ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳುಬಿದ್ದ ಗೋಡೆಗಳ ಗ್ರಾಮವೇ ‘ಗೋಡಿಹಾಳ’

Published 24 ಸೆಪ್ಟೆಂಬರ್ 2023, 3:17 IST
Last Updated 24 ಸೆಪ್ಟೆಂಬರ್ 2023, 3:17 IST
ಅಕ್ಷರ ಗಾತ್ರ

ಗೋಡಿಹಾಳ (ತುಮ್ಮಿನಕಟ್ಟಿ): ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕುಪ್ಪೇಲೂರು ಹೋಬಳಿಗೆ ಸೇರಿದ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನೂರು ಮನೆಗಳಿರುವ ಒಂದು ಪುಟ್ಟ ಗ್ರಾಮ ಗೋಡಿಹಾಳ. ಇದು ಕುಮದ್ವತಿ ನದಿಯ ತಟದಲ್ಲಿದೆ.

ಇದೊಂದು ಕೃಷಿ ಕಸುಬು ನೆಚ್ಚಿಕೊಂಡಿರುವ ಗ್ರಾಮ. ಹಲವು ಕೃಷಿಕರು ಬೀಜೋತ್ಪಾದನೆಯ ಕೃಷಿಯಲ್ಲಿ ತೊಡಗಿದ್ದಾರೆ. ಉಪ ಕಸುಬಾಗಿ ಹೈನುಗಾರಿಕೆಗೆ ಆದ್ಯತೆ ನೀಡಿದ್ದಾರೆ. ಕುಟುಂಬದ ಎಲ್ಲ ಸದಸ್ಯರೂ ಉದ್ಯೋಗಕ್ಕೆ ಕೈಜೋಡಿಸುವ ಮೂಲಕ ದುಡಿಮೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಈ ಹಿಂದೆ 13 ಸಾವಿರ ಜನರು ವಾಸ ಮಾಡುತ್ತಿದ್ದ ಗ್ರಾಮ ಇದಾಗಿದೆ. ಇದರ ಮೊದಲ ಹೆಸರು ಹನುಮಸಾಗರ ಎಂಬುದು ಗ್ರಾಮಸ್ಥರ ಅಭಿಮತವಾಗಿದೆ. ಆಗ ಪ್ಲೇಗ್, ಸಿಡುಬು, ಕಾಲರಾದಂಥ ಸಾಂಕ್ರಾಮಿಕ ರೋಗಗಳಿಗೆ ತುತ್ತಾದ ಜನ ಗ್ರಾಮ ತೊರೆದು ವಲಸೆ ಹೋದರು. ಮನೆಗಳು ಖಾಲಿಯಾಗಿ, ಗೋಡೆಗಳು ಪಾಳು ಬಿದ್ದ ಕಾರಣ ಪ್ರಸ್ತುತ ಗ್ರಾಮಕ್ಕೆ ಗೋಡಿಹಾಳ ಎಂಬ ಹೆಸರು ಬಂದಿದೆ ಎಂಬುದು ಗ್ರಾಮದ ಹಿರಿಯರ ಅಭಿಪ್ರಾಯ.

‘ಚೌಡೇಶ್ವರಿ ದೇವಿಯ ಹೆಸರಿನಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ಜಾತ್ರೆ ನೆರವೇರುತ್ತದೆ. ಹಿಂದೂ, ಮುಸ್ಲಿಂ ಸೇರಿ ಜಾತಿ, ಭೇದವಿಲ್ಲದೆ ಸಾಮರಸ್ಯ ಭಾವದೊಂದಿಗೆ ಒಟ್ಟಾಗಿ ಭಕ್ತಿ, ಶ್ರದ್ಧೆಯಿಂದ ಮೋಹರಂ ಆಚರಿಸುತ್ತೇವೆ. ಯುಗಾದಿ, ಪಂಚಮಿ, ಉರುಸು ಹಾಗೂ ದಸರಾ ಉತ್ಸವಗಳನ್ನು ಸಂಭ್ರಮದಿಂದ ಆಚರಿಸುತ್ತೇವೆ’ ಎನ್ನುತ್ತಾರೆ ಹೂವನಗೌಡ ಪಾಟೀಲ.

ಗ್ರಾಮದ ಪೂರ್ವ ದಿಕ್ಕಿನಲ್ಲಿ ಮುಸುಗಿನಹಳ್ಳ, ದಕ್ಷಿಣದಲ್ಲಿ ಕುಮದ್ವತಿ ನದಿ ಸುತ್ತುವರೆದ ಪರಿಣಾಮವಾಗಿ ಜಾಗದ ಕೊರತೆ ಎದುರಾಗಿದೆ. ಹೀಗಾಗಿ ವಸತಿ ರಹಿತ ಬಡವರಿಗೆ ನಿವೇಶನ ದೊರೆಯುತ್ತಿಲ್ಲ. ಗ್ರಾಮದ ಅರಣ್ಯ ಭೂಮಿ ಹಾಗೂ ಗೋಮಾಳ 7 ಎಕರೆ ಇದ್ದು, ಹಿಂದೂ, ಮುಸ್ಲಿಂ ಜನಾಂಗದವರಿಗೆ ಪ್ರತ್ಯೇಕ ಸ್ಮಶಾನ ವ್ಯವಸ್ಥೆ ಕಲ್ಪಿಸಲಾಗಿದೆ.

ಭಕ್ತರ ಕಾಮಧೇನು: ಧಾರ್ಮಿಕ ವೈಶಿಷ್ಟ್ಯ ಹೊಂದಿದೆ. ಜನ, ಮನ ಸೆಳೆಯುವ ಆಂಜನೇಯಸ್ವಾಮಿ ಭಕ್ತರ ಪಾಲಿನ ಕಾಮಧೇನುವಾಗಿದ್ದಾನೆ. ಮಳೆ, ಬೆಳೆ, ನೆಮ್ಮದಿ ಹಾಗೂ ಸಂತಾನ ಭಾಗ್ಯದ ಪ್ರಾಪ್ತಿಗಾಗಿ ಜನ ಸ್ವಾಮಿಯ ಮೊರೆ ಹೋಗುತ್ತಾರೆ. ರಾಮನ ಪರಮಭಕ್ತ ಹನುಮಂತನೇ ಗ್ರಾಮದ ರಕ್ಷಕ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಗ್ರಾಮದ ಚೌಡೇಶ್ವರಿ ದೇವಸ್ಥಾನದ ಬಳಿ ಕುಮದ್ವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ಯಾರೇಜ್ ಸ್ಥಳೀಯ ರೈತರ ಪಾಲಿಗೆ ವರದಾನವಾಗಿದೆ. ಕುಡಿಯುವ ನೀರಿಗೆ ತೊಂದರೆ ಇಲ್ಲದಂತಾಗಿದೆ.

17ನೇ ಶತಮಾನದ ಶಾಸನಗಳು

ಗ್ರಾಮದ ಹೃದಯ ಭಾಗದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ಬಳಿ 17ನೇ ಶತಮಾನದ 2 ಶಾಸನಗಳಿವೆ. ಗೋಡಿಹಾಳ ಗ್ರಾಮವನ್ನು ರಾಮಚಂದ್ರ ದೇವರಿಗೆ ಗ್ರಾಮದಾನ ಮಾಡಿದ್ದನ್ನು ಒಂದು ಶಾಸನ ಹೇಳಿದರೆ ಇನ್ನೊಂದು ಶಾಸನ ಕಂಬಾಳಯ್ಯನಿಗೆ ದಾನ ಮಾಡಿದ ಕುರಿತು ಉಲ್ಲೇಖಿಸುತ್ತದೆ. ಇಲ್ಲಿಯ ಆಂಜನೇಯಸ್ವಾಮಿ ದೇವಸ್ಥಾನ ಮತ್ತು ಸತ್ಯ ಪ್ರಮೋದತೀರ್ಥ ಸ್ಥಾಯಿ ಗುರು ಸತ್ಯತೀರ್ಥಸ್ವಾಮಿ ಮಠ ಪ್ರಾಚೀನ ಕಾಲಕ್ಕೆ ಸೇರಿವೆ. ಆದರೆ ಪ್ರಸ್ತುತ ಇಲ್ಲಿ ಯಾವುದೇ ಮಠ ಇಲ್ಲ. ಮಠಕ್ಕೆ ಸೇರಿದ 16 ಗುಂಟೆ ಜಾಗದ ನಾಲ್ಕು ಮೂಲೆಗಳಲ್ಲಿ 4 ಲಿಂಗಮುದ್ರೆ ಕಲ್ಲುಗಳು ಇರುವುದು ಕಂಡು ಬರುತ್ತದೆ. ಈಗ ಇದು ಜನವಸತಿ ಪ್ರದೇಶವಾಗಿದೆ ಎಂದು ಹಿರಿಯ ಮುಖಂಡ ವಸಂತರಡ್ಡಿ ಸಣ್ಣಪ್ಪನವರ ತಿಳಿಸಿದರು.

ಗೋಡಿಹಾಳ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಬಳಿ ಕುಮದ್ವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ಯಾರೇಜ್
ಗೋಡಿಹಾಳ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಬಳಿ ಕುಮದ್ವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ಯಾರೇಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT