ಗುರುವಾರ , ಜನವರಿ 27, 2022
27 °C
ಶಿಕ್ಷಣ ಸಚಿವರಿಂದ ದ್ವೇಷದ ರಾಜಕಾರಣ; ರೇವಣ್ಣ ಆರೋಪ

ಜ. 18ಕ್ಕೆ ಸಿಎಂ ಕಚೇರಿ ಎದುರು ಧರಣಿ- ಶಾಸಕ ಎಚ್‌.ಡಿ. ರೇವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಹೊಳೆನರಸೀಪುರದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಸೈಕಾಲಜಿ ಮತ್ತು ಫುಡ್‌ ಆಂಡ್‌ ನ್ಯೂಟ್ರಿಷನ್‌ ಸ್ನಾತಕೋತ್ತರ (ಎಂ.ಎಸ್ಸಿ) ಕೋರ್ಸ್‌ ತೆರೆಯಲು ಅನುಮತಿ ನೀಡಲು ಶಿಕ್ಷಣ ಸಚಿವರು ನಿರಾಕರಿಸಿದ್ದು, ಜ. 18ರಂದು ಬೆಳಿಗ್ಗೆ 11 ಗಂಟೆಗೆ ಸಿಎಂ ಕಚೇರಿ ಎದುರು ಏಕಾಂಗಿ ಧರಣಿ ನಡೆಸಲಾಗುವುದು ಎಂದು ಶಾಸಕ ಎಚ್‌.ಡಿ. ರೇವಣ್ಣ ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿಡಿತದಲ್ಲಿದೆ. ಗ್ರಾಮೀಣ ಭಾಗದ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಕಲ್ಲು ಹಾಕುತ್ತಿದೆ. ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ ಮೈಸೂರು ವಿಶ್ವವಿದ್ಯಾಲಯ ಕೋರ್ಸ್‌ಗಳಿಗೆ ಅನುಮತಿ ನೀಡಿದ್ದರೂ ಶಿಕ್ಷಣ ಇಲಾಖೆ ಸಚಿವರು ಅದನ್ನು ನಿರಾಕರಿಸಿದ್ದಾರೆ. ನಿರಾಕರಣೆಗೆ ಕಾರಣವನ್ನೂ ನೀಡದೇ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಡಾ. ಅಶ್ವಥ್‌ ನಾರಾಯಣ್ ಅವರನ್ನು ಉನ್ನತ ಶಿಕ್ಷಣ ಸಚಿವ ಎನ್ನುವುದಕ್ಕೆ ನಾಚಿಕೆ ಆಗುತ್ತದೆ. ಇಂತಹ ಸಚಿವರಿಂದ ಮುಖ್ಯ ಮಂತ್ರಿಗೂ ಅಗೌರವ ಬರಲಿದೆ. ನಮ್ಮ ಕುಟುಂಬದ ಯಾರೂ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆ ಹೊಂದಿಲ್ಲ. ಹೊಳೆನರಸೀಪುರ ಗೃಹ ವಿಜ್ಞಾನ ಕಾಲೇಜಿನಲ್ಲಿ ಓದುತ್ತಿರುವವರು ಬಡ ರೈತರ ಮಕ್ಕಳು, ಅವರ ಶಿಕ್ಷಣಕ್ಕೆ ಇವರು ಕಲ್ಲು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಲೇಜಿನಲ್ಲಿ ಎಲ್ಲಾ ರೀತಿಯ ಸೌರ್ಯಗಳಿವೆ. ಇಂದು ವೇಳೆ ಸರ್ಕಾರದಲ್ಲಿ ಹಣ ಇಲ್ಲದಿದ್ದರೆ ಮೂಲ ಸೌಕರ್ಯಕ್ಕೆ ನನ್ನ ಸಂಬಳದಿಂದಲೇ ಹಣ ನೀಡುತ್ತೇನೆ ಎಂದರು.

ಕೋವಿಡ್‌ ಇರುವ ಕಾರಣ ಮಂಗಳವಾರದ ಧರಣಿಗೆ ಜಿಲ್ಲೆಯ ಯಾವ ಶಾಸಕರನ್ನು ಕರೆಯುವುದಿಲ್ಲ. ಒಬ್ಬನೇ ಹೋಗುತ್ತೇನೆ, ನನ್ನನ್ನು ಬಂಧಿಸುವುದಾದರೆ ಬಂಧಿಸಲಿ ನೋಡೋಣ ಎಂದು ಸವಾಲ್ ಹಾಕಿದರು.

ಹಾಸನ ಎಂಜಿನಿಯರಿಂಗ್ ಕಾಲೇಜಿಗೆ ಕುಮಾರಸ್ವಾಮಿ ಅವರು ₹6 ಕೋಟಿ ಹಣ ಬಿಡುಗಡೆ ಮಾಡಿದ್ದರು, ಅದನ್ನು ಇದುವರೆಗೂ ನೀಡಿರುವುದಿಲ್ಲ. ರಾಜ್ಯ ಇಂದು ಲೂಟಿಕೋರರ ಕೈಗೆ ಸೇರಿದೆ. ಇಂತಹ ಸಚಿವರಿಂದ ಪ್ರಧಾನಿ ಮೋದಿ ಹಾಗೂ ಸಿಎಂ ಗೂ ಅಗೌರವ. ಚಾಣಕ್ಯ ವಿವಿಯಲ್ಲಿ ಸಾಕಷ್ಟು ಲೋಪವಿದ್ದರೂ ಸಿಎಂ ಮನವಿ ಹಿನ್ನೆಲೆ ನಾವು ವಿರೋಧ ವ್ಯಕ್ತಪಡಿಸಲಿಲ್ಲ ಎಂದರು.

ಕಳೆದ 20 ದಿನಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ತರಗತಿಗಳಿಗೆ ಬರುತ್ತಿಲ್ಲ. ಇದರಿಂದ ಪಾಠ ನಡೆಯದೇ ಮಕ್ಕಳು ಬೀದಿ ಪಾಲಾಗಿದ್ದಾರೆ. ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಜೆಡಿಎಸ್‌ ಮುಳುಗಿ ಹೋಗಿದೆ ಎಂದು ಹೇಳುತ್ತಾರೆ. 2023ಕ್ಕೆ ಇವರ ಕಥೆ ಏನಾಗಲಿದೆ ಎಂದು ತೋರಿಸುತ್ತೇವೆ. ಕಾಂಗ್ರೆಸ್‌ ಹಾಗೂ ಬಿಜೆಪಿ ವಿರುದ್ಧ ಹೋರಾಡುತ್ತೇವೆ. ಜಿಲ್ಲೆಯ ವಿಚಾರದಲ್ಲಿ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೂ ಜಿಲ್ಲೆಗೆ ಏನು ನೀಡಲಿಲ್ಲ ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು