ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಪ್ಯಾಕೇಜ್ ರೂಪಿಸಿ ಪರಿಹಾರ ನೀಡಲು ಆಗ್ರಹ

ಅಕಾಲಿಕ ಮಳೆಯಿಂದ ಕಾಫಿ ಬೆಳೆಗೆ ಭಾರಿ ಹಾನಿ
Last Updated 20 ಜನವರಿ 2021, 2:58 IST
ಅಕ್ಷರ ಗಾತ್ರ

ಅರಕಲಗೂಡು: ‘ಹವಾಮಾನ ವೈಪರೀತ್ಯದಿಂದಾಗಿ ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಕಾಫಿ ಬೆಳೆಗೆ ತೀವ್ರ ಹಾನಿ ಸಂಭವಿಸಿದೆ. ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿ ಬೆಳೆಗಾರರ ನೆರವಿಗೆ ಬರಬೇಕು’ ಎಂದು ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಎಚ್.ಟಿ. ಮೋಹನ್ ಕುಮಾರ್ ಒತ್ತಾಯಿಸಿದರು.

ತಾಲ್ಲೂಕಿನ ಮಲ್ಲಿಪಟ್ಟಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

‘ಮಳೆಯಿಂದಾಗಿ ರಾಜ್ಯದ ಕಾಫಿ ಪ್ರದೇಶಗಳಾದ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಕಟಾವಿಗೆ ಬಂದಿದ್ದ ಬೆಳೆಹಾನಿಯಾಗಿದ್ದು ಅಂದಾಜು ₹ 800 ಕೋಟಿಗೂ ಹೆಚ್ಚಿನ ಹಾನಿ ಸಂಭವಿಸಿದೆ. ಕಳೆದ ಐದು ವರ್ಷಗಳಿಂದಲೂ ಅತಿವೃಷ್ಟಿ, ಅನಾವೃಷ್ಟಿ, ವನ್ಯಜೀವಿಗಳ ಹಾವಳಿಯಿಂದ ಬೆಳೆಗಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಬೆಳೆಗಾರರು ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಜೊತೆಗೆ ಸಾಲ ಮರುಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

‘ಮುಂದಿನ ದಿನಗಳಲ್ಲಿ ತೋಟಗಳ ನಿರ್ವಹಣೆಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ವ್ಯವಸ್ಥೆ ಕಲ್ಪಿಸಬೇಕು. ಈ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದ್ದು, ಕೇಂದ್ರ ಬಜೆಟ್‌ನಲ್ಲಿ ಪರಿಹಾರ ದೊರಕಬಹುದೆಂದು ನಿರೀಕ್ಷೆ ಇದೆ. ಸದ್ಯದಲ್ಲೇ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಒತ್ತಡ ಹೇರಲಾಗುವುದು’ ಎಂದರು.

ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ತೋ.ಚ. ಅನಂತಸುಬ್ಬರಾಯ ಮಾತನಾಡಿ, ‘43 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಪ್ಲಾಂಟರ್ಸ್ ಸಂಘ ಬೆಳೆಗಾರರ ಹಿತರಕ್ಷಣೆಗಾಗಿ ಹೋರಾಡುತ್ತಾ ಬಂದಿದೆ. ಕಳೆದ ಒಂದು ದಶಕದಿಂದ ಕಾಡಾನೆಗಳ ಹಾವಳಿ ವಿಪರೀತ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಕಾಡಾನೆಗಳು ಇದ್ದು ಆಲೂರು, ಬೇಲೂರು, ಸಕಲೇಶಪುರ, ಅರಕಲಗೂಡು ಭಾಗದಲ್ಲಿ ಕಾಫಿ ತೋಟಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ. ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ ಆನೆ ದಾಳಿಗೆ ಮೂವರು ಬಲಿಯಾಗಿದ್ದಾರೆ. ಬೆಳೆಗಾರರ ಹೋರಾಟದ ಫಲವಾಗಿ ಸರ್ಕಾರ ಸೋಲಾರ್ ಬೇಲಿ ನಿರ್ಮಿಸಲು ಶೇ 50 ಸಹಾಯಧನ ನೀಡುತ್ತಿದ್ದು ಇದನ್ನು ಶೇ 90ಕ್ಕೆ ಹೆಚ್ಚಿಸಬೇಕು. ಆನೆ ದಾಳಿಯಿಂದ ಮೃತಪಟ್ಟವರಿಗೆ ನೀಡುತ್ತಿರುವ ಪರಿಹಾರದ ಮೊತ್ತವನ್ನು ₹ 15 ಲಕ್ಷಕ್ಕೆ ಏರಿಸಬೇಕು, ಅಲ್ಲದೆ ವನ್ಯ ಜೀವಿಗಳಿಂದ ಹಾನಿಗೊಳಗಾದ ಬೆಳೆಗಾರರಿಗೆ ವೈಜ್ಞಾನಿಕವಾದ ಪರಿಹಾರ ನೀಡಬೇಕು’ ಎಂದರು.

‘ಸಂಘಟನೆಯ ಹೋರಾಟದ ಫಲವಾಗಿ ಅತಿ ವೃಷ್ಟಿಯಿಂದ ಹಾನಿಗೊಳಗಾಗಿದ್ದ ಜಿಲ್ಲೆಯ ಸಕಲೇಶಪುರದ ಬೆಳೆಗಾರರಿಗೆ ಪರಿಹಾರ ದೊರಕಿಸಲಾಗಿದೆ. ಫಸಲ್ ಬಿಮಾ ಯೋಜನೆಯಡಿ ಅಡಿಕೆ ಮತ್ತು ಮೆಣಸಿನ ಬೆಳೆ ಹಾನಿಗೆ ಪರಿಹಾರ ನೀಡಲು ಸಕಲೇಶಪುರ ತಾಲ್ಲೂಕಿಗೆ ₹ 10 ಕೋಟಿ ಮತ್ತು ಬೇಲೂರು ತಾಲ್ಲೂಕಿಗೆ ₹ 2 ಕೋಟಿ ಬಿಡುಗಡೆಯಾಗಿದೆ. ತಾಲ್ಲೂಕಿನಲ್ಲಿ ಕಾಡಾನೆ ಹಾವಳಿ ಮತ್ತು ಅಕಾಲಿಕ ಮಳೆಯಿಂದಾದ ಹಾನಿಗೆ ಸರ್ಕಾರ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎ.ಪಿ.ನಟೇಶ್ ಕುಮಾರ್, ‘ಎಲ್ಲ ಬೆಳೆಗಾರರು ಸದಸ್ಯರಾಗುವ ಮೂಲಕ ಸಂಘವನ್ನು ಬಲಪಡಿಸುವಂತೆ’ ಮನವಿ ಮಾಡಿದರು.

ಜಿಲ್ಲಾ ಎಚ್‌ಡಿಪಿಎ ನಿರ್ದೇಶಕರಾದ ಎಂ.ಬಿ.ಬಸವರಾಜ್, ಎ.ವಿ.ಕೃಷ್ಣರಾಜು, ಸಲಹಾ ಸಮಿತಿ ಸದಸ್ಯರಾದ ದೇವರಾಜಪ್ಪ, ಯಶೋದಕುಮಾರ್, ಸುಮಿತ್ರಮ್ಮ, ಎಂ.ಎಂ.ವಿಶ್ವನಾಥ್, ಎ.ಸಿ.ದೇವರಾಜೆಗೌಡ, ದೀಪ್ತಿ ರೋಷನ್, ಎಂ.ಆರ್.ರಂಗಸ್ವಾಮಿ, ಮಾಗಲು ಬಸವರಾಜ್, ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಜಿ.ಲಿಂಗಪ್ಪ, ಎಚ್.ಎಲ್.ಶೇಖರ್, ಶ್ರೀಧರ ಮೂರ್ತಿ, ಧರಣೇಂದ್ರ, ಎಂ.ಕೆ.ಅರುಣ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT