ಡ್‌ಗಳ ರಚನೆ ಆಗಿದೆ. ತಾಲ್ಲೂಕಿನಲ್ಲಿ ಒಟ್ಟು 115ವಾರ್ಡ್‌ಗಳು ಇವೆ.
ತಾಲ್ಲೂಕಿನ ಹೆಬ್ಬಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಹಳ್ಳಿ ಗ್ರಾಮದಲ್ಲಿಮೈಮುನ್ನ ಎಂಬುವವರು ಒಕ್ಕೂಟದ ಸಮುದಾಯ ಬಂಡವಾಳ ₹ 2.50ಲಕ್ಷ ಸಾಲ ಪಡೆದು ತಂಪು ಪಾನೀಯ ಘಟಕ ನಡೆಸುತ್ತಿದ್ದಾರೆ. ಮಾಸಿಕ ₹ 15 ರಿಂದ ₹ 20 ಸಾವಿರ ಲಾಭ ಪಡೆಯುತ್ತಿರುವುದಾಗಿ ಅವರುಹೇಳುತ್ತಾರೆ.
ಹೆಬ್ಬಸಾಲೆ ಪಂಚಾಯಿತಿ ವ್ಯಾಪ್ತಿಯ ಮಾವಿನಕೋಲು ಗ್ರಾಮದಲ್ಲಿ ದೇವಿಕಾ ₹1 ಲಕ್ಷ ಸಾಲ ಪಡೆದು ಅಣಬೆ ಬೇಸಾಯದಲ್ಲಿ ಮಾಸಿಕ ಕನಿಷ್ಠ ₹ 10ಸಾವಿರ ಲಾಭ ಪಡೆಯುತ್ತಿದ್ದಾರೆ. ಹಾನುಬಾಳು ಗ್ರಾಮದ ಇಂದ್ರಾಣಿ ₹ 2 ಲಕ್ಷ ಸಾಲ ಪಡೆದು ಅಣಬೆ, ಕೋಳಿ, ಮೊಲ, ಇಲಿ ಸಾಕಾಣಿಕೆ ಮಾಡುತ್ತಿದ್ದಾರೆ.
ಬೆಳಗೋಡು, ಹೆತ್ತೂರು, ದೇವಾಲದಕೆರೆ, ಬಿರಡಹಳ್ಳಿ, ಬಾಗೆ ಗ್ರಾಮಪಂಚಾಯಿತಿಗಳಲ್ಲಿಯೂ ಅಣಬೆ ಬೇಸಾಯ ಮಾಡಲಾಗುತ್ತಿದೆ.ಬಾಗೆ ಪಂಚಾಯಿತಿ ವ್ಯಾಪ್ತಿಯ ಕಾಕನಮನೆ ಗ್ರಾಮದಲ್ಲಿ ಲೋಹಿತಾ ಕುಮಾರಿಮಂಜುಳಾ, ಹೇಮಾವತಿ ₹ 2.50 ಲಕ್ಷ ಸಾಲ ಪಡೆದು ಅಡಿಕೆ, ಕಾಫಿ,ಕಾಳು ಮೆಣಸು, ಏಲಕ್ಕಿ , ಸಿಲ್ವರ್ ಗಿಡಗಳ ನರ್ಸರಿ ಮಾಡುತ್ತಿದ್ದು, ಸುಮಾರು ₹2 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ಬೆಳೆದು ಮಾರಾಟ ಮಾಡುತ್ತಿದ್ದಾರೆ. ಇವರು ಅಣಬೆ ಬೇಸಾಯದಿಂದಲೂ ಲಾಭ ಗಳಿಸುತ್ತಿದ್ದಾರೆ.
ಕುನಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡೂರು ಸುಮಾ ಲೋಕೇಶ್‌ನರ್ಸರಿ, ಬಿರಡಹಳ್ಳಿ, ಹೆಬ್ಬಸಾಲೆ, ಹಾನುಬಾಳು, ಕ್ಯಾಮನಹಳ್ಳಿ, ಮಳಲಿ ಗ್ರಾಮಪಂಚಾಯಿತಿ ಒಕ್ಕೂಟಗಳ ಸದಸ್ಯರು, ಒಕ್ಕೂಟದಿಂದ ಸಾಲ ಪಡೆದು ಆದಾಯೋತ್ಪನ್ನ ಚಟುವಟಿಕೆ ನಡೆಸುತ್ತಿದ್ದಾರೆ.
‘ಲಕ್ಕುಂದ ಹಾಗೂ ಮೂಗಲಿ ಗ್ರಾಮಗಳಲ್ಲಿ ₹ 1 ಲಕ್ಷ ಸಾಲ ಪಡೆದು ಬಿದಿರಿನಿಂದ ಕುಕ್ಕೆ, ಮೊರ, ಹೆಣಿಗೆ ಹಾಗೂ ಇನ್ನೂ ಹಲವು ವಸ್ತುಗಳನ್ನುಮಾರಾಟ ಮಾಡುತ್ತಿದ್ದಾರೆ. ವಾರದ ಸಂತೆಯಲ್ಲಿಯೂ ಮಾರಾಟ ಮಾಡಿಕೊಂಡು ಬರುತ್ತಿದ್ದಾರೆ. ಇದರಿದ ಮಾಸಿಕ ₹ 10 ರಿಂದ ₹ 15ಸಾವಿರ ಗಳಿಸುತ್ತಿದ್ದೇವೆ’ ಎಂದು ಲಕ್ಕುಂದ ಗ್ರಾಮದ ಗೌರಮ್ಮ ಹೇಳಿದರು.
‘ನಿತ್ಯ 500ಕ್ಕೂ ಹೆಚ್ಚು ಅಕ್ಕಿ ರೊಟ್ಟಿ ತಯಾರಿಸಿ ಹೋಟೆಲ್ ಹಾಗೂ ಇತರೆಡೆಮಾರಾಟ ಮಾಡುತ್ತಿದ್ದೇವೆ. ನರ್ಸರಿ, ಅಣಬೆ ಬೇಸಾಯ, ತಿಂಡಿ ತಿನಿಸುಗಳನ್ನುಸಹ ಉತ್ಪಾದಿಸಿ ಮಾರಾಟ ಮಾಡುತ್ತಿದ್ದೇವೆ’ ಎಂದು ಕಾಕನ ಮನೆ ಲೋಹಿತ ಕುಮಾರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.