ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ಕಾಡಾನೆಗಳ ಜಲಕ್ರೀಡೆ: ಸ್ಥಳೀಯರಿಗೆ ಹೆಚ್ಚಿದ ಆತಂಕ

ಕೆರೆಯಲ್ಲಿ ಈಜಾಡಿದ ಬಳಿಕ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದ ಗಜಪಡೆ
Published : 11 ಸೆಪ್ಟೆಂಬರ್ 2024, 5:20 IST
Last Updated : 11 ಸೆಪ್ಟೆಂಬರ್ 2024, 5:20 IST
ಫಾಲೋ ಮಾಡಿ
Comments

ಹಾಸನ: ಕಾಡಾನೆಗಳ ಹಿಂಡು ಮಂಗಳವಾರ ಬೆಳಿಗ್ಗೆ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದ ತಾವರೆಕೆರೆಯಲ್ಲಿ ಪ್ರತ್ಯಕ್ಷವಾಗಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಕೆರೆಯಲ್ಲಿ ಜಲಕ್ರೀಡೆ ಆಡಿವೆ.

ಮರಿಗಳು ಸೇರಿ ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಜಲಕ್ರೀಡೆ ಆಡುತ್ತಿರುವ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ‌. ಕೆರೆಯಲ್ಲಿ ಈಜಾಡಿ ಬಳಿಕ ಕಾಫಿ ತೋಟದೊಳಗೆ ಆನೆಗಳು ತೆರಳಿವೆ.

3–4 ದಿನಗಳಿಂದ ಬಿಕ್ಕೋಡು ಗ್ರಾಮದ ಸುತ್ತಮುತ್ತ ಕಾಡಾನೆಗಳ ಹಿಂಡು ಸಂಚರಿಸುತ್ತಿದ್ದು, ಕಾಫಿ, ಬಾಳೆ, ಭತ್ತ, ಶುಂಠಿ ಬೆಳೆಗಳನ್ನು ನಾಶ ಮಾಡಿವೆ‌ ಎಂದು ಸ್ಥಳೀಯ ರೈತರು ಹಾಗೂ ಕಾಫಿ ಬೆಳೆಗಾರರು ಆರೋಪಿಸಿದ್ದಾರೆ.

ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದ ಓಡಾಡುವಂತೆ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ ಸೂಚನೆ ನೀಡಿದ್ದಾರೆ‌.

ಕಾಡಾನೆಗಳ ಭಯದಿಂದ ಕಾಫಿ ತೋಟಕ್ಕೆ ತೆರಳಲು ಕಾರ್ಮಿಕರು ಹಾಗೂ ಮಾಲೀಕರು ಹಿಂದೇಟು ಹಾಕುತ್ತಿದ್ದು, ಸ್ಥಳದಲ್ಲೇ ಇಟಿಎಫ್ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ. ಗಜಪಡೆಯ ಚಲನವಲನದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡುತ್ತಿದ್ದಾರೆ. ಸದ್ಯ ಆಗಿರುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ‌.

ನಿಲ್ಲದ ಕಾಡಾನೆ ಉಪಟಳ: ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ರೈತರು ಹಾಗೂ ಕಾಫಿ ಬೆಳೆಗಾರರು ತೊಂದರೆಗೆ ಸಿಲುಕಿದ್ದಾರೆ.

ಪ್ರತಿದಿನ ಒಂದಲ್ಲ ಒಂದು ಕಡೆ ದಾಳಿ ಮಾಡುತ್ತಿರುವ ಕಾಡಾನೆಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟ ಮಾಡುತ್ತಿವೆ. ಕಾಡಿನಲ್ಲಿ ಎತ್ತಿನಹೊಳೆ ಸೇರಿದಂತೆ ಇತರೆ ಕಾಮಗಾರಿಗಳು ನಡೆಯುತ್ತಿದ್ದು, ಹೇಮಾವತಿ ಜಲಾಶಯದಲ್ಲಿ ಹಿನ್ನೀರು ಹೆಚ್ಚಾಗಿದೆ. ಇದರಿಂದಾಗಿ ನಾಡಿನತ್ತ ಮುಖ ಮಾಡಿರುವ ಕಾಡಾನೆಗಳಿಂ ತೊಂದರೆ ಅನುಭವಿಸುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.

ಆನೆ ಕಾರಿಡಾರ್ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಬೇಡಿಕೆ ಇದ್ದರೂ ಅನುಷ್ಠಾನ ಮಾಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಆನೆ ದಾಳಿಯಿಂದ ಮೃತರಾದ ಕುಟುಂಬಗಳಿಗೆ ಪರಿಹಾರ ವಿತರಣೆ ಹಾಗೂ ಬೆಳೆ ನಷ್ಟಕ್ಕೆ ಅಲ್ಪ ಸ್ವಲ್ಪ ಪರಿಹಾರ ನೀಡುವ ಮೂಲಕ ಸರ್ಕಾರಗಳು ಕೈತೊಳೆದುಕೊಳ್ಳುತ್ತಿದೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈತರು ಹಾಗೂ ಕಾಫಿ ಬೆಳೆಗಾರರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT