ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5ನೇ ದಿನವೂ ಮುಂದುವರಿದ ವರುಣನ ಅಬ್ಬರ

ಸಚಿವ ಕೆ.ಗೋಪಾಲಯ್ಯ, ಶಾಸಕ ಕುಮಾರಸ್ವಾಮಿ ಅವರಿಂದ ಹೇಮಾವತಿ ನದಿಗೆ ಬಾಗಿನ ಅರ್ಪಣೆ
Last Updated 8 ಆಗಸ್ಟ್ 2020, 3:36 IST
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕಿನಾದ್ಯಂತ ವರುಣನ ಆರ್ಭಟ ಶುಕ್ರವಾರವೂ ಮುಂದುವರಿದಿದ್ದು, ಹಲವು ಮನೆಗಳ ಚಾವಣಿ, ವಿದ್ಯುತ್‌ ಕಂಬಗಳು, ಮರಗಳು ಧರಾಶಾಹಿಯಾಗಿವೆ.

ಗುರುವಾರ ಸಂಜೆಯಿಂದ ಶುಕ್ರವಾರ ಬೆಳಿಗ್ಗೆವರೆಗೂ ವೇಗ ವಾಗಿ ಬೀಸಿದ ಗಾಳಿಯಿಂದಾಗಿ ಮತ್ತಷ್ಟು ಹಾನಿ ಉಂಟಾಗಿದೆ. ಚಂಗಡಿಹಳ್ಳಿಯ ಗುರುಲಿಂಗಪ್ಪ ಅವರ ದನದ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದಾಗಲೇ ಚಾವಣಿ ಸಂಪೂರ್ಣ ಕುಸಿದು ಬಿದ್ದಿದ್ದು, ಹಾಲು ಕರೆಯುತ್ತಿದ್ದ ಗುರುಲಿಂಗಪ್ಪ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಹೆಬ್ಬಸಾಲೆ, ನಡಹಳ್ಳಿ, ಹೆಗ್ಗದ್ದೆ, ಮಾರನಹಳ್ಳಿ, ಹಲಸುಲಿಗೆ, ಬ್ಯಾಕರ ವಳ್ಳಿ, ಜಾನೇಕೆರೆ, ದೋಣಿಗಾಲ್‌ ದೇವಾಲದಕೆರೆ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಹಲವು ಮನೆ ಗಳ ಚಾವಣಿ, ದನಗಳ ಕೊಟ್ಟಿಗೆ ಹಾನಿಯಾಗಿವೆ.

ತಾಲ್ಲೂಕಿನಲ್ಲಿ ಸುಮಾರು 100 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ನಾಟಿ ಮಾಡಿರುವ ಭತ್ತದ ಪೈರು ನಾಲ್ಕು ದಿನಗಳಿಂದ ಜಲಾವೃತಗೊಂಡಿದೆ. ಹಳ್ಳ, ಕೊಳ್ಳ, ಕರೆ, ಕಟ್ಟೆಗಳು ತುಂಬಿ ಅಕ್ಕಪಕ್ಕದ ತಗ್ಗು ಪ್ರದೇಶದ ಭತ್ತದ ಗದ್ದೆಗಳಿಗೂ ನುಗ್ಗಿ ಮಣ್ಣು, ಮರಳು ತುಂಬಿಕೊಂಡು ನಷ್ಟ ಉಂಟಾಗಿದೆ. ಈ ಬಾರಿ 35 ಕಿ.ಮೀ.ಗೂ ಹೆಚ್ಚು ವೇಗವಾಗಿ ಬೀಸಿದ ಗಾಳಿಯಿಂದಾಗಿ ತೆಂಗಿನ ಮರಗಳು, ಅಡಿಕೆ ಮರಗಳು, ಹಣ್ಣಿನ ಗಿಡಗಳೂ ಮುರಿದು ಬಿದ್ದಿವೆ.

ಕಾಫಿ ಗಿಡಗಳ ಮೇಲೆ ಮರ, ಕೊಂಬೆಗಳು ಬಿದ್ದು ಹಾನಿಯಾಗಿದ್ದು, ಕಾಳುಮೆಣಸು ಬಳ್ಳಿ ಹಬ್ಬಿದ್ದ ಮರಗಳೂ ಬುಡ ಸಮೇತ ಬಿದ್ದಿವೆ. ನಿರಂತರ ಮಳೆಯಿಂದಾಗಿ ಕಾಫಿ, ಕಾಳು ಮೆಣಸು ಹಾಗೂ ಅಡಿಕೆ ಫಸಲು ಕೊಳೆ ರೋಗಕ್ಕೆ ತುತ್ತಾಗಿ ಉದುರುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಬಿಡುಗಡೆ ಮಾಡಬೇಕು ಎಂದು ಮಾಜಿ ಶಾಸಕ ಎಚ್‌.ಎಂ.ವಿಶ್ವನಾಥ್‌ ಒತ್ತಾಯಿಸಿದರು.

ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಪ್ರತಿ ರಸ್ತೆಗಳಲ್ಲಿ ಮಳೆ ನೀರು ಹೊಳೆಯಂತೆ ಹರಿಯುತ್ತಿದೆ. ಇದರಿಂದ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಕೆಲವೆಡೆ ರಸ್ತೆಗಳು, ಸೇತುವೆಗಳು ತುಂಡಾಗಿದ್ದು, ಸುಮಾರು ₹ 200 ಕೋಟಿ ನಷ್ಟ ಉಂಟಾಗಿದೆ ಎಂದು ಶಾಸಕ ಎಚ್‌.ಎಂ.ಕುಮಾರಸ್ವಾಮಿ ಹೇಳಿದರು.

ಕ್ಯಾನಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ 250 ಮಿ.ಮೀ. ಕೆಸಗಾನಹಳ್ಳಿ 205 ಮಿ.ಮೀ. ಅತ್ತಿಹಳ್ಳಿ, ಹೊಂಗಡಹಳ್ಳ, ಕಾಡಮನೆ, ದೇವಾಲದಕೆರೆ, ಬಿಸಿಲೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸರಾಸರಿ 280 ಮಿ.ಮೀ. ದಾಖಲೆ ಮಳೆಯಾಗಿದೆ.

5ನೇ ದಿನವೂ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಕಡಿತ ಉಂಟಾಗಿದ್ದು, ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಹೇಮಾವತಿ ನದಿ ನೀರಿನ ಮಟ್ಟದಲ್ಲಿ ಏರಿಕೆ ಉಂಟಾಗುತ್ತಿದ್ದು, ನದಿ ಪಾತ್ರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಸಚಿವ, ಶಾಸಕರಿಂದ ಬಾಗಿನ ಅರ್ಪಣೆ: ಮೈದುಂಬಿ ಹರಿಯುತ್ತಿರುವ ಹೇಮಾವತಿ ನದಿಗೆ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಶಾಸಕ ಎಚ್.ಕೆ.ಕುಮಾರಸ್ವಾಮಿ ಬಾಗಿನ ಅರ್ಪಿಸಿದರು.

ಹಳ್ಳ ದಾಟಲು ಹೋಗಿ ಎತ್ತಿನಹೊಳೆಯಲ್ಲಿ ನೀರು ಪಾಲಾದ ತಾಲ್ಲೂಕಿನ ಸಂಕ್ಲಾಪುರಮಠ ಗ್ರಾಮದ ಸಿದ್ದಯ್ಯ ಕುಟುಂಬಕ್ಕೆ ಸಚಿವರು ₹ 4 ಲಕ್ಷ ಪರಿಹಾರದ ಚೆಕ್‌ ವಿತರಿಸಿದರು.

ಮಾಜಿ ಶಾಸಕ ಎಚ್‌.ಎಂ.ವಿಶ್ವನಾಥ್‌, ಬಿಜೆಪಿ ಮುಖಂಡ ನಾರ್ವೆ ಸೋಮಶೇಖರ್‌, ಜಿಲ್ಲಾಧಿಕಾರಿ ಗಿರೀಶ್‌, ಉಪವಿಭಾಗಾಧಿಕಾರಿ ಎಂ.ಗಿರಿಶ್‌ ನಂದನ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಂದಿನಿ, ತಹಶೀಲ್ದಾರ್‌ ಮಂಜುನಾಥ್, ತಾ.ಪ‍ಂ. ಇಒ ಜಿ.ಆರ್‌.ಹರೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT