ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜಿಲ್ಲೆಯಲ್ಲಿ 399 ಶತಾಯುಷಿ ಮತದಾರರು!

ಮೊದಲ ಬಾರಿಗೆ ಹಕ್ಕು ಚಲಾಯಿಸಲಿರುವ 31,318 ಯುವಕ ಯುವತಿಯರು
Last Updated 1 ಏಪ್ರಿಲ್ 2023, 12:29 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 12.91 ಲಕ್ಷ ಮತದಾರರಿದ್ದು, ಅವರಲ್ಲಿ 399 ಮಂದಿ ಶತಾಯುಷಿ (ನೂರು ವರ್ಷ ತುಂಬಿದ) ಮತದಾರರಿರುವುದು ವಿಶೇಷವಾಗಿದೆ.

ಹಾನಗಲ್‌ ವಿಧಾನಸಭಾ ಕ್ಷೇತ್ರದಲ್ಲಿ 92, ಶಿಗ್ಗಾವಿಯಲ್ಲಿ 87, ಹಾವೇರಿಯಲ್ಲಿ 110, ಬ್ಯಾಡಗಿಯಲ್ಲಿ 46, ಹಿರೇಕೆರೂರಿನಲ್ಲಿ 53 ಹಾಗೂ ರಾಣೆಬೆನ್ನೂರು ಕ್ಷೇತ್ರದಲ್ಲಿ 11 ಶತಾಯುಷಿ ಮತದಾರರಿದ್ದು, ಚುನಾವಣಾ ಅಭ್ಯರ್ಥಿಗಳ ಹಣೆಬರಹ ಬರೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟವರು 32,043 ಹಿರಿಯ ಮತದಾರರಿದ್ದಾರೆ. 80ರಿಂದ 89 ವರ್ಷದೊಳಗೆ 25,880, 90ರಿಂದ 99 ವರ್ಷದೊಳಗೆ 5,764 ಮತದಾರರಿದ್ದಾರೆ.

22 ಸಾವಿರ ಅಂಗವಿಕಲ ಮತದಾರರು:

ಜಿಲ್ಲೆಯಲ್ಲಿ 6,60,270 ಪುರುಷ ಮತದಾರರು, 6,30,879 ಮಹಿಳಾ ಮತದಾರರು, 45 ಇತರೆ ಸೇರಿದಂತೆ ಒಟ್ಟು 12,91,194 ಮತದಾರರಿದ್ದಾರೆ. 592 ಲಿಂಗತ್ವ ಅಲ್ಪಸಂಖ್ಯಾತರು, 22,297 ಅಂಗವಿಕಲರು, 909 ಸೇವಾ ಮತದಾರರು ಈ ಬಾರಿ ಮತದಾನ ಮಾಡಲಿದ್ದಾರೆ.

2,25,074 ಮತದಾರರನ್ನು ಹೊಂದಿರುವ ರಾಣೆಬೆನ್ನೂರು ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. 1,84,534 ಮತದಾರರನ್ನು ಹೊಂದಿರುವ ಹಿರೇಕೆರೂರು ಅತಿ ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರ ಎನಿಸಿದೆ.

ಮತಗಟ್ಟೆಗಳ ವಿವರ:

ಹಾನಗಲ್‌–239, ಶಿಗ್ಗಾವಿ–238, ಹಾವೇರಿ (ಮೀಸಲು)– 257, ಬ್ಯಾಡಗಿ– 242, ಹಿರೇಕೆರೂರು– 229, ರಾಣೆಬೆನ್ನೂರು– 266 ಮತಕೇಂದ್ರಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1471 ಮತಕೇಂದ್ರಗಳನ್ನು ತೆರೆಯಲಾಗುತ್ತದೆ. ಅವುಗಳಲ್ಲಿ 18 ದುರ್ಬಲ ಕೇಂದ್ರಗಳು ಹಾಗೂ 321 ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.

ಶೇ 90ರಷ್ಟು ಮತದಾನವಾದ ಹಾಗೂ ಒಬ್ಬರೇ ಅಭ್ಯರ್ಥಿಗೆ ಶೇ 75ಕ್ಕಿಂತ ಹೆಚ್ಚು ಮತದಾನವಾದ ಮತಗಟ್ಟೆಗಳನ್ನು ‘ಸೂಕ್ಷ್ಮ ಮತಗಟ್ಟೆ’ ಎಂದು ಪರಿಗಣಿಸಲಾಗಿದೆ. ಚುನಾವಣೆಗೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುವುದು. 2804 ಬ್ಯಾಲೆಟ್ ಯುನಿಟ್‌, 1965 ಕಂಟ್ರೋಲ್ ಯುನಿಟ್ ಹಾಗೂ 2126 ವಿವಿಪ್ಯಾಟ್ ಲಭ್ಯವಿವೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

31 ಸಾವಿರ ಯುವ ಮತದಾರರು:

ಹಾವೇರಿ ಜಿಲ್ಲೆಯಲ್ಲಿ 31,384 ಯುವ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಹೊಸ ಮತದಾರರ ನೋಂದಣಿಗೆ ಜಿಲ್ಲಾಡಳಿತ ಪ್ರಾಮುಖ್ಯತೆ ನೀಡಿದ ಪರಿಣಾಮ ಹೆಚ್ಚು ಯುವಕ–ಯುವತಿಯರು ನೋಂದಣಿ ಮಾಡಿಕೊಂಡು ಮತದಾನದ ಪುಳಕ ಅನುಭವಿಸಲು ಕಾತರರಾಗಿದ್ದಾರೆ.

2023ರ ಏಪ್ರಿಲ್‌ 1ಕ್ಕೆ 2,725 ಯುವಕ– ಯುವತಿಯರು 18 ವರ್ಷ ಪೂರೈಸಲಿದ್ದು, ಮತದಾನದ ಹಕ್ಕು ಪಡೆಯಲಿದ್ದಾರೆ. ಈಗಾಗಲೇ ಇವರಿಂದ ಅರ್ಜಿಗಳನ್ನು ಮುಂಗಡವಾಗಿ ಜಿಲ್ಲಾಡಳಿತ ಸ್ವೀಕರಿಸಿದ್ದು, ಮತದಾನಕ್ಕೆ ಅವಕಾಶ ಕಲ್ಪಿಸಲು ಕ್ರಮ ಕೈಗೊಂಡಿದೆ.

80 ವರ್ಷ ದಾಟಿದವರಿಗೆ ಮನೆಯಿಂದಲೇ ಮತದಾನ

‘80 ವರ್ಷ ದಾಟಿದವರು, ಅಂಗವಿಕಲರು, ಅಗತ್ಯ ಸೇವೆಯ ಉದ್ಯೋಗಸ್ಥರು ಹಾಗೂ ಕೋವಿಡ್‌ ಬಾಧಿತರು ಅಂಚೆ ಮತದಾನ (ಮನೆಯಿಂದಲೇ ಮತ ಚಲಾಯಿಸಲು ಅವಕಾಶ) ಮಾಡಲು ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.

ಅಂಚೆ ಮತಪತ್ರದ ಹಕ್ಕು ಚಲಾಯಿಸಲು ಬಯಸುವವರು ‘ನಮೂನೆ 12ಡಿ’ಯಲ್ಲಿ ಅಗತ್ಯವಿರುವ ಎಲ್ಲ ವಿವರಗಳನ್ನು ನಿಡಬೇಕು. ಮತದಾನದ ದಿನಾಂಕಕ್ಕಿಂತ 5 ದಿನಗಳ ಮೊದಲು ಚುನಾವಣಾ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಅಂಗವಿಕಲರು ನಮೂನೆ12ಡಿ ಜತೆಗೆ ಅಸಾಮರ್ಥ್ಯದ ಪ್ರಮಾಣ ಪತ್ರ ಸಲ್ಲಿಸಬೇಕು.

ಒಂದು ಮತಗಟ್ಟೆ ತಂಡವು ಇಬ್ಬರು ಅಧಿಕಾರಿಗಳನ್ನು ಒಳಗೊಂಡಿದ್ದು, ವಿಡಿಯೊಗ್ರಾಫರ್‌ ಹಾಗೂ ಭದ್ರತಾ ಸಿಬ್ಬಂದಿಯ ಜತೆಗೆ ಮತದಾರನ ಮನೆಗೆ ತೆರಳಿ ಅಂಚೆ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT