ಭಾನುವಾರ, ಜೂನ್ 20, 2021
29 °C
ಜಿಲ್ಲೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳು ಕೆಲಸ ಮಾಡದ ಸ್ಥಿತಿ

ಪಿಎಸ್‌ಐ ಆತ್ಮಹತ್ಯೆ ಸಂಬಂಧ ನಿಷ್ಪಕ್ಷಪಾತ ತನಿಖೆಯಾಗಲಿ: ಎಚ್‌.ಕೆ. ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹಾಸನ: ಜಿಲ್ಲೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳು ಕೆಲಸ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ ಎಂಬುದಕ್ಕೆ  ಚನ್ನರಾಯಪಟ್ಟಣದ ಪಿಎಸ್‌ಐ ಆತ್ಮಹತ್ಯೆ ಪ್ರಕರಣ ಉದಾಹರಣೆಯಷ್ಟೇ. ಅಧಿಕಾರಿ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಆಗ್ರಹಿಸಿದರು.

’ಪಿಎಸ್‌ಐ ಕಿರಣ್ ಅವರು ಕೆಲಸದ ಒತ್ತಡದಿಂದಲೇ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದು ರಾಜಕೀಯ ಒತ್ತಡವೋ, ಕೆಲಸದ ಒತ್ತಡವೋ, ಮೇಲಧಿಕಾರಿಗಳ ಒತ್ತಡವೋ ಅಥವಾ ವೈಯಕ್ತಿಕ ಕಾರಣವೇ ಎಂಬುದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ರಾಜ್ಯ ಗೃಹ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

’ ಜಿಲ್ಲೆಗೆ ಹೊಸ ಉಸ್ತುವಾರಿ ಸಚಿವ ನೇಮಕವಾದ ನಂತರ, ಅವರ ಹಿಂಬಾಲಕರು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಪ್ರಕರಣಗಳು ಹೆಚ್ಚುತ್ತಿವೆ. ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲೂ ಸಚಿವರ ಹಿಂಬಾಲಕರು ಮತ್ತು ಹಿಂದಿನ ಚುನಾವಣೆಯಲ್ಲಿ ನನ್ನ ವಿರುದ್ಧ ಸೋತವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕೆಳಮಟ್ಟದಿಂದ ಹಿಡಿದು ಮೇಲ್ಮಟ್ಟದ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಹೇಳಿದವರಿಗೇ ಕಾಮಗಾರಿಗಳ ಗುತ್ತಿಗೆ ನೀಡಬೇಕು. ನಮ್ಮ ತೋಟಕ್ಕೆ ಬನ್ನಿ, ಹೀಗೆ ಅನೇಕ ತರಹದಲ್ಲಿ ಅಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದು, ಅವರ ಮಾತು ಕೇಳದವರಿಗೆ ಬೆದರಿಕೆ ಹಾಕಲಾಗುತ್ತಿದೆ’ ಎಂದು ಆರೋಪಿಸಿದರು.

’ಹಿಂದೆ ಸಕಲೇಶಪುರ ಪುರಸಭೆ ಸಹಾಯಕ ಎಂಜಿನಿಯರ್‌ ವಿಷಯದಲ್ಲೂ ಇದೇ ರೀತಿ ಆಗಿತ್ತು. ಸಚಿವರು ಅವರ ಹಿಂಬಾಲಕರನ್ನು ಹದ್ದುಬಸ್ತಿನಲ್ಲಿ ಇಡಬೇಕು. ಆಡಳಿತದಲ್ಲಿ ತಪ್ಪಿದ್ದರೆ ಅಥವಾ ಕಾನೂನು ಮೀರಿ ಕೆಲಸ ಮಾಡುತ್ತಿದ್ದರೆ ಹೇಳಲಿ. ಅದನ್ನು ಬಿಟ್ಟು ಆಡಳಿತದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

’ಅಧಿಕಾರಿಗಳು ಭ್ರಷ್ಟಾಚಾರದ ಮೂಲಕ ಜಿಲ್ಲೆಗೆ ವರ್ಗಾವಣೆಯಾಗಿ ಬರುತ್ತಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರನ್ನು ವರ್ಗಾಯಿಸಲಾಗಿದೆ. ಇದೇ ರೀತಿ ಜಿಲ್ಲೆಯ ಅನೇಕ ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ’ ಎಂದು ಹೇಳಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ತುಂಬಿದೆ. ರಾಜ್ಯದಲ್ಲಿ  ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಹಾಗೂ ಯಾವ ಯೋಜನೆ ಜಾರಿಗೆ ತರಲಾಗಿದೆ ಎಂಬುದರ ಮಾಹಿತಿ ಇಲ್ಲ. ಅಧಿಕಾರಿಗಳ ವರ್ಗಾವಣೆ ಮಾಡಿರುವುದೇ ಸಾಧನೆ ಎಂದು ಟೀಕಿಸಿದರು.

‘ಫಲಾನುಭವಿಗಳಿಗೆ ಅನುದಾನ ನೀಡಲು ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಹಣವಿಲ್ಲ. ಕೋವಿಡ್‌  ರೋಗಿಗಳಿಎಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಸಕಲೇಶಪುರದ ಸೋಂಕಿತ ವ್ಯಕ್ತಿಗೆ ಖಾಸಗಿ ಆಸ್ಪತ್ರೆಯಲ್ಲಿ ದಿನಕ್ಕೆ ₹ 40 ಸಾವಿರ ಬಿಲ್‌ ಮಾಡಲಾಗಿದೆ.  ಈವರೆಗೆ ಎಷ್ಟು ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಂಡಿದ್ದಾರೆ ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

ಗ್ರಾಮ ಪಂಚಾಯಿತಿ ಚುನಾವಣೆ ಮೀಸಲಾತಿಯಲ್ಲಿ ತಾರತಮ್ಯ ಮಾಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೀಸಲಾತಿ ಪ್ರಕಟಿಸಿದ ಬಳಿಕ ಆಕ್ಷೇಪಣೆಗೆ ಅವಕಾಶ ಕೊಡಬೇಕಿತ್ತು. ಆದರೆ ಈಗಿನ ವ್ಯವಸ್ಥೆಯಲ್ಲಿ ಅವರು ಹೇಳಿದ್ದನ್ನು ಒಪ್ಪಿಕೊಳ್ಳುವಂತೆ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಗೋಷ್ಠಿಯಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ದ್ಯಾವೇಗೌಡ, ಜಿಲ್ಲಾ ವಕ್ತಾರ ರಘು ಹೊಂಗೆರೆ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು