ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಬ್ಬರಿ ಮಾರಾಟಕ್ಕೆ ನೂಕುನುಗ್ಗಲು

ವರ್ತಕರ ಕರಾಮತ್ತು; ಬೆಳೆಗಾರರಿಗೆ ದಕ್ಕದ ಲಾಭ
ಎಚ್.ವಿ. ಸುರೇಶ್‌ಕುಮಾರ್
Published 15 ಮೇ 2024, 18:39 IST
Last Updated 15 ಮೇ 2024, 18:39 IST
ಅಕ್ಷರ ಗಾತ್ರ

ಹೊಳೆನರಸೀಪುರ (ಹಾಸನ ಜಿಲ್ಲೆ): ಕನಿಷ್ಠ ಬೆಂಬಲ ಬೆಲೆಯಡಿ ಉಂಡೆ ಕೊಬ್ಬರಿ ಮಾರಾಟಕ್ಕೆ ತಾಲ್ಲೂಕಿನ ರೈತರು ಹರಸಾಹಸಪಡುವಂತಾಗಿದೆ.

ಬೆಂಬಲ ಬೆಲೆಯಡಿ ಒಂದು ಕ್ವಿಂಟಲ್‌ ಕೊಬ್ಬರಿಗೆ ₹12 ಸಾವಿರ ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರವು ₹1,500 ಪ್ರೋತ್ಸಾಹಧನ ನೀಡುತ್ತಿದ್ದು, ಒಟ್ಟು ₹13,500 ದೊರೆಯುತ್ತದೆ.

ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಲ್ ಕೊಬ್ಬರಿಗೆ ₹8 ಸಾವಿರದಿಂದ ₹8,500 ಬೆಲೆ ಇದೆ. ಹಾಗಾಗಿ, ತೆಂಗು ಬೆಳೆಗಾರರು ಕೊಬ್ಬರಿ ನೀಡಲು ಖರೀದಿ ಕೇಂದ್ರಕ್ಕೆ ಮುಗಿಬೀಳುತ್ತಿದ್ದಾರೆ. ನೂಕುನುಗ್ಗಲು ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಅಧಿಕಾರಿಗಳು ಪರದಾಡುವಂತಾಗಿದೆ.

‘ರೈತರು ತರುವ ಕೊಬ್ಬರಿಯ ಗುಣಮಟ್ಟ ಪರಿಶೀಲಿಸಿ ಚೀಲದಲ್ಲಿ ತುಂಬಿ, ಹೊಲಿದು ಗೋದಾಮಿಗೆ ಸಾಗಿಸಲು ಇಲ್ಲಿ 40 ಹಮಾಲರು ಇದ್ದಾರೆ. ಗುತ್ತಿಗೆದಾರರು ಇವರಿಗೆ ಪ್ರತಿ ಚೀಲಕ್ಕೆ ₹2 ನೀಡುತ್ತಾರೆ’ ಎಂದು ಹಮಾಲಿಗಳ ಸಂಘದ ಪ್ರತಿನಿಧಿ ರಮೇಶ್ ವಿವರಿಸಿದರು.

‘ಇಲ್ಲಿಗೆ ಬರುವ ಎಲ್ಲ ಕೊಬ್ಬರಿಯೂ ರೈತರಿಗೆ ಸೇರಿಲ್ಲ. ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹8,500 ನೀಡಿ ಕೊಬ್ಬರಿ ಖರೀದಿಸಿರುವ ಕೆಲವು ವ್ಯಾಪಾರಿಗಳು, ಕೊಬ್ಬರಿ ಬೆಳೆಯದ ರೈತರ ಪಹಣಿ ಪಡೆದುಕೊಳ್ಳುತ್ತಾರೆ. ಹೆಚ್ಚಿನ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ನೀಡಿ ಒಂದು ಕ್ಷಿಂಟಲ್‌ಗೆ ₹5 ಸಾವಿರ ಲಾಭ ಮಾಡಿಕೊಳ್ಳುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರೈತರೊಬ್ಬರು ತಿಳಿಸಿದರು.

‘ಕೊಬ್ಬರಿ ನೀಡಿದ ರೈತರ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತದೆ. ನಂತರ ವ್ಯಾಪಾರಸ್ಥರು ರೈತರಿಗೆ ಅಲ್ಪಸ್ವಲ್ಪ ಹಣ ನೀಡಿ ಉಳಿದ ಹಣವನ್ನು  ತೆಗೆದುಕೊಂಡು ಹೋಗುತ್ತಿದ್ದಾರೆ. ರೈತರು ವ್ಯಾಪಾರಸ್ಥರಿಗೆ ಪಹಣಿ ನೀಡಬಾರದು’ ಎಂದು ಕೋರಿದರು.

‘ಕೇಂದ್ರ ಸರ್ಕಾರವು ರೈತರ ಅನುಕೂಲಕ್ಕಾಗಿ ಬೆಂಬಲ ಬೆಲೆಯಡಿ ಕೊಬ್ಬರಿ ಖರೀದಿಸುತ್ತಿದೆ. ಆದರೆ, ಕೆಲವು ರೈತರು ಪಹಣಿ ನೀಡಿ ವ್ಯಾಪಾರಸ್ಥರು ಲಾಭ ಮಾಡಿಕೊಳ್ಳಲು ಸಹಕರಿಸುತ್ತಿರುವುದು ಸರಿಯಲ್ಲ’ ಎನ್ನುತ್ತಾರೆ ರೈತ ರಾಮಪ್ಪ.

‘ಈ ಬಗ್ಗೆ ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಈ ದುರುಪಯೋಗ ತಪ್ಪಿಸಬೇಕು’ ಎಂದು ಆಗ್ರಹಿಸಿದರು.

‘ಏಪ್ರಿಲ್‌ 15ರಿಂದ ರಜಾ ದಿನ ಹೊರತುಪಡಿಸಿ ಎಲ್ಲ ದಿನಗಳಲ್ಲೂ ಖರೀದಿ ಕೇಂದ್ರದಲ್ಲಿ ಕೊಬ್ಬರಿ ಖರೀದಿಸಲಾಗುತ್ತಿದೆ. ಜೂನ್ 6 ಕಡೆಯ ದಿನವಾಗಿದೆ. ಇದುವರೆಗೂ 6 ಸಾವಿರ ಕ್ವಿಂಟಲ್ ಖರೀದಿಸಲಾಗಿದೆ’ ಎಂದು ಖರೀದಿ ಕೇಂದ್ರದ ಅಧಿಕಾರಿ ರಾಜಶೇಖರ್ ವಿವರಿಸಿದರು.

ಹೊಳೆನರಸೀಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಖರೀದಿಸಿದ ಕೊಬ್ಬರಿಯನ್ನು ದಾಸ್ತಾನು ಮಾಡಲು ಹಮಾಲಿಗಳು ಮೂಟೆಗಳನ್ನು ಸಿದ್ಧಪಡಿಸುತ್ತಿರುವುದು
ಹೊಳೆನರಸೀಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಖರೀದಿಸಿದ ಕೊಬ್ಬರಿಯನ್ನು ದಾಸ್ತಾನು ಮಾಡಲು ಹಮಾಲಿಗಳು ಮೂಟೆಗಳನ್ನು ಸಿದ್ಧಪಡಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT