ಆಲೂರು: ಹೇಮಾವತಿ ಹಿನ್ನೀರು ಪ್ರದೇಶದ ಅಂಚಿನಲ್ಲಿರುವ ಅಡಿಬೈಲು ರಂಗನಬೆಟ್ಟದಲ್ಲಿರುವ ರಂಗನಾಥ ಸ್ವಾಮಿ ದೇವಾಲಯ ಮೂಲಸೌಕರ್ಯ ಕೊರತೆಯಿಂದ ನಲುಗುತ್ತಿದ್ದು, ಭಕ್ತರು ಭಯದ ವಾತಾವರಣದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವಂತಾಗಿದೆ.
ಈ ದೇವಾಲಯಕ್ಕೆ ಅಸಂಖ್ಯಾತ ಭಕ್ತರಿದ್ದಾರೆ. ವೈಕುಂಠ ಏಕಾದಶಿ, ಶ್ರಾವಣ ಮಾಸದಲ್ಲಿ ನಡೆಯುವ ವಿಶೇಷ ಪೂಜೆ ಮತ್ತು ಮಾರ್ಚ್‌ನಲ್ಲಿ ನಡೆಯುವ ಜಾತ್ರೆಯಲ್ಲಿ ಅತಿ ಹೆಚ್ಚು ಭಕ್ತರು ದೇವಾಲಯಕ್ಕೆ ಬರುತ್ತಾರೆ. ಮುಜರಾಯಿ ಇಲಾಖೆಗೆ ಸೇರಿರುವ ಈ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜೆ, ಸೇವೆಗಳು ಜರುಗುತ್ತವೆ. ಪ್ರತಿ ಶನಿವಾರ ಭಕ್ತರಿಗೆ ಮಧ್ಯಾಹ್ನ ಅನ್ನದಾಸೋಹ ನಡೆಯುತ್ತದೆ.
ಮಗನ ತಿಂದ ಮಹಾರಾಜನೆಂಬ ಚೋಳ ಅರಸನ ಆಳ್ವಿಕೆ ಕಾಲದಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಬೆಟ್ಟದ ಗುಹೆಯೊಳಗೆ ಲಿಂಗದ ರೂಪದಲ್ಲಿ ಮೂಡಿರುವ ದೇವರಿಗೆ ಗ್ರಾಮದ ವೈಷ್ಣವ ವಂಶಸ್ಥರು ಪೂಜೆ ಸಲ್ಲಿಸುತ್ತಾರೆ. ವರ್ಷಕ್ಕೊಮ್ಮೆ ಮೂರು ದಿನ ನಡೆಯುವ ಜಾತ್ರೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ.
ಮಲೆನಾಡು ಅಭಿವೃದ್ಧಿ ನಿಗಮದ ವತಿಯಿಂದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುಜಾತಾ ಗಣೇಶ್ ಹೊನ್ನವಳ್ಳಿ ಸಹಕಾರದಲ್ಲಿ ದೇವಸ್ಥಾನದವರೆಗೆ ವಾಹನಗಳು ಚಲಿಸುವಂತೆ ಸಿಮೆಂಟ್ ರಸ್ತೆ ನಿರ್ಮಾಣ ಮಾಡಿದ ನಂತರ ಭಕ್ತರ ಸಂಖ್ಯೆ ಅಧಿಕವಾಯಿತು.
ಆಲೂರಿನಿಂದ ಮಗ್ಗೆ ಮಾರ್ಗದಲ್ಲಿ ಚನ್ನಾಪುರದಿಂದ 3 ಕಿ.ಮೀ. ದೂರದಲ್ಲಿರುವ ದೇವಸ್ಥಾನದವರೆಗೆ ಗುಡ್ಡಬೆಟ್ಟ, ಕಾಫಿ ತೋಟದ ನಡುವೆ ಸಾಗಿ ಹೋಗಬೇಕು. ಕಾಡಾನೆಗಳ ಉಪಟಳ ಇದೆ. ಅಲ್ಲದೇ ಕೆಲ ಭಾಗದಲ್ಲಿ ರಸ್ತೆ ಹಾಳಾಗಿದ್ದು, ಭಕ್ತರು ಭಯದಲ್ಲಿಯೇ ದೇವಸ್ಥಾನಕ್ಕೆ ಹೋಗಿ ಬರಬೇಕಾಗಿದೆ.
ಮಳೆ ಬಂದಾಗ ದೇವಸ್ಥಾನದ ಮೇಲ್ಭಾಗದ ಚಾವಣಿ ಕಲ್ಲಿನಲ್ಲಿ ನೀರು ಸೋರುತ್ತಿದೆ. ಭಕ್ತರು ಸುಗಮವಾಗಿ ಸಂಚರಿಸಲು ರಸ್ತೆ ದುರಸ್ತಿಯಾಗಬೇಕು. ದೇವಾಲಯ ಮುಜರಾಯಿ ಇಲಾಖೆಗೆ ಸೇರಿರುವುದರಿಂದ ಸರ್ಕಾರ ಕೂಡಲೇ ಮೂಲಸೌಕರ್ಯ ಒದಗಿಸಲು ಮುಂದಾಗಬೇಕು ಎನ್ನುವುದು ಭಕ್ತರ ಆಶಯ.
ಭಕ್ತರು ತಮಗಿಷ್ಟವಾದ ಸೇವೆ ಮಾಡಿಸುತ್ತಾರೆ. ದೇವಸ್ಥಾನದ ಅಭಿವೃದ್ಧಿ ಸಮಿತಿ ಮತ್ತು ಭಕ್ತರ ಸಹಕಾರದಿಂದ ಅಡುಗೆ ಅನ್ನ ದಾಸೋಹಕ್ಕೆ ಮನೆ ಸೇರಿದಂತೆ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆಉಮೇಶ್ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ
ಮೈಸೂರು ಜಿಲ್ಲೆ ಹುಣಸೂರಿನಿಂದ ದೇವರಿಗೆ ಬಂದಿದ್ದೇವೆ. ರಸ್ತೆ ಗುಂಡಿಗಳಾಗಿವೆ. ಕಾಡಾನೆಗಳು ಸಂಚರಿಸುತ್ತವೆ ಎಂದು ತಿಳಿದು ಭಯವಾಗುತ್ತಿದೆ. ಸರ್ಕಾರ ಕೂಡಲೇ ರಸ್ತೆ ದುರಸ್ತಿ ಮಾಡಬೇಕುಚಲುವರಾಯಸ್ವಾಮಿ ಮೈಸೂರು ಜಿಲ್ಲೆ ಹುಣಸೂರಿನ ಭಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.