ಸೋಮವಾರ, ಆಗಸ್ಟ್ 2, 2021
21 °C
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸೂಚನೆ

ಹಾಸನ: ಕೆರೆ, ಕಲ್ಯಾಣಿ, ಗೋಕಟ್ಟೆ ಅಭಿವೃದ್ಧಿಪಡಿಸಿ- ಸಚಿವ ಕೆ.ಎಸ್. ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ‘ನರೇಗಾ ಯೋಜನೆಯನ್ನು ಬಳಸಿಕೊಂಡು ಕೆರೆ, ಕಲ್ಯಾಣಿ ಹಾಗೂ ಗೋಕಟ್ಟೆಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ಜಲ ಸಂರಕ್ಷಣೆಗೆ ಒತ್ತು ನೀಡಿ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ‘ಜಲಶಕ್ತಿ ಅಭಿಯಾನ’ ಕುರಿತು ಸೋಮವಾರ ವಿಡಿಯೊ ಸಂವಾದ ನಡೆಸಿ ಮಾತನಾಡಿದ ಅವರು, ‘ವಿವಿಧ ಜಲಮೂಲಗಳ ಒತ್ತುವರಿ ತೆರವುಗೊಳಿಸುವ ಜತೆಗೆ ಅವುಗಳನ್ನು ಪುನಶ್ಚೇತನಗೊಳಿಸಿ. ರಾಷ್ಟ್ರೀಯ ಮಹಾತ್ಮ ಗಾಂಧಿ ಯೋಜನೆಯಡಿ ಜಲ ಸಂರಕ್ಷಣೆಗೆ ಸಂಬಂಧಿಸಿದ ಕಾಮಗಾರಿಗಳ ಬಗ್ಗೆ ಶೀಘ್ರ ಅಭಿವೃದ್ಧಿಗೆ ಒತ್ತುನೀಡಿ’ ಎಂದರು.

‘ಕೇಂದ್ರದಿಂದ ರಾಜ್ಯಕ್ಕೆ ನರೇಗಾ ಅಡಿ ಬರುವ ಮೊತ್ತ ₹800 ಕೋಟಿಯಷ್ಟು ಹೆಚ್ಚಾಗಲಿದೆ. ಇದರ ಸದ್ಬಳಕೆ ಮಾಡಿಕೊಂಡು ಉತ್ತಮ ಕಾರ್ಯನಿರ್ವಹಿಸಿ ಎಂದು ಸಚಿವರು ಅಧಿಕಾರಿಗಳಿಗೆ’
ಸೂಚಿಸಿದರು.

‘ಬೇಸಿಗೆ ಅವಧಿಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಗ್ರಾಮಗಳನ್ನು ಗುರುತಿಸಿ. ಜಲ ಸಂರಕ್ಷಣೆ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಿ ಶಾಶ್ವತವಾಗಿ ನೀರಿನ ಭವಣೆ ತಪ್ಪಿಸಲು ಮುತುವರ್ಜಿ ವಹಿಸಿ. ನಗರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ತಡೆಗಟ್ಟಲು ಕ್ರಮ ಕೈಗೊಳ್ಳಿ’ ಎಂದರು.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತಿಕ್ ಮಾತನಾಡಿ, ‘ಜಲಶಕ್ತಿ ಅಭಿಯಾನದಡಿಯಲ್ಲಿ 100 ದಿನಗಳಲ್ಲಿ ಕೈಗೊಳ್ಳುವ ಕಾಮಗಾರಿಗಳ ಬಗ್ಗೆ ಸಮಗ್ರವಾಗಿ ಯೋಜನೆ ತಯಾರಿಸಿ ಗುರಿ ನಿಗದಿಪಡಿಸಿ. ಜೂನ್, ಜುಲೈ ತಿಂಗಳಲ್ಲಿ ಮಳೆ ಪ್ರಾರಂಭವಾಗುತ್ತದೆ ಕೆರೆ, ಕೋಡಿ, ತೂಬುಗಳ ದುರಸ್ತಿಯಂತಹ ಕೆಲಸ ಮಾಡುವ ಮೂಲಕ ಜಲ ಸಂರಕ್ಷಣೆಗೆ ಒತ್ತು ನೀಡಿ. ಕೆರೆಗಳ ಹೂಳೆತ್ತುವುದರ ಜತೆಗೆ ನಾಲೆಗಳ ಸ್ವಚ್ಛತೆಗೂ ಗಮನ ಹರಿಸಬೇಕು’ ಎಂದರು.

ವಿಡಿಯೊ ಸಂವಾದ ಬಳಿಕ ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ‘ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿರುವ 370 ಕೆರೆಗಳ ಸಮಗ್ರ ಅಭಿವೃದ್ಧಿಗೆ ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ ಪರಮೇಶ್ ಮಾತನಾಡಿ, ನರೇಗಾ ಯೋಜನೆಯಡಿ 100 ದಿನಗಳಲ್ಲಿ ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹೇಶ್, ಜಂಟಿ ಕೃಷಿ ನಿರ್ದೇಶಕ ರವಿ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ಹಾಗೂ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು