ಹಾಸನ: ಜಿಲ್ಲೆಯ ಕೆಲವು ಅಧಿಕಾರಿಗಳು ಬಿಜೆಪಿ ಮುಖಂಡರ ಅಧೀನದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು
ಶಾಸಕ ಎಚ್.ಡಿ. ರೇವಣ್ಣ ಆರೋಪಿಸಿದರು.
ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಸೇರಿದಂತೆ ಜಿಲ್ಲೆಯ ಅನೇಕ ಸರ್ಕಾರಿ ಅಧಿಕಾರಿಗಳು ಬಿಜೆಪಿ ಮುಖಂಡರ ಅಧೀನದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಅಧಿಕಾರಿಗಳ ಘನತೆಗೆ ಶೋಭೆ ತರುವುದಿಲ್ಲ. ಸಾರ್ವಜನಿಕ ತೆರಿಗೆ ಹಣದಿಂದ ಸಂಬಳ ಪಡೆದ ಅಧಿಕಾರಿಗಳು ನ್ಯಾಯಯುತವಾಗಿ ಕೆಲಸ ಮಾಡಬೇಕು. ಅನ್ಯಾಯ ಮಾಡುತ್ತಿರುವ ಅಧಿಕಾರಿಗಳಿಗೆ ದೇವರೆ ಶಿಕ್ಷೆ ನೀಡುವ ಕಾಲ ಬರುತ್ತದೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಮೀಸಲಾತಿ ಮತ್ತು ಚುನಾವಣೆ ದಿನಾಂಕ ನಿಗದಿಗೆ ಸಂಬಂಧಿಸಿದಂತೆ ಬಿಜೆಪಿ ಏಜೆಂಟರಂತೆ ಅಧಿಕಾರಿಗಳು ವರ್ತಿಸಿದ್ದಾರೆ. ಎಲ್ಲ ಸರ್ಕಾರಿ ಕಚೇರಿಗಳು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ತೆರೆದರೆ, ಹಾಸನ ಜಿಲ್ಲಾಧಿಕಾರಿ ಕಚೇರಿ ತಡೆ ರಾತ್ರಿವರೆಗೂ ತೆರೆದಿರುತ್ತದೆ ಎಂದು ವ್ಯಂಗ್ಯವಾಡಿದರು.
ತರಾತುರಿಯಲ್ಲಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ. ಚುನಾವಣೆಗೆ 7 ದಿನ ಮೊದಲು ಸದಸ್ಯರಿಗೆ ನೋಟಿಸ್ ಕಳಿಸಬೇಕು. ಆದರೆ, ಪಕ್ಷದ ಬಹುತೇಕ ಸದಸ್ಯರಿಗೆ ಇನ್ನೂ ನೋಟಿಸ್ ತಲುಪಿಲ್ಲ. ಅ. 8 ರಂದು ಮೀಸಲಾತಿ ಪ್ರಕಟಗೊಂಡಿದ್ದು, ಎರಡು ದಿನಗಳಲ್ಲಿ ಚುನಾವಣೆ ದಿನಾಂಕ (ಅ. 16) ನಿಗದಿಪಡಿಸಲಾಗಿದೆ. ಸಂಸದ ಪ್ರಜ್ವಲ್‌ಗೂ ನೋಟಿಸ್ ತಲುಪಿಲ್ಲ. ಚುನಾವಣಾ ಆಯೋಗದಿಂದ ಅ. 8ರ ಸಂಜೆ 6 ಗಂಟೆಗೆ ಮೀಸಲಾತಿ ಪಟ್ಟಿ ಪ್ರಕಟಿಸಿ, ಕೇವಲ ಮೂರು ಗಂಟೆಯಲ್ಲಿ ಎಲ್ಲರಿಗೂ ತಲುಪಿ ಚುನಾವಣೆ ದಿನಾಂಕ ನಿಗದಿಯಾಗುವ ಮಟ್ಟಕ್ಕೆ ಬಂದು ನಿಲ್ಲುತ್ತದೆ ಎಂದರು
ಬಿಜೆಪಿ ಪ್ರಬಲವಾಗಿಲ್ಲದ ಕಡೆ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ. ಮೀಸಲಾತಿ ಪಟ್ಟಿ ಪ್ರಕಟ ವಿರೋಧಿಸಿ ನ್ಯಾಯಾಲಯದ ಮೊರೆ ಹೋಗಿದ್ದು, ಕೋರ್ಟ್ ಆದೇಶಕ್ಕಾಗಿ ಕಾಯಲಾಗುತ್ತಿದೆ. ರೋಸ್ಟರ್ ಪ್ರಕಾರ ಹಾಸನ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಹದಿನೈದು ವರ್ಷದ ನಂತರ ನಿಗದಿಯಾಗಬೇಕು. ಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನ ಎಸ್‌ಟಿಗೆ ಮೀಸಲಾಗಿದೆ. ಇದರಲ್ಲೂ ನಿಯಮ ಪಾಲನೆ ಆಗಿಲ್ಲ ಎಂದರು.
150 ವರ್ಷ ಇತಿಹಾಸ ಹೊಂದಿರುವ ಕಾಂಗ್ರೆಸ್‍ಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳು ಸಿಕ್ಕಿಲ್ಲ. ಆರ್‍ಆರ್ ನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಜೆಡಿಎಸ್ ಮುಖಂಡ ಹನುಮಂತರಾಯಪ್ಪರ ಪುತ್ರಿ ಎಂಬುದನ್ನು ಮರೆಯಬಾರದು. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪ್ರಾದೇಶಿಕ ಜೆಡಿಎಸ್ ಪಕ್ಷವನ್ನು ತುಳಿಯಲು ಯತ್ನಿಸುತ್ತಿವೆ. ಕೋಮುವಾದಿಗಳ ವಿರುದ್ಧ ಹೋರಾಡುವುದಾಗಿ ಹೇಳುವ ಕಾಂಗ್ರೆಸ್‌ನವರು ಮಂಡ್ಯ ಹಾಗೂ ತುಮಕೂರು ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಿದರು? ಮಂಡ್ಯದಲ್ಲಿ ಮೂಲ ಜೆಡಿಎಸ್ ಮತಗಳು ನಿಖಿಲ್ ಕುಮಾರಸ್ವಾಮಿಗೆ ದೊರೆತವು. ಆದರೆ ಕಾಂಗ್ರೆಸ್ ನಾಯಕರು ಮೋಸ ಮಾಡಿದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.