ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೆರೂರು: ಲಾಭ ತಂದ ‘ಸ್ಮಾರ್ಟ್’ ಸೇವಂತಿಗೆ ಕೃಷಿ

30 ಗುಂಟೆ ಜಮೀನಿನಲ್ಲಿ 140 ಬಲ್ಬ್‌ಗಳನ್ನು ಹಾಕಿ ಕೃತಕ ಹಗಲು ಸೃಷ್ಟಿ
Published 25 ಮಾರ್ಚ್ 2024, 8:17 IST
Last Updated 25 ಮಾರ್ಚ್ 2024, 8:17 IST
ಅಕ್ಷರ ಗಾತ್ರ

ಹಿರೇಕೆರೂರು: ಕೃಷಿಯಲ್ಲಿ ಏನಾದರೂ ಹೊಸತನ ತರಬೇಕು ಎನ್ನುವ ಹಂಬಲದಿಂದ ವಿವಿಧ ಕೃಷಿ ವಿಶ್ವವಿದ್ಯಾಲಯಗಳಿಗೆ ಅಲೆದಾಡಿ ತಜ್ಞರಿಂದ ಮಾಹಿತಿ ಪಡೆದುಕೊಂಡು ಸೇವಂತಿಗೆ ಹೂ ಕೃಷಿಯಲ್ಲಿ ಸ್ಮಾರ್ಟ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ ರೈತ ಹನುಮಂತಪ್ಪ ದೊಡ್ಡೇರಿ. ಇದರಿಂದ ಪ್ರತಿ ದಿನ ₹ 15 ಸಾವಿರ ಆದಾಯ ಗಳಿಸುತ್ತಿದ್ದಾರೆ.

ತಾಲ್ಲೂಕಿನ ನೀಡನೇಗಿಲು ಗ್ರಾಮದ ಯುವ ರೈತ ಹನುಮಂತಪ್ಪ ದೊಡ್ಡೇರಿ 30 ಗುಂಟೆ ಜಮೀನಿನಲ್ಲಿ ಸೆಂಟ್ ಯಲೋ ತಳಿಯ ಸೇವಂತಿಗೆ ಬೆಳೆದಿದ್ದಾರೆ. ಈ ತಳಿಯ ವಿಶೇಷವೆಂದರೆ ಗಿಡದಿಂದ ಹೂ ಕಟಾವು ಮಾಡಿದ ನಂತರ ಸುಮಾರು ನಾಲ್ಕು ದಿನಗಳ ಕಾಲ ಬಾಡದೇ ಇರುವುದು. ಹೀಗಾಗಿ ಇದಕ್ಕೆ ಸಾಕಷ್ಟು ಬೇಡಿಕೆ ಇದೆ. ಚಿಕ್ಕಬಳ್ಳಾಪುರದ ಲೈಟಿಂಗ್ ಕೃಷಿ ಬಗ್ಗೆ ಹೆಚ್ಚು ಆಕರ್ಷಿತರಾದ ಹನುಮಂತಪ್ಪ ಅಕ್ಟೋಬರ್ ತಿಂಗಳಲ್ಲಿ ಸೇವಂತಿಗೆ ಬೆಳೆದಿದ್ದಾರೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಬೆಳೆಯುವ ಈ ತಳಿಗೆ ಕೃತಕ ಹಗಲು ಸೃಷ್ಟಿಸಬೇಕಾಗುತ್ತದೆ.

ಸೇವಂತಿಗೆ ಸಸಿ ನಾಟಿ ಮಾಡಿದ ನಂತರ ಸುಮಾರು 40 ದಿನಗಳ ಕಾಲ ಜಮೀನಿನಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಿ ಈ ಸಸಿಗಳಿಗೆ ದಿನಕ್ಕೆ ನಾಲ್ಕು ಗಂಟೆ ಕೃತಕವಾಗಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಪುಷ್ಪಗಳ ಗಾತ್ರ ಸಹ ಅಧಿಕವಾಗಿದ್ದು ಹೆಚ್ಚಿನ ಲಾಭ ಪಡೆದಿದ್ದಾರೆ.

ಕೃತಕ ಹಗಲು ಸೃಷ್ಟಿ: 30 ಗುಂಟೆ ಜಮೀನಿನ ಸುಮಾರು 9 ವ್ಯಾಟ್‌ನ 140 ಬಲ್ಬ್‌ಗಳನ್ನು ಹಾಕಿ ಕೃತಕ ಹಗಲು ಸೃಷ್ಟಿಸಿದ್ದಾರೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ರಾತ್ರಿ ಹೆಚ್ಚು ಮತ್ತು ಹಗಲು ಕಡಿಮೆ ಇರುತ್ತದೆ. ಹೀಗಾಗಿ ಈ ದಿನಗಳಲ್ಲಿ ರಾತ್ರಿ ಐದು ಗಂಟೆ ಕೃತಕ ಹಗಲು ಸೃಷ್ಟಿಸುವುದರಿಂದ ಸೇವಂತಿಗೆ ಸಸಿಗಳು ಹೆಚ್ಚು ಟಿಸಿಲುಗಳಾಗುತ್ತವೆ. ಹೆಚ್ಚು ಟಿಸಿಲುಗಳಾಗುವುದರಿಂದ ಹೆಚ್ಚು ಮೊಗ್ಗುಗಳು ಬರುತ್ತವೆ. ಅಲ್ಲದೇ ಹೆಚ್ಚು ಹೂಗಳೂ ಅರಳುತ್ತವೆ.

ಕೆ.ಜಿ.ಗೆ ₹ 150ರಂತೆ ಮಾರಾಟ: ಸೇವಂತಿಗೆ ಸುಮಾರು ಆರು ತಿಂಗಳ ಬೆಳೆಯಾಗಿದೆ. ಒಂದು ಬಾರಿ ಹೂ ಬಿಡಲು ಆರಂಭಿಸಿದರೆ 50 ದಿನಗಳ ಕಾಲ ಹೂ ಪಡೆಯಬಹುದು. ಸೆಂಟ್ ಯಲೋ ಪುಷ್ಪಕ್ಕೆ ಸಾಕಷ್ಟು ಬೇಡಿಕೆ ಇದೆ. ಒಂದು ಕೆ.ಜಿ.ಗೆ ₹ 150 ದರವಿದೆ. ಪ್ರತಿ ದಿನ ಒಂದು ಕ್ವಿಂಟಲ್ ಸೇವಂತಿಗೆ ಹೂಗಳು ಇವರ ಜಮೀನಿನಲ್ಲಿ ಸಿಗುತ್ತದೆ. ಇದರಿಂದ ದಿನಕ್ಕೆ ₹ 15 ಸಾವಿರ ಆದಾಯ ಬರುತ್ತಿದ್ದು ಅದರಲ್ಲಿ ಕೆಲಸಗಾರರ ಹಾಗೂ ಸಾಗಣೆ ಖರ್ಚು ತೆಗೆದು ನಿತ್ಯ ₹ 13 ಸಾವಿರ ನಿವ್ವಳ ಲಾಭ ಗಳಿಸುತ್ತಿದ್ದಾರೆ.

ಮೆಕ್ಕೆಜೋಳ, ಶೇಂಗಾ, ಹತ್ತಿ ಸೇರಿದಂತೆ ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು ಕೃಷಿಯಲ್ಲಿನ ಹೊಸ ಆವಿಷ್ಕಾರಗಳನ್ನು ರೈತರು ಅಳವಡಿಸಿಕೊಳ್ಳಬೇಕು. ಇದರಿಂದ ರೈತರು ಹೆಚ್ಚು ಲಾಭ ಗಳಿಸಬಹುದು ಎಂದು ಜ್ಯೋತಿ ದೊಡ್ಡೇರಿ ‘ಪ್ರಜಾವಾಣಿ’ಗೆ ಹೇಳಿದರು.

ಹಿರೇಕೆರೂರು ತಾಲ್ಲೂಕಿನ ನೀಡನೇಗಿಲು ಗ್ರಾಮದಲ್ಲಿ ಸ್ಮಾರ್ಟ್ ಕೃಷಿಯ ಮೂಲಕ ಹನುಮಂತಪ್ಪ ದೊಡ್ಡೇರಿ ಸೇವಂತಿಗೆ ಬೆಳೆದಿದ್ದಾರೆ
ಹಿರೇಕೆರೂರು ತಾಲ್ಲೂಕಿನ ನೀಡನೇಗಿಲು ಗ್ರಾಮದಲ್ಲಿ ಸ್ಮಾರ್ಟ್ ಕೃಷಿಯ ಮೂಲಕ ಹನುಮಂತಪ್ಪ ದೊಡ್ಡೇರಿ ಸೇವಂತಿಗೆ ಬೆಳೆದಿದ್ದಾರೆ
140 ಬಲ್ಬ್‌ಗಳನ್ನು ಹಾಕಿ ಕೃತಕ ಹಗಲು ಸೃಷ್ಟಿ ಸ್ಮಾರ್ಟ್ ಪುಷ್ಪಕೃಷಿಯತ್ತ ವಾಲಿರುವ ರೈತ ಪ್ರತಿದಿನ ₹ 15 ಸಾವಿರ ಆದಾಯ
6 ತಿಂಗಳಲ್ಲಿ ₹ 5 ಲಕ್ಷ ಆದಾಯ
‘ಹಾವೇರಿ ಜಿಲ್ಲೆಯಲ್ಲಿ ಸೇವಂತಿಗೆಯನ್ನು ಲೈಟ್ ಹಾಕಿ ಬೆಳೆದ ಪ್ರಥಮ ರೈತ ನಾನೇ. ಈ ಲೈಟ್ ಕೃಷಿ ಸ್ಥಳೀಯ ರೈತರಿಗೆ ಆಶ್ಚರ್ಯ ತಂದಿದೆ. ರೈತರು ಸಂಪ್ರದಾಯಿಕ ಬೆಳೆಗಳಿಂದ ಹೊರಬರಬೇಕು. ಬೇರೆ ಬೇರೆ ರೀತಿಯ ಕೃಷಿ ಮಾಡಬೇಕು. ಈ ಕೃಷಿ ಆರು ತಿಂಗಳ ಕಾಲಾವಧಿ ಹೊಂದಿದೆ. 30 ಗುಂಟೆ ಜಮೀನಿನಲ್ಲಿ ಆರು ತಿಂಗಳಲ್ಲಿ ₹ 5 ಲಕ್ಷ ಆದಾಯ ಗಳಿಸಿದ್ದೇನೆ’ ಎಂದು ಯುವ ರೈತ ಹನುಮಂತಪ್ಪ ದೊಡ್ಡೇರಿ ‘ಪ್ರಜಾವಾಣಿ’ಗೆ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT