ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ | ಕುಸಿದು ಬಿದ್ದರೆ ಜೀವ ಹಾನಿಯ ಆತಂಕ

Published 31 ಜುಲೈ 2023, 6:11 IST
Last Updated 31 ಜುಲೈ 2023, 6:11 IST
ಅಕ್ಷರ ಗಾತ್ರ

ಜಾನೇಕೆರೆ ಆರ್. ಪರಮೇಶ್‌

ಸಕಲೇಶಪುರ: ಪಟ್ಟಣದ ಹೃದಯ ಭಾಗ ಹಾಗೂ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹೇಮಾವತಿ ಕಾಂಪ್ಲೆಕ್ಸ್‌ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಆರ್‌ಸಿಸಿ ಕಟ್ಟಡದ ಒಳಗೆ ಮಳೆ ನೀರು ಸುರಿಯುತ್ತಿದ್ದು, ಅಲ್ಲಲ್ಲಿ ಸಿಮೆಂಟ್‌ ಕಳಚಿ ಬೀಳುತ್ತಿದೆ. ಕಟ್ಟಡ ಕುಸಿದರೆ ಜೀವಹಾನಿ ಸಂಭವಿಸುವ ಆತಂಕ ಎದುರಾಗಿದೆ.

ಯೂನಿಯನ್‌ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ 50ಕ್ಕೂ ಹೆಚ್ಚು ಅಂಗಡಿ, ಹೋಟೆಲ್‌ಗಳು ಈ ಕಟ್ಟಡದಲ್ಲಿ ವ್ಯವಹಾರ ನಡೆಸುತ್ತಿವೆ. ನಿತ್ಯ ನೂರಾರು ಮಂದಿ ಈ ಕಟ್ಟಡದೊಳಗೆ ವ್ಯಾಪಾರ, ವ್ಯವಹಾರಕ್ಕಾಗಿ ಬಂದು ಹೋಗುತ್ತಾರೆ. ಆದರೆ, ಈ ಕಟ್ಟಡ ಈಗಿರುವ ಸ್ಥಿತಿ ನೋಡಿದವರು ಆತಂಕಗೊಳ್ಳದೇ ಇರಲು ಸಾಧ್ಯವಿಲ್ಲ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಿದ್ದಾರೆ.

ಕತ್ತೆತ್ತಿ ಮೇಲೆ ನೋಡಿದರೆ, ಅಲ್ಲಲ್ಲಿ ಆರ್‌ಸಿಸಿ ಸಿಮೆಂಟ್‌ ಕಿತ್ತು ಹೋಗಿದೆ. ಕಬ್ಬಿಣ ತುಕ್ಕು ಹಿಡಿದು ಜೀವ ಕಳೆದುಕೊಂಡಿದೆ. ಕಟ್ಟಡದ ಒಳಗೆ ಮಳೆ ನೀರು ಸುರಿಯುತ್ತಿರುವುದರಿಂದ ಯೂನಿಯನ್‌ ಬ್ಯಾಂಕ್‌ಗೆ ಹೋಗುವ ಗ್ರಾಹಕರು ಕಟ್ಟಡದೊಳಗೆ ಕೊಡೆ ಹಿಡಿದು ಹೋಗಬೇಕಾಗಿದೆ.

ಈ ಕಟ್ಟಡದ ಬಾಡಿಗೆದಾರರೆಲ್ಲಾ ಹತ್ತಾರು ಬಾರಿ ಪುರಸಭೆಗೆ ಮನವಿ ನೀಡಿದರೂ ದುರಸ್ತಿ ಮಾಡಿಲ್ಲ. ಆತಂಕದಲ್ಲೇ ವ್ಯವಹಾರ ನಡೆಸುತ್ತಿದ್ದೇವೆ.
ರಾಜು ,ಬಾಡಿಗೆದಾರ

ಮೆಟ್ಟಿಲುಗಳಿಗೆ ಹಾಕಿರುವ ಕಬ್ಬಿಣ ತುಕ್ಕು ಹಿಡಿದು ಸಿಮೆಂಟ್‌ ಬಿದ್ದು ಹೋಗುತ್ತಿದೆ. ಗೋಡೆಗಳು ಬಿರುಕು ಬಿಟ್ಟರೆ, ಕೆಲವೆಡೆ ಕುಸಿದು ಪಿಲ್ಲರ್‌ಗಳ ಸಹಾಯದಲ್ಲಿ ಕಟ್ಟಡ ನಿಂತಿದೆ. ಗ್ರಾಹಕರು ಬ್ಯಾಂಕ್‌ ಒಳಗೆ ಬಂದು ಎಷ್ಟು ಬೇಗ ಹೊರ ಹೋಗುತ್ತೇವೆಯೋ ಎಂಬ ಭಯದಲ್ಲಿಯೇ ವ್ಯವಹಾರ ನಡೆಸಬೇಕಾದ ದುಸ್ಥಿತಿಯಲ್ಲಿ ಈ ವಾಣಿಜ್ಯ ಮಳಿಗೆ ಇದೆ.

ಹೋಟೆಲ್‌ ಖಾಲಿ ಮಾಡಿದರು: ಇಡೀ ಕಟ್ಟಡ ಸೋರುತ್ತಿರುವುದರಿಂದ ಎಲ್ಲಿ ಗ್ರಾಹಕರ ಮೇಲೆ ಬಿದ್ದು ಅನಾಹುತ ಸಂಭವಿಸುತ್ತದೆಯೋ ಎಂಬ ಆತಂಕದಿಂದ, ಸುಮಾರು 7 ವರ್ಷಗಳ ಹಿಂದೆಯೇ ಸಾಮ್ರಾಟ್‌ ಹೋಟೆಲ್‌ ಅನ್ನು ಖಾಲಿ ಮಾಡಲಾಗಿತ್ತು. ಇದುವರೆಗೂ ಬೇರೆ ಯಾರೂ ಅಲ್ಲಿ ಹೋಟೆಲ್‌ ಹಾಗೂ ಇನ್ನಿತರ ಉದ್ಯಮ ನಡೆಸುವ ಸಾಹಸಕ್ಕೆ ಹೋಗಲಿಲ್ಲ.

ಇತ್ತೀಚೆಗೆ ಇಡೀ ಕಟ್ಟಡವನ್ನು ಪರಿಶೀಲಿಸಿದ್ದು ಈ ಕಟ್ಟಡದ ಬಗ್ಗೆ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ.
ಡಾ. ಜಯಣ್ಣ, ಪುರಸಭಾ ಮುಖ್ಯಾಧಿಕಾರಿ

ಬ್ಯಾಂಕ್‌ ಬೇರೆಡೆ ಸ್ಥಳಾಂತರಿಸಿ: ಇತ್ತೀಚೆಗಂತೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳಿಗಾಗಿ ನಿತ್ಯ ನೂರಾರು ಮಂದಿ ಗ್ರಾಹಕರು ಯೂನಿಯನ್‌ ಬ್ಯಾಂಕ್‌ಗೆ ಬಂದು ಹೋಗುತ್ತಾರೆ. ಶಿಥಿಲಾವಸ್ಥೆಗೆ ತಲುಪಿರುವ ಕಟ್ಟಡದಲ್ಲಿ ಗ್ರಾಹಕರಿಗೆ ಯಾವುದೇ ಸುರಕ್ಷತೆ ಇಲ್ಲ. ಹಾಗಾಗಿ ಕೂಡಲೇ ಬ್ಯಾಂಕ್‌ ಅನ್ನು ಸುರಕ್ಷಿತವಾಗಿರುವ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.

ದುರಸ್ತಿ ಕಾಣದ ಸಂಕೀರ್ಣ

ನಾಲ್ಕು ದಶಕಗಳ ಹಿಂದೆ ರಂಗಶೆಟ್ಟಿ ಅವರು ಪುರಸಭಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಈ ವಾಣಿಜ್ಯ ಮಳಿಗೆಯನ್ನು ನಿರ್ಮಾಣ ಮಾಡಲಾಗಿದೆ. ನಂತರದ ಪುರಸಭೆ ಆಡಳಿತ ಈವರೆಗೂ ಈ ಕಟ್ಟಡ ದುರಸ್ತಿ ಕಾಮಗಾರಿ ಮಾಡಲಿಲ್ಲ. ನಿತ್ಯ ನೂರಾರು ಮಂದಿ ಬಂದು ಹೋಗುವ ಈ ವಾಣಿಜ್ಯ ಮಳಿಗೆಯಲ್ಲಿ ಸಾರ್ವಜನಿಕ ಶೌಚಾಲಯವೂ ಇಲ್ಲ. ಕಿಟಕಿ ಕಿತ್ತು ಹೋದರೂ ಗಾಜುಗಳು ಪುಡಿಯಾದರೂ ದುರಸ್ತಿ ಮಾಡಿಲ್ಲ. ಕಟ್ಟಡಕ್ಕೆ ಅಡಿಪಾಯವಾಗಿರುವ ಪಿಲ್ಲರ್‌ಗಳ ಕಬ್ಬಿಣದ ರಾಡುಗಳು ತುಕ್ಕು ಹಿಡಿದಿವೆ. ಒಂದೂವರೆ ದಶಕದಿಂದ ಈ ಕಟ್ಟಡ ಸೋರುತ್ತಿದ್ದರೂ ಆರ್‌ಸಿಸಿ ಮೇಲ್ಭಾಗದಲ್ಲಿ ಶೀಟ್‌ ಅಳವಡಿಸುವ ಕೆಲಸ ಮಾಡಲಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಸಕಲೇಶಪುರದ ಹೇಮಾವತಿ ಕಾಂಪ್ಲೆಕ್ಸ್‌ ಕಟ್ಟಡದ ಕಿಟಕಿ ಗಾಜುಗಳು ಪುಡಿಯಾಗಿ ಮಳೆ ನೀರು ಕಟ್ಟಡದೊಳಗೆ ಹರಿಯುತ್ತಿದೆ
ಸಕಲೇಶಪುರದ ಹೇಮಾವತಿ ಕಾಂಪ್ಲೆಕ್ಸ್‌ ಕಟ್ಟಡದ ಕಿಟಕಿ ಗಾಜುಗಳು ಪುಡಿಯಾಗಿ ಮಳೆ ನೀರು ಕಟ್ಟಡದೊಳಗೆ ಹರಿಯುತ್ತಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT