ಹಾಸನ: ಬೆಂಗಳೂರು–ಮಂಗಳೂರು ಮಾರ್ಗದ ಯಡಕುಮೇರಿ ಮತ್ತು ಕಡಗರವಳ್ಳಿ ಮಧ್ಯೆ ರೈಲ್ವೆ ಹಳಿ ಬಳಿ ಭೂಕುಸಿತವಾಗಿದ್ದ ಸ್ಥಳದಲ್ಲಿ ದುರಸ್ತಿ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.
ಹಳಿ ಕೆಳಗೆ ಸುಮಾರು 500 ಮೀಟರ್ ಆಳಕ್ಕೆ ಕುಸಿದಿದ್ದ ಮಣ್ಣನ್ನು ತೆರವುಗೊಳಿಸಲಾಗಿದ್ದು, ಕಲ್ಲಿನಿಂದ ಕ್ರಿಬ್ ಗೋಡೆ ನಿರ್ಮಿಸಲಾಗಿದೆ. ಹಳಿಯ ಪಕ್ಕದಲ್ಲಿ ತಡೆಗೋಡೆ ನಿರ್ಮಾಣ ಭರದಿಂದ ಸಾಗಿದೆ.
ಜುಲೈ 26 ರಿಂದ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಸ್ಥಗಿತವಾಗಿದ್ದು, ಅಂದಿನಿಂದಲೇ ರೈಲ್ವೆ ಇಲಾಖೆಯು ಸುಮಾರು 800 ಕಾರ್ಮಿಕರೊಂದಿಗೆ ದುರಸ್ತಿ ಆರಂಭಿಸಿದ್ದರೂ, ನಿರಂತರ ಮಳೆಯಿಂದಾಗಿ ಹಿನ್ನಡೆ ಉಂಟಾಗಿತ್ತು.
‘11 ದಿನಗಳ ಸತತ ಕಾರ್ಯಾಚರಣೆಯ ಬಳಿಕ ದುರಸ್ತಿ ಬಹುತೇಕ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆಗಸ್ಟ್ 8 ರವರೆಗೆ ಈ ಮಾರ್ಗದ ರೈಲುಗಳ ಸಂಚಾರ ರದ್ದುಗೊಳಿಸಲಾಗಿದ್ದು, ಆಗಸ್ಟ್ 9 ರಿಂದ ಆರಂಭವಾಗುವ ಸಾಧ್ಯತೆ ಇದೆ’ ಎಂದು ನೈರುತ್ಯ ರೈಲ್ವೆ ಮೂಲಗಳು ತಿಳಿಸಿವೆ.