ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು: ಗಮನಸೆಳೆದ ತೀರ್ಥಂಕರರ ಮಸ್ತಕಾಭಿಷೇಕ

ಜೈನರ ಗುತ್ತಿಯಲ್ಲಿ ಪಂಚಕಲ್ಯಾಣ ಮಹೋತ್ಸವ: ಕಣ್ತುಂಬಿಕೊಂಡ ಭಕ್ತರು
Last Updated 9 ಫೆಬ್ರುವರಿ 2021, 2:18 IST
ಅಕ್ಷರ ಗಾತ್ರ

ಹಳೇಬೀಡು: ಶಿವಪುರ ಕಾವಲಿನ ಕಾಡಂಚಿನ ಬೆಟ್ಟದ ತಪ್ಪಲಿನ ಪ್ರಕೃತಿಯ ಮಡಿಲಿನಲ್ಲಿರುವ ಅಡಗೂರು ಜೈನರ ಗುತ್ತಿಯಲ್ಲಿ ಸೋಮವಾರ ದಿನವಿಡಿ ಸುಶ್ರಾವ್ಯವಾಗಿ ಜಿನಗಾಯನ, ಪುರೋಹಿತರ ಮಂತ್ರ ಘೋಷ ಮೊಳಗಿತ್ತು. ಮಠಾಧೀಶರ ಪ್ರವಚನ ಕೇಳಿ ನೆರೆದಿದ್ದ ಭಕ್ತರು ಮಸ್ತಕದಲ್ಲಿ ಜ್ಞಾನ ತುಂಬಿಕೊಂಡರು.

ನಸುಕಿನಲ್ಲಿ ಧಾರ್ಮಿಕ ವಿಧಾನಗಳು ಆರಂಭವಾಯಿತು. ತೀರ್ಥಂಕರರಾಗುವ ಪೂರ್ವ ಜಿನಬಾಲಕ ಜನ್ಮವತರಣಿ ಮಹೋತ್ಸವ ನಡೆಯಿತು. ನಂತರ 24 ತೀರ್ಥಂಕರರ ಮೂರ್ತಿಗಳನ್ನು ಪಾಂಡುಕ ಶಿಲೆಯ ಮೇಲೆ ಇರಿಸಿ ವಿವಿಧ ದ್ರವ್ಯಗಳಿಂದ ಮಸ್ತಕಾಭಿಷೇಕ ನೆರವೇರಿಸಿದಾಗ ನೆರೆದಿದ್ದ ಜನರು ಭಕ್ತಿ ಪರವಶರಾಗಿದ್ದರು. ಅಭಿಷೇಕ ವೀಕ್ಷಿಸುತ್ತಾ ಮಹಿಳೆಯರು ಜಿನಭಜನೆ ಮಾಡಿದರು.

ತೀರ್ಥಂಕರರ ಜನಿಸಿದ ಅಂದಿನ ಕಾಲದಲ್ಲಿ ನಡೆಸಿದಂತೆ ಜನ್ಮಾಭಿಷೇಕ ಹಾಗೂ ಜನ್ಮಕಲ್ಯಾಣ ಮಹೋತ್ಸವವನ್ನು ವಿವಿಧ ಊರುಗಳಿಂದ ಬಂದಿದ್ದ ಜಿನಭಕ್ತರು ಕಣ್ತುಂಬಿಕೊಂಡರು. ವಾದ್ಯಗೋಷ್ಠಿಯಿಂದ ಕೇಳಿ ಬರುತ್ತಿದ್ದ ಜಿನಗಾಯನವನ್ನು ನೆರೆದಿದ್ದ ಭಕ್ತರು ಆಲಿಸಿ ತಲೆದೂಗಿದರು.

ಸಾನ್ನಿಧ್ಯ ವಹಿಸಿದ್ದ ಜೈನಮುನಿ ವೀರಸಾಗರ ಮಹಾರಾಜರು ಮಾತನಾಡಿ, ‘ಭಕ್ತರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಉದ್ದೇಶದಿಂದ ಪಂಚಕಲ್ಯಾಣ ಮಹೋತ್ಸವ ನಡೆಸಲಾಗುತ್ತದೆ. ಹಲವು ಶತಮಾನದಿಂದ ನಡೆದು ಬಂದ ಜಿನಧರ್ಮದ ಇತಿಹಾಸದ ಮಾಹಿತಿಯೂ ಭಕ್ತರಿಗೆ ಲಭ್ಯವಾಗುತ್ತದೆ. ಪಂಚಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸುವುದರಿಂದ ಮನಸ್ಸು ಪರಿಶುದ್ಧವಾಗುತ್ತದೆ’ ಎಂದರು.

ಸೋಂದಾ ಮಠದ ಪೀಠಾಧ್ಯಕ್ಷ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ‘ಎಲ್ಲರನ್ನೂ ಸಮಾನತೆಯಿಂದ ಕಾಣುವ ಜೈನಧರ್ಮ ವಿಶ್ವಕ್ಕೆ ಅಹಿಂಸೆಯ ಸಂದೇಶವನ್ನು ಸಾರಿದೆ. ತೀರ್ಥಂಕರರು ಹೇಳಿದ ಅಹಿಂಸಾ ತತ್ವ ಭಾರತೀಯ ಸಂಸ್ಕೃತಿಯ ಪ್ರಮುಖ ಸಿದ್ಧಾಂತವಾಗಿದೆ’ ಎಂದರು.

ಜೈನಸಮಾಜ ಮುಖಂಡರಾದ ಹಾಸನದ ಸುದರ್ಶನ್, ಕಡದರವಳ್ಳಿ ದಿವಾಕರ, ಹೊಲಬಗೆರೆ ಜಿನಚಂದ್ರ, ಎ.ಪ್ರಸನ್ನ ಕುಮಾರ್, ಅಡಗೂರು ಶಶಿಕುಮಾರ್, ಬ್ರಹ್ಮದೇವ್, ಬೆಳಗಾವಿಯ ರೇಖಾ ಪಾಟೀಲ, ಎ.ಬ್ರಹ್ಮದೇವ್, ಕೀರ್ತಿಕುಮಾರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT