ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಸಿಬ್ಬಂದಿ ನೇಮಕಕ್ಕೆ ಕಾದಿರುವ ಪಶು ಆಸ್ಪತ್ರೆಗಳು

ಕಂಗೆಟ್ಟಿರುವ ರೈತರಿಗೆ ಹೈನುಗಾರಿಕೆಯೇ ಆಸರೆ; ಪಶು ವೈದ್ಯರ ಕೊರತೆ; ಜಾನುವಾರು ಚಿಕಿತ್ಸೆಗೂ ಪರದಾಟ
Last Updated 28 ನವೆಂಬರ್ 2022, 7:32 IST
ಅಕ್ಷರ ಗಾತ್ರ

ಹಾಸನ: ಅತಿವೃಷ್ಟಿ, ಅನಾವೃಷ್ಟಿ, ಬೆಳೆ ಹಾನಿಯ ಸಂಕಷ್ಟದ ನಡುವೆ ಬಹುತೇಕರೈತರಿಗೆ ಹೈನೋದ್ಯಮವು ಉಪಕಸುಬಾಗಿದೆ. ಇದರಿಂದಲೇ ಹಲವು ಕುಟುಂಬಗಳ ಜೀವನ ನಿರ್ವಹಣೆ ನಡೆಯುತ್ತಿದೆ. ಆದರೆ, ಜಿಲ್ಲೆಯ ಪಶು ಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಹಾಗೂ ಮೂಲಸೌಕರ್ಯಗಳಿಲ್ಲದೇ ರೈತಾಪಿ ಜನರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ.

ಜಿಲ್ಲೆಯು ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಪಶುಗಳ ಆರೋಗ್ಯ ಹಾಗೂ ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸುವ ನಿಟ್ಟಿನಲ್ಲಿಪಶು ಆಸ್ಪತ್ರೆಗಳು ಮುಖ್ಯ ಪಾತ್ರ ವಹಿಸುತ್ತವೆ. ಪಶು ವೈದ್ಯರ ಪಾತ್ರ ಹೆಚ್ಚಿದೆ. ಜಿಲ್ಲೆಯ ಕೇಂದ್ರ ಸ್ಥಾನ, ತಾಲ್ಲೂಕು, ಹೋಬಳಿ ಸೇರಿ ಒಟ್ಟು 221 ಪಶು ಆಸ್ಪತ್ರೆಗಳಿದ್ದು, 500 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ‌. ಬಹುತೇಕ ಆಸ್ಪತ್ರೆ ಗಳಲ್ಲಿ ಪಶು ವೈದ್ಯರ ಕೊರತೆ ಹೆಚ್ಚಿದೆ.

ಇತ್ತೀಚೆಗೆ ಕಾಲುಬಾಯಿ, ಚರ್ಮಗಂಟು ರೋಗ ಲಕ್ಷಣಗಳ ಕಾರಣ ಪಶುಗಳ ಆರೋಗ್ಯದಲ್ಲಿ ಏರುಪೇರು ಹಾಗೂ ಕೆಲ ಹಸುಗಳು ಕಾಯಿಲೆಗೆ ತುತ್ತಾಗಿ ಸಾವಿಗೀಡಾಗಿರುವ ಪ್ರಕರಣಗಳು ದಾಖಲಾಗಿವೆ. ಇಂತಹ ಸಂದರ್ಭದಲ್ಲಿ ಪಶು ವೈದ್ಯರ ಅಗತ್ಯತೆ ಹೆಚ್ಚಿದ್ದು, ಖಾಲಿ ಇರುವ ವೈದ್ಯರ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ರೈತ ಮುಖಂಡ ನವೀನ್‌ ಕುಮಾರ್ ಒತ್ತಾಯಿಸಿದ್ದಾರೆ.

ಜಿಲ್ಲೆಯ ಬಹುತೇಕ ತಾಲ್ಲೂಕಿನಲ್ಲಿ ಪಶು ವೈದ್ಯರ ಕೊರತೆ ಇದ್ದು, 20ಕ್ಕೂ ಹೆಚ್ಚು ವೈದ್ಯರು ಇರಬೇಕಾದ ಸ್ಥಳದಲ್ಲಿ ಕೇವಲ 2–3 ವೈದ್ಯರು ಕೆಲಸ ಮಾಡುತ್ತಿದ್ದಾರೆ‌. ಸಿಬ್ಬಂದಿ ಕೊರತೆಯೂ ಹೆಚ್ಚಾಗಿ ಕಾಡುತ್ತಿದೆ.

ಇದೀಗ ಸರ್ಕಾರದಿಂದ ಒದಗಿಸಿರುವ 9 ಮೊಬೈಲ್ ಕ್ಲಿನಿಕ್ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ಇರುವುದು ಸಹಕಾರಿಯಾಗಿದೆ.

ಜಿಲ್ಲೆಯಲ್ಲಿ ಚರ್ಮಗಂಟು ರೋಗ ಹಾಗೂ ಕಾಲುಬಾಯಿ ರೋಗ ಹತೋಟಿಗೆ ಅಗತ್ಯ ಲಸಿಕೆ ಮತ್ತು ಔಷಧಿಗಳ ಪೂರೈಕೆ ಇದ್ದು, ಇದುವರೆಗೆ ಶೇ 60ರಷ್ಟು ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಚರ್ಮಗಂಟು ಕಾಯಿಲೆಯ ಗಂಭೀರ ಸಮಸ್ಯೆಗಳು ಕಂಡು ಬಂದಿಲ್ಲ.

ಜಾವಗಲ್‌ನ ಪಶು ಆಸ್ಪತ್ರೆಯಲ್ಲಿ ಒಡೆದ ಕಿಟಕಿಯ ಗಾಜುಗಳು, ಬಿರುಕು ಬಿಟ್ಟ ಗೋಡೆಗಳು, ಶಿಥಿಲಗೊಂಡ ಕಟ್ಟಡ ಕಾಣುತ್ತಿದೆ. ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳಿಗೆ ಹಾಗೂ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ 15 ವರ್ಷಗಳ ಹಿಂದೆ ಗ್ರಾಮದ ಸಂತೆ ಮೈದಾನದ ಬಳಿ ಪಶು ಆಸ್ಪತ್ರೆ ನಿರ್ಮಿಸಲಾಗಿತ್ತು.

ಈ ವರ್ಷ ಮಳೆ ಹೆಚ್ಚಾದ ಕಾರಣ ಆಸ್ಪತ್ರೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವೈದ್ಯರು ಹಾಗೂ ಸಿಬ್ಬಂದಿ ಆತಂಕದಲ್ಲಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ.

ಜಾವಗಲ್ ಹೋಬಳಿಯ ವ್ಯಾಪ್ತಿಯಲ್ಲಿ 1 ಪಶು ಆಸ್ಪತ್ರೆ, 2 ಪಶು ಚಿಕಿತ್ಸಾಲಯ, 4 ಪ್ರಾಥಮಿಕ ಪಶು ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, 13 ಕಾಯಂ ಸಿಬ್ಬಂದಿ ಮತ್ತು ಹೊರಗುತ್ತಿಗೆ ಆಧಾರದ ಮೇಲೆ 6 ಮಂದಿ ಡಿ ದರ್ಜೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಬಿ.ಆರ್. ಆನಂದ್ ಅವರನ್ನು ಒಳಗೊಂಡಂತೆ ಸಿಬ್ಬಂದಿ, ರೈತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಸಕಾಲದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ರೈತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಆಲೂರು ತಾಲ್ಲೂಕಿನಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಗಳು, ಸಿಬ್ಬಂದಿ ಕೊರತೆಯಿಂದ ನಲಗುತ್ತಿವೆ. ಆಲೂರು, ಕಣತೂರು, ಮಡಬಲು, ಪಾಳ್ಯ, ಕೆ.ಹೊಸಕೋಟೆ, ರಾಯರಕೊಪ್ಪಲು, ಹಂಚೂರು, ದೊಡ್ಡಕಣಗಾಲು, ಚಿನ್ನಳ್ಳಿ, ಕುಂದೂರು ಮತ್ತು ಗಂಜಿಗೆರೆ ಸೇರಿದಂತೆ 12 ಪಶು ವೈದ್ಯಕೀಯ ಸಂಸ್ಥೆಗಳಿವೆ.

ಇವುಗಳಲ್ಲಿ ಆಲೂರು, ಕೆ. ಹೊಸಕೋಟೆ ಕೇಂದ್ರಗಳಲ್ಲಿ ಪಶು ಆಸ್ಪತ್ರೆ, 5 ಕೇಂದ್ರಗಳಲ್ಲಿ ಪಶು ಚಿಕಿತ್ಸಾಲಯ, 5 ಪ್ರಾಥಮಿಕ ಪಶು ಚಿಕಿತ್ಸಾಲಯಗಳಿವೆ. 53 ಸಿಬ್ಬಂದಿ ಪೈಕಿ, 12 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. 15 ಡಿ ದರ್ಜೆ ನೌಕರರಿಗೆ ಕೇವಲ ಇಬ್ಬರು ನೌಕರರು ಇದ್ದಾರೆ. ಹೊರ ಗುತ್ತಿಗೆ ಆಧಾರದಲ್ಲಿ 6 ಜನ ಕೆಲಸ ಮಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ 259 ಗ್ರಾಮಗಳಿದ್ದು, 2020ರ ಗಣತಿಯಂತೆ ಸುಮಾರು 37 ಸಾವಿರ ಜಾನುವಾರುಗಳು, 2 ಸಾವಿರ ಕುರಿ, ಮೇಕೆಗಳು, ಒಂದು ಲಕ್ಷದಷ್ಟು ಫಾರಂ ಕೋಳಿಗಳಿವೆ. ಹೈನುಗಾರಿಕೆ ಪ್ರಚಲಿತವಾಗಿರುವುದರಿಂದ ಪ್ರತಿ
ಗ್ರಾಮದಲ್ಲೂ ಜಾನುವಾರುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಸರ್ಕಾರದ ನಿಯಮದಂತೆ 2,500 ಜಾನುವಾರುಗಳಿಗೆ ಒಂದು ಘಟಕ ತೆರೆಯಬೇಕು. ಮಡಬಲು, ಭರತೂರು ಕೇಂದ್ರಗಳಿಗೆ ಸಿಬ್ಬಂದಿ ನೇಮಕವಾಗಿಲ್ಲ. ಕೆ.ಹೊಸಕೋಟೆ ಕೇಂದ್ರದಲ್ಲಿ ಇರುವವರು ಒಂದು ವಾರದಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ.

ಹಳೇಬೀಡಿನ ಪಶು ಸೇವಾ ಮತ್ತು ಸಂಗೋಪನಾ ಇಲಾಖೆ ಹಸುಗಳ ಕೃತಕ ಗರ್ಭಧಾರಣೆಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಕೆಎಂಎಫ್‌ನಿಂದಲೂ ಕೃತಕ ಗರ್ಭಧಾರಣೆ ನಡೆಯುತ್ತಿರುವುದ
ರಿಂದ ಹೈನುಗಾರಿಕೆ ನಡೆಸುವವರಿಗೆ ತೊಂದರೆ ಆಗುತ್ತಿಲ್ಲ ಎಂಬ ಮಾತು ಜನರಿಂದ ಕೇಳಿ ಬಂತು.

ಅಪ್ಪಗೌಡನಹಳ್ಳಿ, ಹುಲ್ಲೇನಹಳ್ಳಿ ಹಾಗೂ ಕಲ್ಲುಶೆಟ್ಟಿಹಳ್ಳಿ ಮೊದಲಾದ ರಾಜನಶಿರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು, ಚಿಕ್ಕಮಗಳೂರು ಜಿಲ್ಲೆಯ ಗಡಿ ಅಂಚಿನಲ್ಲಿವೆ. ಈ ಗ್ರಾಮಗಳಿಗೆ ಹಳೇಬೀಡಿನ ಪಶು ಆಸ್ಪತ್ರೆ ದೂರದಲ್ಲಿದೆ. ಇಲ್ಲಿಯ ರೈತರು ಆಡು, ಕುರಿಗಳನ್ನು ಹಳೇಬೀಡು ಸಾಗಿಸಿಕೊಂಡು ಬಂದು ಚಿಕಿತ್ಸೆ ಕೊಡಿಸುವುದು ಕಷ್ಟವಾಗುತ್ತಿದೆ. ಗ್ರಾಮ ಪಂಚಾಯಿತಿ ಕೇಂದ್ರ ರಾಜನಶಿರಿಯೂರು ಗ್ರಾಮದಲ್ಲಿ ಪಶು ಆಸ್ಪತ್ರೆ ಆರಂಭಿಸಬೇಕು ಎಂಬುದು ಇಲ್ಲಿನ ಜನರ ಬೇಡಿಕೆಯಾಗಿದೆ.

ಒಬ್ಬ ವೈದ್ಯರಿಗೆ 3–4 ಕಡೆ ನಿಯೋಜನೆ

ಅರಕಲಗೂಡು ತಾಲ್ಲೂಕಿನಲ್ಲಿ 25 ಪಶು ಆಸ್ಪತ್ರೆಗಳಿದ್ದು, ಎಲ್ಲವೂ ಸ್ವಂತ ಕಟ್ಟಡ ಹೊಂದಿವೆ. ಚಿಕಿತ್ಸೆಗೆ ಅಗತ್ಯವಾದ ಪರಿಕರ, ಔಷಧಗಳೂ ಇವೆ. ಆದರೆ, ಚಿಕಿತ್ಸೆ ನೀಡಬೇಕಾದ ವೈದ್ಯರು ಮತ್ತು ಸಿಬ್ಬಂದಿ ಮಾತ್ರ ಇಲ್ಲ.

ತಾಲ್ಲೂಕು ಕೇಂದ್ರದಲ್ಲಿ ಕೋಟ್ಯಂತರ ಹಣ ವೆಚ್ಚ ಮಾಡಿ ಪಶು ಇಲಾಖೆ ಪಾಲಿಕ್ಲಿನಿಕ್ ತೆರೆದಿದೆ. ಉಪ ನಿರ್ದೇಶಕರು, ತಜ್ಞ ವೈದ್ಯರ ನೇಮಕ ಮಾಡಿಲ್ಲ. ಬೆಳವಾಡಿ ಗ್ರಾಮದ ಪಶು ವೈದ್ಯರು ಇಲ್ಲಿ ಚಿಕಿತ್ಸೆಗಾಗಿ ನಿಯೋಜನೆ ಗೊಂಡಿದ್ದು, ಇಬ್ಬರು ಸಹಾಯಕರು ಮಾತ್ರ ಇದ್ದಾರೆ.

ತಾಲ್ಲೂಕಿನ 25 ಪಶು ಆಸ್ಪತ್ರೆಗಳಲ್ಲಿ ರಾಮನಾಥಪುರ, ಬೆಳವಾಡಿ, ಎಬಿಎಂ ಹಳ್ಳಿ, ಸಂತೆ ಮರೂರು, ವಿಜಾಪುರ ಅರಣ್ಯ ಗ್ರಾಮ ಸೇರಿದಂತೆ 5 ಆಸ್ಪತ್ರೆಗಳಲ್ಲಿ ಮಾತ್ರ ಪಶು ವೈದ್ಯರಿದ್ದಾರೆ. ಒಬ್ಬ ವೈದ್ಯರನ್ನು 3 ರಿಂದ 4 ಆಸ್ಪತ್ರೆಗಳ ಮೇಲ್ವಿಚಾರಣೆಗೆ ನಿಯೋಜನೆ ಮಾಡಲಾಗಿದೆ.

ವೈದ್ಯರ ಕೊರತೆ ಕಾರಣ ರೈತರ ಜಾನುವಾರುಗಳಿಗೆ ವ್ಯವಸ್ಥಿತವಾದ ಚಿಕಿತ್ಸೆ ದೊರಕದಂತಾಗಿದೆ. ಹವಾಮಾನ ವೈಪರೀತ್ಯದಿಂದ ಕಂಗೆಟ್ಟಿರುವ ರೈತರನ್ನು ಕೈಹಿಡಿದಿರುವುದು ಹೈನುಗಾರಿಕೆ. ಹತ್ತಾರು ಸಾವಿರ ಹಣ ತೆತ್ತು ತಂದ ಜಾನುವಾರುಗಳಿಗೆ ಅನಾರೋಗ್ಯ ಕಾಣಿಸಿಕೊಂಡಾಗ ಸೂಕ್ತ ಚಿಕಿತ್ಸೆಯೂ ದೊರಕದಂತಹ ಪರಿಸ್ಥಿತಿ ಎದುರಾಗಿದೆ. ಕೂಡಲೇ ಅಗತ್ಯ ಪ್ರಮಾಣದ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.

ಪಶು ಆಸ್ಪತ್ರೆ ನಿರ್ಮಾಣ

‘ನನ್ನ ತಂದೆ ಸೋಮಶೇಖರಪ್ಪ ಜಾನುವಾರು ಪ್ರಿಯರಾಗಿದ್ದರು. ತಾಯಿ ಶಂಕರಮ್ಮ ತಂದೆಗೆ ಬೆನ್ನೆಲುಬಾಗಿದ್ದರು. ಸರ್ಕಾರ ಮಾಯಗೊಂಡನಹಳ್ಳಿ ಪಶು ಆಸ್ಪತ್ರೆ ಮಂಜೂರು ಮಾಡಿದಾಗ ಕುಟುಂಬದವರೆಲ್ಲ ಸೇರಿ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದೇವೆ’ ಎಂದು ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು.

ರಾಜ್ಯದಾದ್ಯಂತ ಪಶು ವೈದ್ಯರ ಕೊರತೆ ಇದೆ. ಮುಂದಿನ ತಿಂಗಳು ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ.

-ಎ.ಟಿ.ರಾಮಸ್ವಾಮಿ, ಶಾಸಕ

ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಸಂತೋಷ್‌ ಸಿ.ಬಿ., ಜಿ. ಚಂದ್ರಶೇಖರ್‌, ಎಚ್‌.ಎಸ್‌. ಅನಿಲ್‌ ಕುಮಾರ್‌, ದೀಪಕ್‌ ಶೆಟ್ಟಿ, ಹರೀಶ್‌ ಎಂ.ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT