ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣಬೆಳಗೊಳ: ಕೆರೆಗೆ ಸೇರುತ್ತಿದೆ ಕೊಳಚೆ ನೀರು

ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸಿದ್ದರೂ ತಪ್ಪದ ಸಮಸ್ಯೆ
Last Updated 29 ಜೂನ್ 2022, 2:59 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಪಟ್ಟಣದ 200ಕ್ಕೂ ಹೆಚ್ಚಿನ ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸದ ಕಾರಣ ಕೊಳಚೆ ನೀರು ರಾಚನಹಳ್ಳಿ ಕೆರೆ ಒಡಲು ಸೇರುತ್ತಿದೆ. ಒಳಚರಂಡಿ ಸಂಪರ್ಕ ಪಡೆದಿರುವ ಮನೆಗಳ ಕೊಳಚೆ ನೀರು ಶುದ್ಧೀಕರಣಗೊಂಡು ಅದೇ ಕೆರೆಗೆ ಹರಿಯುತ್ತಿದೆ.

12 ವರ್ಷಗಳಿಗೊಮ್ಮೆ ನಡೆಯುವ ವೈರಾಗ್ಯ ಮೂರ್ತಿ ಬಾಹುಬಲಿ ಮಹಾಮಸ್ತಕಾಭಿಷೇಕದ ಪ್ರಯುಕ್ತ2018ರಲ್ಲಿ ಬಾಹುಬಲಿ ತಾಂತ್ರಿಕ ಕಾಲೇಜು ಹಾಸ್ಟೆಲ್‌ ಸಮೀಪ ಒಂದೂವರೆ ಎಕರೆ ಪ್ರದೇಶದಲ್ಲಿ ₹3 ಕೋಟಿ ವೆಚ್ಚದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ಮಿಸಲಾಗಿತ್ತು. 10 ವರ್ಷಗಳವರೆಗೆ ನಿರ್ವಹಣೆ ಮಾಡುವ ಹೊಣೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ವಹಿಸಲಾಗಿದೆ. ಪಟ್ಟಣದ ಕೊಳಚೆ ನೀರನ್ನು ಶುದ್ಧೀಕರಿಸಿ ರಾಚನಹಳ್ಳಿ ಕೆರೆಗೆ ಹರಿಸಲಾಗುತ್ತಿದೆ.

ಪಟ್ಟಣದಲ್ಲಿ 1,550 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿದ್ದು, ಈ ಪೈಕಿ 1,350 ಮಾತ್ರ ಒಳಚರಂಡಿ ವ್ಯವಸ್ಥೆ ಇದೆ. ಇನ್ನೂ 200 ಮನೆಗಳ ಜತೆಗೆ ಹೊಸದಾಗಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಇಲ್ಲ. ಈ ಭಾಗದ ಕೊಳಚೆ ನೀರು ಚರಂಡಿ ಮೂಲಕ ನೇರವಾಗಿ ರಾಚನಹಳ್ಳಿ ಕೆರೆಗೆ ಹರಿಯುತ್ತಿದ್ದು, ಇದರಿಂದ ಜಲಮೂಲ ಕಲುಷಿತಗೊಳ್ಳುತ್ತಿದೆ. ಸಂಸ್ಕರಣಾ ಘಟಕದಿಂದ ಶುದ್ಧೀಕರಿಸಿದ ನೀರನ್ನು ಪೈಪ್‌ಲೈನ್‌ ಮೂಲಕ ಇದೇ ಕೆರೆಗೆ ಹರಿಸಲಾಗುತ್ತಿದೆ.

ಈ ಕೆರೆಗೆ ಹೊಂದಿಕೊಂಡಂತೆ ಗಂಗಮಾಳಮ್ಮನ ಕೊಪ್ಪಲು ಇದ್ದು, ಇಲ್ಲಿ 16 ಕುಟುಂಬಗಳು ವಾಸಿಸುತ್ತಿವೆ. ಬಾಹುಬಲಿ ತಾಂತ್ರಿಕ ಕಾಲೇಜಿನ ವಸತಿ ನಿಲಯ, ಅಂಗಡಿ– ಮಳಿಗೆಗಳಿವೆ.

‘ಕೆರೆ ನೀರು ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳು ಹೆಚ್ಚಾಗಿದ್ದು, ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಕಾಯಿಲೆಗಳ ಭೀತಿಯಿಂದ ಜೀವನ ಮಾಡುವಂತಾಗಿದೆ’ ಎಂದು ಗಂಗಮಾಳಮ್ಮನ ಕೊಪ್ಪಲಿನ ನಿಂಗನಾಯಕ, ಭದ್ರನಾಯಕ, ಲಕ್ಷ್ಮಮ್ಮ ಅಳಲು ತೋಡಿಕೊಂಡರು.

‘ಪಟ್ಟಣದ ಎಲ್ಲ ಮನೆಗಳಿಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಕೊಳಚೆ ನೀರು ಕೆರೆ ಸೇರದಂತೆ ತಡೆಯ ಬೇಕು. ಜಲಮೂಲವನ್ನು ಸಂರಕ್ಷಿಸ ಬೇಕು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಕೊಳಚೆ ನೀರು ಸಂಸ್ಕರಣಾ ಘಟಕದ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕು’ ಎಂದು ಮಾಜಿ ಸೈನಿಕ ಪುಟ್ಟರಾಜು ಆಗ್ರಹಿಸಿದರು.

‘ಈ ಯೋಜನೆ ಆರಂಭಗೊಂಡ ಸಂದರ್ಭದಲ್ಲೇ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಅನೇಕ ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಿರಲಿಲ್ಲ. ಇದರಿಂದ ಸಮಸ್ಯೆ ಉಂಟಾಗಿದ್ದು, ಇದನ್ನು ಪರಿಹರಿಸುವಂತೆ ಪತ್ರ ಬರೆಯಲಾಗಿದೆ. ಕೆರೆಗೆ ಕಸ–ಕಡ್ಡಿ ಸೇರದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದುಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುರಾಧಾ ಲೋಹಿತ್‌ ತಿಳಿಸಿದರು.

‘ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಬಡಾವಣೆಯಲ್ಲಿ ಫಾಗಿಂಗ್‌ ಮಾಡಲಾಗುವುದು’ ಎಂದು ಪಿಡಿಒ ನಂಜುಂಡೇಗೌಡ ಹೇಳಿದರು.

***

ಕೆರೆಗೆ ಗಲೀಜು ನೀರು ಸೇರಿ ದುರ್ವಾಸನೆ ಬೀರುತ್ತಿದೆ. ಈ ಭಾಗದಲ್ಲಿ ಓಡಾಡಲು ಕಷ್ಟವಾಗುತ್ತಿದೆ. ರೋಗಗಳು ಹರಡದಂತೆ ಕ್ರಮ ಕೈಗೊಳ್ಳಬೇಕು.

–ಎಚ್‌.ಎಂ.ಶಿವಣ್ಣ, ಗುತ್ತಿಗೆದಾರ

***

ಶ್ರವಣಬೆಳಗೊಳಕ್ಕೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಯಾತ್ರಾ ಸ್ಥಳದಲ್ಲಿ ಸ್ವಚ್ಛತೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ.

–ಎಸ್‌.ಆರ್‌.ರಮೇಶ್‌, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT