ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ, ಮನದಲ್ಲಿ ಕನ್ನಡಾಭಿಮಾನ

ಬಿ.ಆರ್. ತೀರ್ಥಂಕರ್ ಅವರ ಮನೆಯಲ್ಲಿ ಹೊರಸೂಸುವ ಕನ್ನಡದ ಕಂಪು
Last Updated 6 ನವೆಂಬರ್ 2020, 4:36 IST
ಅಕ್ಷರ ಗಾತ್ರ

ಬೇಲೂರು: ಬೇಲೂರಿನ ವಾಟಾಳ್ ಎಂದೇ ಕರೆಯಲ್ಪಡುವ, ಡಾ.ರಾಜಕುಮಾರ್ ಸಂಘದ ಅಧ್ಯಕ್ಷ ಬಿ.ಆರ್. ತೀರ್ಥಂಕರ್ ಅವರು ಕನ್ನಡ ಭಾಷೆ ಮೇಲಿನ ಪ್ರೀತಿಯನ್ನು ತಮ್ಮ ಕನಸಿನ ಮನೆಗೆ ಧಾರೆ ಎರೆದಿದ್ದಾರೆ.

ಇಲ್ಲಿನ ಪಪ್ಲಿಬೀದಿಯಲ್ಲಿ 2018ರಲ್ಲಿ ನಿರ್ಮಿಸಿದ ಮನೆಗೂ ಕನ್ನಡದ ಕಂಪನ್ನು ಮೂಡಿಸಿದ್ದಾರೆ. ‘ಕನ್ನಡಿಗನ ಕನಸಿನ ಕಟ್ಟಡ’ ಎಂದು ನಾಮಕರಣ ಮಾಡಿದ್ದಾರೆ. ಮನೆಗೆ ಅಳವಡಿಸಿರುವ ನಾಮಫಲಕದಲ್ಲಿ ಡಾ.ರಾಜ್ ಅವರ ಭಾವಚಿತ್ರವನ್ನು ಅಚ್ಚು ಹಾಕಿಸಿದ್ದಾರೆ. ಮನೆಗೆ ಪ್ರವೇಶಿಸಿದಾಕ್ಷಣ ‘ನಮಸ್ತೆ ಕನ್ನಡ ಅಭಿಮಾನಿ ದೇವರುಗಳಿಗೆ’ ಎನ್ನುವ ಫಲಕ, ಮುಂದೆ ಸಾಗಿದರೆ ಮನೆಯ ಗೋಡೆಯ ಮೇಲೆ ‘ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು’, ‘ಕನ್ನಡ ಒಂದು ಭಾಷೆ ಅಲ್ಲ; ಅದೊಂದು ಶಕ್ತಿ’, ‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ’ ಎಂಬ ನುಡಿಗಳು ಕಂಡು ಬರುತ್ತವೆ.

ಮನೆಯ ನಾಲ್ಕನೇ ಅಂತಸ್ತಿನಲ್ಲಿ ಕನ್ನಡ ಧ್ವಜವನ್ನು ಹಾರಿಸಿದ್ದಾರೆ. ವರ್ಷದ 365 ದಿನಗಳಲ್ಲೂ ಈ ಧ್ವಜ ಹಾರುತ್ತಿರುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಈ ಧ್ವಜವನ್ನು ಬದಲಾಯಿಸುತ್ತಾರೆ.

ಮುಖ್ಯರಸ್ತೆಯಲ್ಲಿ ವ್ಯಾಪಾರಿ ಮಳಿಗೆಯನ್ನೂ ಹೊಂದಿರುವ ತೀರ್ಥಂಕರ್‌ 35 ವರ್ಷಗಳಿಂದ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2006ರಿಂದ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕನ್ನಡ ನೆಲ, ಜಲ, ನಾಡು, ನುಡಿಗೆ ಚ್ಯುತಿ ಬಂದಾಗ ವಿಶೇಷ ಹಾಗೂ ವಿಭಿನ್ನ ಶೈಲಿಯಲ್ಲಿ ಹೋರಾಟಕ್ಕಿಳಿಯುತ್ತಾರೆ. ತಮ್ಮ ದ್ವಿಚಕ್ರ ವಾಹನಕ್ಕೂ ಕೆಂಪು ಮತ್ತು ಹಳದಿ ಬಣ್ಣವನ್ನು ಹೊಡೆಸಿಕೊಂಡಿದ್ದು, ಬೈಕ್ ಮೇಲೆ ಕನ್ನಡಾಭಿಮಾನದ ವಿವಿಧ ನುಡಿಗಟ್ಟುಗಳನ್ನು ಬರೆಸಿಕೊಂಡಿದ್ದಾರೆ. ತಮ್ಮ ಅಂಗಡಿ ನಾಮಫಲಕವನ್ನು ಕೆಂಪು, ಹಳದಿ ಬಣ್ಣದಲ್ಲಿ ಬರೆಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ದಿನದಂದು ಮಾರಾಟ ಮಾಡುವ ರೈತರ ಸಲಕರಣೆಗಳನ್ನು ಕೆಂಪು, ಹಳದಿಯಿಂದ ಕಂಗೊಳಿಸುವಂತೆ ಮಾಡಿದ್ದರು.

ಕನ್ನಡ ಸಾಹಿತ್ಯ ಪರಿಷತ್‌ತಾಲ್ಲೂಕು ಘಟಕ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಇವರಿಗೆ ತಾಲ್ಲೂಕು ಆಡಳಿತದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ತಾಲ್ಲೂಕಿನ ಹಲವಾರು ಸಂಘ ಸಂಸ್ಥೆಗಳು ಅಭಿನಂದಿಸಿವೆ.

***

ಕನ್ನಡ ಕನ್ನಡಿಗರ ಉಸಿರಾಗಬೇಕು. ಎಲ್ಲರೂ ಕನ್ನಡದಲ್ಲೇ ವ್ಯವಹರಿಸಬೇಕು. ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಿಗರು ಮುಂದಾಗಬೇಕು.

-ಬಿ.ಆರ್.ತೀರ್ಥಂಕರ್, ಕನ್ನಡಾಭಿಮಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT