ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರ ಪರಿಹಾರಕ್ಕೆ ಅಸಹಕಾರ: ಎತ್ತಿನಹೊಳೆ ಭೂ ಸಂತ್ರಸ್ತರ ಅಳಲು

ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ವಿರುದ್ಧ ಭೂ ಸಂತ್ರಸ್ತರ ಆಕ್ರೋಶ
Last Updated 25 ಸೆಪ್ಟೆಂಬರ್ 2020, 2:44 IST
ಅಕ್ಷರ ಗಾತ್ರ

ಅರಸೀಕೆರೆ: ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ಇದುವರೆಗೆ ಕೇವಲ ಯೋಜನೆ ಕಾಮಗಾರಿಯ ಗುತ್ತಿಗೆದಾರರಿಗೆ ಮಾತ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ. ಆದರೆ ಅತಂತ್ರವಾಗಿರುವ ಎತ್ತಿನಹೊಳೆ ಭೂ ಸಂತ್ರಸ್ತರಿಗೆ ಪರಿಹಾರ ಬಂದಿಲ್ಲ ಎಂದು ತಾಲ್ಲೂಕಿನ ಹಾರನಹಳ್ಳಿ ಮತ್ತು ಹಬ್ಬನಘಟ್ಟ ಭಾಗದ ಎತ್ತಿನಹೊಳೆ ಭೂ ಸಂತ್ರಸ್ತರು ಅಳಲು ತೋಡಿಕೊಂಡರು.

ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳು ಭೂ ಸಂತ್ರಸ್ತರ ಪರವಾಗಿ ನಿಲ್ಲದೆ ಇರುವುದು ಬೇಸರ ಮೂಡಿಸಿದೆ ಎಂದು ಲಕ್ಕೇನಹಳ್ಳಿ ಗ್ರಾಮದ ರೈತ ಬಸವರಾಜ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಎತ್ತಿನಹೊಳೆ ನೀರಾವರಿ ಯೋಜನೆಯು ಅರಸೀಕೆರೆ ತಾಲ್ಲೂಕಿಗೆ ಸಮಗ್ರ ಕುಡಿಯುವ ನೀರಿನ ಯೋಜನೆಯಾಗಿದೆ. ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಸ್ಥಳೀಯ ಶಾಸಕರ ಮನವಿಗೆ ಸ್ಪಂದಿಸಿ ಸುಮಾರು 552.21 ಗುಂಟೆ ಫಲವತ್ತಾದ ಭೂಮಿಯನ್ನು ಯಾವುದೇ ಷರತ್ತು ವಿಧಿಸದೆ ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿಗೆ ಬಿಟ್ಟುಕೊಡಲಾಗಿದೆ.

ಭೂಸ್ವಾಧೀನ ಕಾಯ್ದೆ ನಿಯಮ 28ರಲ್ಲಿ ತಿಳಿಸಿರುವಂತೆ ಭೂಸ್ವಾಧೀನ ವೆಚ್ಚವನ್ನು 2 ಕಂತುಗಳಲ್ಲಿ ಭೂಸ್ವಾಧೀನ ಕಚೇರಿಯಲ್ಲಿ 50:50 ಠೇವಣಿ ಇಡಬೇಕಿತ್ತು. 2 ವರ್ಷ ಕಳೆದರೂ ಶಾಶ್ವತ ಭೂ ಪರಿಹಾರವನ್ನು ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿ ಠೇವಣಿ ಇಟ್ಟಿಲ್ಲ. 2016ರಲ್ಲಿ ಆರಂಭವಾದ ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ ಈಗಾಗಲೇ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ್ದು, ಭೂಮಿಗೆ ನಿಗದಿಗೊಳಿಸಿರುವ ಬೆಲೆ ತಿಳಿಸಿಲ್ಲ ಎಂದರು.

ಸ್ವಾಧೀನದಲ್ಲಿರುವ ಹಾಗೂ ಕೋರ್ಟ್ ಡಿಕ್ರಿಯಾಗಿರುವ ಎಲ್ಲ ಭೂಮಿಯನ್ನು ಯಾವುದೇ ಷರತ್ತು ವಿಧಿಸದೆ ಖಾತೆ ಮಾಡಲು ಆದೇಶಿಸಬೇಕು. ಭೂಸ್ವಾಧೀನಕ್ಕೆ ತಗುಲುವ ವೆಚ್ಚವನ್ನು ಕೂಡಲೇ ಸರ್ಕಾರ ಬಿಡುಗಡೆ ಮಾಡಬೇಕು ಖುಷ್ಕಿ ಭೂಮಿಗೆ ಕನಿಷ್ಠ ₹ 60 ಲಕ್ಷ ಹಾಗೂ ಭಾಗಾಯ್ತು ಭೂಮಿಗೆ ₹ 60 ಲಕ್ಷದಂತೆ ರೈತರಿಗೆ ಶಾಶ್ವತ ಭೂ ಪರಿಹಾರ ನೀಡಬೇಕು. ಇಲ್ಲದೆ ಇದ್ದರೆ ಸಕಲೇಶಪುರದಂತೆ ನೇರ ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಕರೀಂ ಮಾತನಾಡಿಎತ್ತಿನಹೊಳೆ ನೀರಾವರಿ ಯೋಜನೆ ಪ್ರಕಾರ ಮೊದಲು ತಾಲ್ಲೂಕಿನ ಹಾರನಹಳ್ಳಿ ಕೆರೆಗೆ ಎತ್ತಿನಹೊಳೆ ನೀರು ಹರಿಯಬೇಕು. ಬಳಿಕ ಹಾರನಹಳ್ಳಿ ಕೆರೆಯಿಂದ ತಾಲ್ಲೂಕಿನ 36 ಕೆರೆಗಳಿಗೆ ನೀರು ಹರಿಸುವಂತೆ ಕ್ರಿಯಾ ಯೋಜ ನೆಯಲ್ಲಿ ಸೂಚಿಸಲಾಗಿದೆ ಎಂದರು.

ಭೂ ಸಂತ್ರಸ್ತ ರೈತರಾದ ಹಬ್ಬನಘಟ್ಟ ಗಂಗಾಧರಪ್ಪ, ಶಶಿಧರ್, ಲಕ್ಕೇನಹಳ್ಳಿ ರಾಘವೇಂದ್ರ, ಬಾಳೇನಹಳ್ಳಿ ಧರ್ಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT