ಭಾನುವಾರ, ಫೆಬ್ರವರಿ 5, 2023
21 °C
ನಗರಸಭೆ ವತಿಯಿಂದಲೇ ಬಟ್ಟೆ ಬ್ಯಾಗ್‌ ವಿತರಣೆ

ದಂಡದ ಅಸ್ತ್ರಕ್ಕೂ ಬಗ್ಗದ ಪ್ಲಾಸ್ಟಿಕ್ ದಂಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ನಗರದಲ್ಲಿ ಪ್ಲಾಸ್ಟಿಕ್‌ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದರೂ  ಪ್ಲಾಸ್ಟಿಕ್‌ ದಂಧೆ ನಡೆಯುತ್ತಲೇ ಇದೆ. 
ಪ್ಲಾಸ್ಟಿಕ್ ಕವರ್ ಸೇರಿದಂತೆ ಉಳಿದ ಉತ್ಪನ್ನಗಳು ಜನರ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿದೆ. ಪ್ರತಿನಿತ್ಯ ಪ್ಲಾಸ್ಟಿಕ್ ತ್ಯಾಜ್ಯ ಭೂಮಿ ಒಡಲು ಸೇರುತ್ತಿದೆ.

ಅಧಿಕಾರಿಗಳು ನಗರದ ಹೋಟೆಲ್‌, ದಿನಸಿ ಅಂಗಡಿ, ಮಾರುಕಟ್ಟೆ, ಬೇಕರಿ, ಮದ್ಯದಂಗಡಿ ಹಾಗೂ ಹಣ್ಣು ಅಂಗಡಿ ಮೇಲೆ ದಾಳಿ ನಡೆಸಿ ದಂಡ ವಿಧಿಸಿದ್ದರೂ ಪ್ಲಾಸ್ಟಿಕ್‌ ಮಾರಾಟ ನಿರ್ಭೀತವಾಗಿ ನಡೆಯುತ್ತಿದೆ.

ತಣ್ಣೀರು ಹಳ್ಳ, ಕಟ್ಟಿನಕೆರೆ ಮಾರುಕಟ್ಟೆ, ಬಿ.ಎಂ. ರಸ್ತೆ, ಕಲಾಭವನ ರಸ್ತೆ ಸೇರಿದಂತೆ ಎಲ್ಲೆಡೆ ಪ್ಲಾಸ್ಟಿಕ್ ತ್ಯಾಜ್ಯದ ರಾಶಿಗಳು ಕಾಣಸಿಗುತ್ತವೆ.

ಬೀದಿ ಬದಿ ವ್ಯಾಪಾರಿಗಳು, ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಗ್ರಾಹಕರಿಗೆ ತರಕಾರಿಯನ್ನು ಪ್ಲಾಸ್ಟಿಕ್ ಕವರ್‌ನಲ್ಲಿಯೇ ಹಾಕಿಕೊಡುತ್ತಾರೆ. ಅದೇ ರೀತಿ ದಿನಸಿ ಅಂಗಡಿಗಳಲ್ಲಿ ಕೂಡ ಪ್ಲಾಸ್ಟಿಕ್ ಕವರ್ ಬಳಸಲಾಗುತ್ತಿದೆ.

ಹಣ್ಣಿನ ಅಂಗಡಿ, ಹೋಟೆಲ್, ಚಿಕನ್-ಮಟನ್ ಸ್ಟಾಲ್, ವೈನ್ ಶಾಪ್ ಮೊದಲಾದ ಕಡೆಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಹಾಗೂ ಲೋಟ ಬಳಕೆ ಮಾಡುವುದು ಮುಂದುವರಿದಿದೆ.

ತರಕಾರಿ ಮಾರುಕಟ್ಟೆ ಪ್ರದೇಶ ಗಳಲ್ಲಿನ ವ್ಯಾಪಾರಸ್ಥರೇ ರಾತ್ರಿ ಅಂಗಡಿ ಮುಚ್ಚುವ ವೇಳೆ ಪ್ಲಾಸ್ಟಿಕ್ ತ್ಯಾಜ್ಯ ವನ್ನು ಹೊರಗಡೆ ಬಿಸಾಕಿ ಬೆಂಕಿ ಹಾಕುತ್ತಾರೆ. ಹಸುಗಳು ಹಸಿ ತ್ಯಾಜ್ಯದ ಜತೆಗೆ ಪ್ಲಾಸ್ಟಿಕ್‌ಗಳನ್ನೂ ಸೇವಿಸಿ ಮೃತಪಟ್ಟಿರುವ ಉದಾಹರಣೆಯೂ ಇದೆ.

‘ಮಾರುಕಟ್ಟೆಗೆ ಬರುವ ಗ್ರಾಹಕರು ಖಾಲಿ ಕೈಯಲ್ಲಿ ಬರುತ್ತಾರೆ. ಪ್ಲಾಸ್ಟಿಕ್ ಕವರ್‌ನಲ್ಲಿ ಹಣ್ಣುಗಳನ್ನು ನೀಡುವಂತೆ ಸೂಚಿಸುತ್ತಾರೆ. ₹5 ನೀಡಿ ಬಟ್ಟೆಯ ಚೀಲ ಖರೀದಿಸುವುದಿಲ್ಲ. ಅನಿವಾರ್ಯವಾಗಿ ಪ್ಲಾಸ್ಟಿಕ್ ಕವರ್‌ನಲ್ಲಿಯೇ ನೀಡಬೇಕಿದೆ’ ಎಂದು ತರಕಾರಿ ವ್ಯಾಪಾರಿ ಜಯಮ್ಮ ಅಸಮಾಧಾನವ್ಯಕ್ತಪಡಿಸಿದರು.

ದಂಡದ ಅಸ್ತ್ರ ಪ್ರಯೋಗಿಸಿದರೂ ಪ್ಲಾಸ್ಟಿಕ್‌ ಬಳಕೆ ನಿಯಂತ್ರಣಕ್ಕೆ ಬಂದಿಲ್ಲ. ಪ್ಲಾಸ್ಟಿಕ್ ಉತ್ಪಾದಕರಿಗೆ ₹2 ಲಕ್ಷದಿಂದ 5 ಲಕ್ಷದವರೆಗೂ ದಂಡ ವಿಧಿಸುವ ಅವಕಾಶವಿದೆ. ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವವರಿಗೆ ದಂಡ ಹಾಕಲಾಗುತ್ತಿದೆ. ಸಾರ್ವಜನಿಕರಿಗೆ ₹500 ರಿಂದ ₹ 1 ಸಾವಿರದವರೆಗೆ ದಂಡ ವಿಧಿಸಬಹುದಾಗಿದೆ.

ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌, ಪ್ಲಾಸ್ಟಿಕ್‌ ಭಿತ್ತಿಪತ್ರ, ಪ್ಲಾಸ್ಟಿಕ್‌ ತೋರಣ, ಪ್ಲಾಸ್ಟಿಕ್‌ ಬಾವುಟ, ಫ್ಲೆಕ್ಸ್‌, ಪ್ಲಾಸ್ಟಿಕ್‌ ತಟ್ಟೆ, ಲೋಟ, ಚಮಚ, ಊಟದ ಟೇಬಲ್ ಮೇಲೆ ಹರಡುವ ಹಾಳೆ, ಹಣ್ಣು ಹಂಪಲು ಮೇಲೆ ಸುತ್ತುವ ಹಾಳೆ, ಥರ್ಮೊಕೋಲ್‌ ಉತ್ಪನ್ನ ನಿಷೇಧಿಸಲಾಗಿದೆ.

ಇದಕ್ಕೆ ಪರ್ಯಾಯವಾಗಿ ಅಡಿಕೆ, ಬಾಳೆ ಎಲೆ, ಮರದ ಚಮಚ, ಪೇಪರ್ ಲೋಟ, ಪೇಪರ್ ರೋಲ್ಸ್, ಬಟ್ಟೆ ಬಾವುಟ, ಬಟ್ಟೆ ಬ್ಯಾಗ್, ಬಟ್ಟೆ, ಪೇಪರ್ ಕವರ್, ಮುಂತಾದವುಗಳನ್ನು ಬಳಸಬಹುದು.‌

ಬೀದಿ ಬದಿ ವ್ಯಾಪಾರಿಗಳು, ಬೇಕರಿ, ದಿನಸಿ ಅಂಗಡಿ, ಚಿಕನ್‌, ಮಟನ್‌ ಮಾರಾಟ ಅಂಗಡಿ, ಹೋಟೆಲ್‌, ಹಣ್ಣು ಮಾರಾಟ ಅಂಗಡಿಗಳಲ್ಲಿ ಬಟ್ಟೆ ಬ್ಯಾಗ್‌ ಬಳಸುತ್ತಿಲ್ಲ. ಕೆಲವು ಕಡೆ ಬಟ್ಟೆ ಬ್ಯಾಗ್‌ಗಳಲ್ಲೇ ಪದಾರ್ಥಗಳನ್ನು ನೀಡಲಾಗುತ್ತಿದೆ.

50 ಮೈಕ್ರಾನ್‌ಗಿಂತ ತೆಳುವಾದ ಪ್ಲಾಸ್ಟಿಕ್‌ ವಸ್ತುಗಳು ಪರಿಸರಕ್ಕೆ ಮಾರಕವಾಗಿದೆ. ಅವುಗಳನ್ನು ಮರು ಬಳಕೆ ಮಾಡಲು ಬರುವುದಿಲ್ಲ. ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಕ್ವಿಂಟಲ್‌ ಗಟ್ಟಲೇ ಪ್ಲಾಸ್ಟಿಕ್‌ ವಸ್ತುಗಳನ್ನು ವಶ ಪಡಿಸಿಕೊಳ್ಳುವುದರ ಜತೆಗೆ ದಂಡ ವಿಧಿಸಿದ್ದಾರೆ.

ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಮಳೆಗಾಲದಲ್ಲಿ ಚರಂಡಿ ಕಟ್ಟಿಕೊಂಡು ನೀರು ಸರಾಗವಾಗಿ ಹರಿದು ಹೋಗಲು ಆಗುತ್ತಿಲ್ಲ. ಹಲವು ಕಡೆ ಚರಂಡಿಗಳು ಕಟ್ಟಿಕೊಂಡು ರಸ್ತೆ ಮೇಲೆ ಗಲೀಜು ನೀರು ಹರಿದ ಉದಾಹರಣೆ ಇದೆ.

ನಗರಸಭೆ ಆರೋಗ್ಯ ನಿರೀಕ್ಷಕ ರಂಜನ್‌ ಮಾತನಾಡಿ, ‘‘ಪ್ಲಾಸ್ಟಿಕ್ ಮಾರಾಟ ಮಾಡುವ ಸ್ಥಳಗಳಲ್ಲಿ ದಾಳಿ ನಡೆಸಿ ಮಾರಾಟಗಾರಿಗೆ ದಂಡ ವಿಧಿಸಲಾಗಿದೆ. ಉದಾಹರಣೆಗೆ ಮಹಾಲಕ್ಷ್ಮೀ ಸ್ವೀಟ್ಸ್‌ಗೆ ₹ 10 ಸಾವಿರ, ಜ್ಯೂಸ್‌ ಸೆಂಟರ್‌ಗೆ ₹ 5 ಸಾವಿರ, ಹಣ್ಣಿನ ವ್ಯಾಪಾರಿಗಳಿಗೆ ₹ 3 ಸಾವಿರ ದಂಡ ವಿಧಿಸಲಾಗಿದೆ. ಪ್ಲಾಸ್ಟಿಕ್‌ ನಿಯಂತ್ರಣಕ್ಕಾಗಿಯೇ ಪ್ರತಿ ದಿನ ನಗರಸಭೆ ಆಯುಕ್ತರ ನೇತೃತ್ವದಲ್ಲಿ ಬಿಲ್‌ ಕಲೆಕ್ಟರ್‌ಗಳು, ಆರೋಗ್ಯ ನಿರೀಕ್ಷಕರನ್ನು ಒಳಗೊಂಡ ತಂಡ ಮಾರುಕಟ್ಟೆ, ಹೋಟೆಲ್‌, ತಣ್ಣೀರು ಹಳ್ಳ ಹಾಗೂ ಇತರೆ ಪ್ರದೇಶಗಳಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳುತ್ತಿದೆ. ಅಂದಾಜು ಈವರೆಗೂ 3 ಟನ್ ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಸದ್ಯ ಶೇಕಡಾ 70 ರಷ್ಟು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲಾಗಿದೆ. ವಾರದಲ್ಲಿ ಎರಡು-ಮೂರು ದಿನ ನಿರಂತರವಾಗಿ ದಿಢೀರ್ ದಾಳಿ ಹಾಗೂ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿ ಯಲಿದೆ.  ವಾರದ  ಸಂತೆಯಲ್ಲೂ ಶೋಧ ಕಾರ್ಯ ನಡೆಸಿ ಪ್ಲಾಸ್ಟಿಕ್ ಕವರ್ ವಶಪಡಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳು, ಸ್ತ್ರೀ ಶಕ್ತಿ ಗುಂಪು, ರಸ್ತೆ ಬದಿ ವ್ಯಾಪಾರಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಕಟ್ಟಿನ ಕೆರೆ ಮಾರುಕಟ್ಟೆಯಲ್ಲಿ ಕ್ಯಾಂಡಲ್ ಮೂಲಕ ಅರಿವು ಮೂಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಆರಂಭಿಕವಾಗಿ ನಗರಸಭೆಯಿಂದಲೇ ಬಟ್ಟೆ ಬ್ಯಾಗ್ ವಿತರಣೆ ಮಾಡಲಾಗಿದೆ’ ಎಂದು ನಗರಸಭೆ ಆಯುಕ್ತ ಕೃಷ್ಣಮೂರ್ತಿ ವಿವರಿಸಿದರು.

 

ಕ್ಯಾನ್ಸರ್‌ಗೆ ಆಹ್ವಾನ

‘ಪ್ಲಾಸ್ಟಿಕ್ ಮಾಲಿನ್ಯ ಕ್ಯಾನ್ಸರ್ ಪ್ರಕರಣಗಳ ಹೆಚ್ಚಳಕ್ಕೂ ಕಾರಣವಾಗಿದೆ. ರಸ್ತೆ ಬದಿ ವ್ಯಾಪಾರಿಗಳು ಬಿಸಿ ಆಹಾರ ಪದಾರ್ಥವನ್ನು ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಹಾಕಿ, ಪಾರ್ಸಲ್ ಕಟ್ಟುಕೊಡುತ್ತಾರೆ. ಇದರಿಂದ ಪ್ಲಾಸ್ಟಿಕ್‌ನ ಹೈಡ್ರೋಕಾರ್ಬನ್‌ನಂತಹ ರಾಸಾಯನಿಕ ಅಂಶಗಳು ಆಹಾರ ಪದಾರ್ಥಗಳ ಒಳಗೆ ಸೇರಿ, ದೇಹದ ರೋಗನಿರೋಧಕ ಶಕ್ತಿ ಕುಗ್ಗಿಸುತ್ತವೆ’ ಎಂದು ಡಾ. ಗುರುಬಸವರಾಜ್‌ ತಿಳಿಸಿದರು.

****

ಸರ್ಕಾರದ ಆದೇಶವನ್ನು ಅಧಿಕಾರಿಗಳು ಕಟ್ಟನಿಟ್ಟಾಗಿ ಅನುಷ್ಠಾನಗೊಳಿಸಬೇಕು. ದಂಡದ ಪ್ರಮಾಣವನ್ನು ಹೆಚ್ಚಿಸಿ ಸಂಪೂರ್ಣ ಬಳಕೆ ನಿಲ್ಲಿಸಬೇಕು.
-ಧನುಷ್‌, ಉದ್ಯೋಗಿ

ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಹಾನಿಯಾ ಗುವುದನ್ನು ಅರಿತು ಬಟ್ಟೆ ಬ್ಯಾಗ್‌ಗಳನ್ನು ಬಳಸಬೇಕು. ಇಲ್ಲವಾದರೆ ಮುಂದೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರಕ್ಕೆ ಹಾನಿ ಉಂಟಾಗಲಿದೆ.
- ಶಶಿಧರ್‌, ಹಾಸನ

ಸಾರ್ವಜನಿಕರು ಸಹ ಪ್ಲಾಸ್ಟಿಕ್‌ ಬಳಕೆಯಿಂದ ಆಗುವ ತೊಂದರೆ ಬಗ್ಗೆ ಅರಿತುಕೊಳ್ಳಬೇಕು. ಮನೆಯಿಂದಲೇ ಬಟ್ಟೆ ಬ್ಯಾಗ್‌ ತೆಗೆದುಕೊಂಡು ಹೋಗಿ ವಸ್ತುಗಳನ್ನು ತರಬೇಕು.
ವರುಣ್‌, ಕುವೆಂಪುನಗರ

ಪ್ಲಾಸ್ಟಿಕ್‌ ನಿಷೇಧ ಜಾಗೃತಿ ಮೂಡಿಸಲು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಐದು ದಿನ 300 ಕಿ.ಮೀ. ಸೈಕಲ್‌ ಜಾಥ ನಡೆಸಲು ನಿರ್ಧರಿಸಲಾಗಿದೆ.
-ಆರ್‌.ಜಿ.ಗಿರೀಶ್, ಏಕಲವ್ಯ ಓಪನ್‌ ಗ್ರೂಪ್‌ ರೋವರ್‌ ಸ್ಕೌಟ್ಸ್‌ ಲೀಡರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು