ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | 19 ವರ್ಷ ಸೇವೆ: ಸೈನಿಕನಿಗೆ ಅದ್ಧೂರಿ ಸ್ವಾಗತ

Published 5 ಆಗಸ್ಟ್ 2024, 16:08 IST
Last Updated 5 ಆಗಸ್ಟ್ 2024, 16:08 IST
ಅಕ್ಷರ ಗಾತ್ರ

ಹಾವೇರಿ: ಸೇನೆಯಲ್ಲಿ 19 ವರ್ಷ ಸುದೀರ್ಘ ಸೇವೆ ಸಲ್ಲಿಸಿ ತವರಿಗೆ ವಾಪಸ್ಸಾದ ಮಂಜಪ್ಪ ನಾಗಪ್ಪ ಬಡಗೌಡ್ರ ಅವರನ್ನು ಸೋಮವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಸೇವೆಯಿಂದ ನಿವೃತ್ತರಾಗಿ ನಗರಕ್ಕೆ ಸೋಮವಾರ ಬೆಳಿಗ್ಗೆ ಆಗಮಿಸಿದ ಮಂಜಪ್ಪ ಅವರನ್ನು ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು, ಆರತಿ ಮಾಡಿ ಸ್ವಾಗತಿಸಿದರು. ಹೂವಿನ ಹಾರ ಹಾಕಿ, ದೇಶ ಸೇವೆಯನ್ನು ಕೊಂಡಾಡಿದರು. ಬಳಿಕ, ಹೊಸಮನಿ ವೃತ್ತದಿಂದ ತೆರೆದ ಜೀಪಿನಲ್ಲಿ ಮಂಜಪ್ಪ ಅವರನ್ನು ನಗರದ ಹಲವು ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ತೆರೆದ ಜೀಪಿಗೆ ರಾಷ್ಟ್ರಧ್ವಜ ಕಟ್ಟಿ, ಅದ್ದೂರಿಯಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ಮೆರವಣಿಗೆಯುದ್ದಕ್ಕೂ ರಾಷ್ಟ್ರ ಪ್ರೇಮದ ಘೋಷಣೆಗಳು ಮೊಳಗಿದವು. ಮಾರುಕಟ್ಟೆ ಪ್ರದೇಶ, ಗಾಂಧಿ ವೃತ್ತ ಹಾಗೂ ಇತರೆ ರಸ್ತೆಗಳಲ್ಲಿ ಸಂಚರಿಸಿದ ಮೆರವಣಿಗೆ, ಶಿವಾಜಿನಗರದ 3ನೇ ಕ್ರಾಸ್‌ನಲ್ಲಿರುವ ಮಂಜಪ್ಪ ಮನೆ ಬಳಿ ಸಮಾಪ್ತಗೊಂಡಿತು. ಮಂಜಪ್ಪ ಅವರ ಕೈ ಕುಲುಕಿ, ತಬ್ಬಿಕೊಂಡು ಸ್ನೇಹಿತರು ಹಾಗೂ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದರು. ನಂತರ, ಮಂಜಪ್ಪ ಹಾಗೂ ಅವರ ಪತ್ನಿ ಗೀತಾ ಅವರನ್ನು ಸನ್ಮಾನಿಸಲಾಯಿತು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಮಂಜಪ್ಪ, ‘19 ವರ್ಷ ದೇಶ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ಸೇರಿ, ಸೇವೆ ಮುಂದುವರಿಸುವ ಕನಸಿದೆ’ ಎಂದರು.

‘ಸವಣೂರು ತಾಲ್ಲೂಕಿನ ಕಡಕೋಳ ಗ್ರಾಮದ ನಾನು, ದ್ವಿತೀಯ ಪಿಯುಸಿವರೆಗೂ ಓದಿದ್ದೇನೆ. ಸೇನೆ ಸೇರಬೇಕೆಂದು ಆರು ಬಾರಿ ಪ್ರಯತ್ನಿಸಿ ವಿಫಲನಾಗಿದ್ದೆ. ಏಳನೇ ಬಾರಿ ಸೇನೆ ಸೇರಲು ಅರ್ಹನಾದೆ. 2005ರ ಡಿಸೆಂಬರ್ 28ರಂದು ನೇಮಕಾತಿ ಆಯಿತು. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಒಂದು ವರ್ಷ ತರಬೇತಿ ಪಡೆದು, ಗುಜರಾತ್‌ನ ಜಾಮನಗರದಲ್ಲಿ ಮೋಟಾರ್ ವೆಹಿಕಲ್ (ಎಂ.ಟಿ) ವಿಭಾಗದಲ್ಲಿ ವೃತ್ತಿ ಆರಂಭಿಸಿದೆ’ ಎಂದು ಅವರು ಹೇಳಿದರು.

‘ಜಮ್ಮು ಮತ್ತು ಕಾಶ್ಮೀರ್‌ದಲ್ಲಿ ರಾಷ್ಟ್ರೀಯ ರೈಫಲ್‌ನಲ್ಲಿ ಎರಡು ವರ್ಷ ಕೆಲಸ ಮಾಡಿದೆ. ನಂತರ, ಜಾಮನಗರಕ್ಕೆ ವಾಪಸು ಬಂದೆ. ಅಲ್ಲಿಂದ, ರಾಜಸ್ಥಾನದ ಭರತಪುರ, ಲೋಧಿಯಾನಾದಲ್ಲಿ ಕೆಲಸ ಮಾಡಿದೆ. ಲೇಹ ಲಡಾಕ್‌ನಲ್ಲಿ ಎಂಟು ತಿಂಗಳು ಇದ್ದೆ. ಬಳಿಕ, ಲೋಧಿಯಾನಾಗೆ ವಾಪಸು ಬಂದೆ. ಕೊನೆಯಲ್ಲಿ ಒಡಿಶಾದಲ್ಲಿ ಕೆಲಸ ಮಾಡಿ, ಈಗ ನಿವೃತ್ತನಾಗಿದ್ದೇನೆ’ ಎಂದು ಅವರು ತಮ್ಮ ಸೇವಾನುಭದ ಬಗ್ಗೆ ಮಾಹಿತಿ ನೀಡಿದರು.

‘ಇಂದಿನ ಯುವಕರು ಹೆಚ್ಚೆಚ್ಚು ಸೇನೆ ಸೇರಬೇಕು. ದೇಶಪ್ರೇಮ ಬೆಳೆಸಿಕೊಳ್ಳಬೇಕು. ಸೇನೆ ಸಹ ಸೈನಿಕರಿಗೆ ಎಲ್ಲ ಸವಲತ್ತು ನೀಡುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT