ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತ ಮಾತ್ರಕ್ಕೆ ರಾಜಕಾರಣ ಮುಗಿದಿಲ್ಲ, ರಾಜಕೀಯ ಆಟ ಇನ್ಮುಂದೆ ಶುರು: ಶಾಸಕ ರೇವಣ್ಣ

ಜೆಡಿಎಸ್‌ನಲ್ಲಿ ನಾಯಕರಿಗೆ ಕೊರತೆ ಇಲ್ಲ
Last Updated 11 ಡಿಸೆಂಬರ್ 2019, 12:28 IST
ಅಕ್ಷರ ಗಾತ್ರ

ಹಾಸನ:'ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್‌ ಒಂದು ಸ್ಥಾನ ಗೆದ್ದಿಲ್ಲ. ಆದರೆ, ರಾಜಕಾರಣ ಇಲ್ಲಿಗೆ ಮುಗಿಯವುದಿಲ್ಲ, ರಾಜಕೀಯ ಆಟ ಇನ್ಮುಂದೆ ಶುರುವಾಗಲಿದೆ' ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗಿಂತ ಜೆಡಿಎಸ್‌ ಹೆಚ್ಚು ಮತ ಗಳಿಸಿದೆ. ಕೆ.ಆರ್‌.ಪೇಟೆ, ಹುಣಸೂರು ಚುನಾವಣೆ ಹೇಗಾಯಿತು ಎಂಬುದು ಸಮಯ ಬಂದಾಗ ಉತ್ತರಿಸುವೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಚಿಕ್ಕಬಳ್ಳಾಪುರ ಜಿಲ್ಲೆ ಘೋಷಣೆ ಮಾಡಲಾಯಿತು. ರಾಷ್ಟ್ರೀಯ ಪಕ್ಷಗಳ ಜತೆ ಹೋರಾಟ ಮಾಡಲು ಪಕ್ಷವನ್ನು ಬಲ ಪಡಿಸಲಾಗುವುದು. ಕಾರ್ಯಕರ್ತರು ದೃತಿಗೆಡುವ ಅವಶ್ಯಕತೆ ಇಲ್ಲ ಎಂದು ಸುದ್ಧಿಗೋಷ್ಟಿಯಲ್ಲಿ ತಿಳಿಸಿದರು.

120 ಸ್ಥಾನ ಪಡೆದಿದ್ದ ಬಿಜೆಪಿ 2013ರಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಿತು. ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ ಠೇವಣಿಯೂ ಸಿಗಲಿಲ್ಲ. ಶೇಕಡವಾರು ಮತ ಗಳಿಕೆಯಲ್ಲಿ ಜೆಡಿಎಸ್‌ ಎರಡನೇ ಸ್ಥಾನ ಪಡೆಯಿತು. ಒಂದು ಕಾಲದಲ್ಲಿ ಎರಡು ಸ್ಥಾನ ಇದ್ದ ಜೆಡಿಎಸ್‌, ನಂತರ ಅಧಿಕ ಸ್ಥಾನ ಪಡೆದು ಸ್ವಂತ ಬಲದಿಂದ ಸರ್ಕಾರವನ್ನು ರಚಿಸಿತು. ಪ್ರಾದೇಶಿಕ ಪಕ್ಷ ಮುಗಿಸುವ ಉದ್ದೇಶದಿಂದ ರಾಷ್ಟ್ರೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ ಎಂದು ಆರೋಪಿಸಿದರು.

ಸಿ.ಎಂ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುವುದಿಲ್ಲವೆಂದು ಹೇಳಿ ಏನು ಮಾಡಿದರೂ ಎಂಬುದು ಎಲ್ಲರಿಗೂ ಗೊತ್ತು. ಬಿಜೆಪಿ ಮತ್ತು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಿಲ್ಲೆ ಅಭಿವೃದ್ಧಿಯಾಗಲಿಲ್ಲ. 14 ತಿಂಗಳಲ್ಲಿ ಹಾಸನ ನಗರಕ್ಕೆ ಕುಮಾರಸ್ವಾಮಿ ಅವರು ₹ 2 ಸಾವಿರ ಕೋಟಿ ಅನುದಾನ ಮಂಜೂರು ಮಾಡಿದರು ಎಂದು ವಿವರಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಜೆಡಿಎಸ್‌ ಅನ್ನು ಬಿಜೆಪಿಯ ‘ಬಿ’ ಟೀಂ ಎಂದು ಟೀಕಿಸಿದ ಕಾರಣಕ್ಕೆ 40 ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು. ದೇವೇಗೌಡರು ಕುಟುಂಬದವರು ಸ್ಪರ್ಧೆ ಮಾಡಿದ್ದ ಹಾಸನ, ಮಂಡ್ಯ ಮತ್ತು ತುಮಕೂರು ಕ್ಷೇತ್ರಗಳಲ್ಲಿ ಆದಾಯ ತೆರಿಗೆ ದಾಳಿ ನಡೆಸಲಾಯಿತು. ಪ್ರಾದೇಶಿಕ ಪಕ್ಷ ಮುಗಿಸುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‌ನಲ್ಲಿ ನಾಯಕರಿಗೆ ಕೊರತೆ ಇಲ್ಲ. ಅಧಿಕಾರದ ಆಸೆಗಾಗಿ ಪಕ್ಷ ಬದಲಿಸುತ್ತಾರೆ. ಬಿಜೆಪಿಯಲ್ಲಿರುವ ಶೇಕಡಾ 50ರಷ್ಟು ನಾಯಕರು ದೇವೇಗೌಡರ ಕಾರ್ಖಾನೆಯಲ್ಲಿ ತಯಾರಾದವರು. ರಾಷ್ಟ್ರೀಯ ಪಕ್ಷವನ್ನು ದೂರ ಇಡುವ ಕಾಲ ಬರಲಿದೆ ಎಂದು ಭವಿಷ್ಯ ನುಡಿದರು.

ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸೋತರು ಎಂದು ಸುಮ್ಮನಾಗುವುದಿಲ್ಲ. ಕೆ.ಆರ್‌.ಪೇಟೆ ಅಭ್ಯರ್ಥಿಯನ್ನು ದೇವೇಗೌಡರು ಬೆಂಗಳೂರಿಗೆ ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ. ರಾಜಕೀಯದಲ್ಲಿ ಏಳು, ಬೀಳು ನೋಡಿದ್ದೇವೆ. ಇದಕ್ಕೆಲ್ಲಾ ಹೆದರಿ ಸುಮ್ಮನೆ ಮನೆಯಲ್ಲಿ ಇರುವುದಿಲ್ಲ. ಪಕ್ಷ ಸಂಘಟನೆ ಮಾಡುವುದು ಗೊತ್ತು ಎಂದು ಗುಡುಗಿದರು.

ಶಾಸಕ ಪ್ರೀತಂ ಗೌಡ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ರೇವಣ್, ‘ಅವರ ಹೇಳಿಕೆಗೆಲ್ಲಾ ಪ್ರತಿಕ್ರಿಯೆ ಕೊಡುತ್ತಾ ಹೋದರೆ ನನ್ನಂತ ದಡ್ಡ ಇಲ್ಲ. ನನ್ನ ಅವಧಿಯಲ್ಲಿ ಕಟ್ಟಿರುವ ಕಟ್ಟಡಗಳಿಗೆ ಬಣ್ಣ ಬಳಿದರೆ ಸಾಕು’ ಎಂದು ವ್ಯಂಗ್ಯವಾಡಿದರು.

ಹೊಸ ಬಸ್‌ ನಿಲ್ದಾಣ ಎದುರಿನ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಳಿಸಿರುವುದೇ ಬಿಜೆಪಿ ಸಾಧನೆ. ಹೊರ ವರ್ತುಲ ರಸ್ತೆ ಕಾಮಗಾರಿಗೆ ₹ 200 ಕೋಟಿ ಬಿಡುಗಡೆ ಮಾಡಿದ್ದು ಸಮ್ಮಿಶ್ರ ಸರ್ಕಾರ. ಬಿಜೆಪಿ ಸರ್ಕಾರ ಹಣ ಬಿಡುಗಡೆ ಮಾಡಿರುವ ದಾಖಲೆ ಇದ್ದರೆ ತೋರಿಸಲಿ. ರಾಜಕೀಯ ನಿವೃತ್ತಿ ಪಡೆಯುವೆ ಎಂದು ರೇವಣ್ಣ ಸವಾಲು ಹಾಕಿದರು.

ಸುವರ್ಣ ಕರ್ನಾಟಕ ಮಾಡಲು ಹೊರಟಿರುವ ಮುಖ್ಯಮಂತ್ರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಜಿಲ್ಲೆಯ ಅಭಿವೃದ್ಧಿ ಹೇಗೆ ಮಾಡಿಸಬೇಕೆಂಬುದು ಗೊತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕುಮಾರಸ್ವಾಮಿ ಕುರಿತು ಶಾಸಕ ಜಿ.ಟಿ.ದೇವೇಗೌಡ ಮಾಡಿರುವ ಆರೋಪಕ್ಕೆ ಉತ್ತರಿಸಿದ ರೇವಣ್ಣ, ‘ಅವರು ದೊಡ್ಡ ನಾಯಕರು. ಅವರ ಬಗ್ಗೆ ಚಿಕ್ಕವರು ಏನು ಮಾತನಾಡಲು ಸಾಧ್ಯ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT